ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೇಟ್ ವಿನ್ಯಾಸಕ್ಕೆ ಅನುಮೋದನೆ: ತಂಗಡಗಿ

ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋದ ಗೇಟ್‌ ತಯಾರಿಸುವ ಕಾರ್ಯ ಚುರುಕು
Published : 13 ಆಗಸ್ಟ್ 2024, 14:34 IST
Last Updated : 13 ಆಗಸ್ಟ್ 2024, 14:34 IST
ಫಾಲೋ ಮಾಡಿ
Comments

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಮುರಿದು ಹೋಗಿರುವ 19ನೇ ಗೇಟ್‌ ತಯಾರಿಸುವ ಕಾರ್ಯ ಚುರುಕು ಪಡೆದುಕೊಂಡಿದೆ. ಈಗಿನ ವಿನ್ಯಾಸಕ್ಕೆ ತುಂಗಭದ್ರಾ ಮಂಡಳಿ ಅನುಮತಿಯೂ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ತಾಲ್ಲೂಕಿನ ಬಸಾಪುರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಜಲಾಶಯದಲ್ಲಿ ಏನೇ ಕೆಲಸ ಮಾಡಬೇಕಾದರೂ ಮಂಡಳಿಯ ಅನುಮತಿ ಅಗತ್ಯವಾಗಿದ್ದು, ಈಗಾಗಲೇ ನಡೆದಿರುವ ಮಂಡಳಿಯ ಸಭೆಯಲ್ಲಿ ಗೇಟ್‌ ವಿನ್ಯಾಸಕ್ಕೆ ಅನುಮೋದನೆ ಲಭಿಸಿದೆ’ ಎಂದರು. 

‘ಗೇಟ್‌ ಅಳವಡಿಕೆ ಹಾಗೂ ಜಲಾಶಯದಲ್ಲಿಯೇ ನೀರು ಉಳಿಸುವಿಕೆ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಜ್ಞರು ಹಾಗೂ ಎಂಜಿನಿಯರ್‌ಗಳ ಜೊತೆ ಈಗಾಗಲೇ ಚರ್ಚಿಸಲಾಗಿದೆ. ಗೇಟ್‌ ತಯಾರಾದ ಬಳಿಕ ಅಳವಡಿಕೆ ಕೆಲಸ ಆರಂಭವಾಗಲಿದೆ. ಜಲಾಶಯ ಗೇಟ್‌ ಅಳವಡಿಕೆ ಮತ್ತು ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ಇಲ್ಲಿನ ಜಲಾಶಯದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೆಲಸ ಆರಂಭವಾದ ಮೇಲೆ ಜಲಾಶಯದ ಮೇಲೆ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎನ್ನುವ ಸಲಹೆಯನ್ನು ಅವರು ನೀಡಿದ್ದಾರೆ. ಇದನ್ನು ಪಾಲಿಸಲಾಗುವುದು’ ಎಂದು ತಿಳಿಸಿದರು.  

‘ಜಲಾಶಯದ ಗೇಟಿಗೆ 4 ಅಡಿ ಎತ್ತರ ಮತ್ತು 64 ಅಡಿ ಅಗಲದ ದಪ್ಪವಾದ ಕಬ್ಬಿಣದ ಹಲಗೆ ಬಿಟ್ಟು ನೀರು ನಿಲ್ಲಿಸುವ ಪ್ರಯತ್ನ ಮಾಡಲಾಗುವುದು. ಇದೇ 17ರಂದು ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಅಷ್ಟಗೊಳಗೆ ಕೆಲಸ ಮುಗಿಸಲಾಗುವುದು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಲಾಗುವುದು. ಸದ್ಯಕ್ಕೆ ನೀರು ನಿಲ್ಲಿಸುವ ಕೆಲಸಕ್ಕೆ ಆದ್ಯತೆ’ ಎಂದು ಹೇಳಿದರು.

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ‘ನೀರಿನೊಳಗೆ ಶಟರ್ಸ್‌ಗಳನ್ನು ಹೇಗೆ ಹೊಂದಾಣಿಕೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ. ಮುಂಬರುವ ದಿನಗಳಲ್ಲಿ ಜಲಾಶಯ ಆಧುನೀಕರಣಕ್ಕೆ ಮಂಡಳಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಾಶಯದ ಗೇಟ್‌ ಪರಿಶೀಲಿಸಿ ರೈತರಿಗೆ ನಮ್ಮ ಸರ್ಕಾರದಿಂದ ತೊಂದರೆಯಾಗಲು ಎನ್ನುವ ಭರವಸೆ ನೀಡಿದರು.

ಈ ವೇಳೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್‌ಖಾನ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ಕೆ.ರಾಜಶೇಖರ ಹಿಟ್ನಾಳ್, ಈ.ತುಕಾರಾಮ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಎಚ್‌.ಆರ್‌. ಗವಿಯಪ್ಪ, ಶ್ರೀನಿವಾಸ ಎನ್.ಟಿ., ಕೃಷ್ಣ ನಾಯ್ಕ, ಸಂಸದೆ ಲತಾ ಮಲ್ಲಿಕಾರ್ಜುನ, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಣೆಕಟ್ಟಿನ ಎಡಭಾಗದಲ್ಲಿ ನಿಷೇಧಾಜ್ಞೆ ಜಾರಿ

ಕೊಪ್ಪಳ:  ತುಂಗಭದ್ರಾ ಅಣೆಕಟ್ಟಿನ ಎಡಭಾಗ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಆದೇಶ ಹೊರಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ಜಲಾಶಯದ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಆ.20ರ ಮಧ್ಯರಾತ್ರಿಯವರೆಗೆ ಜಲಾಶಯದ ಡೌನ್ ಸ್ಟೀಮ್‌ನಲ್ಲಿರುವ ಕೆಳಮಟ್ಟದ ಸೇತುವೆ ಅಣೆಕಟ್ಟಿನ ಕೆಳಭಾಗದಲ್ಲಿ ಬರುವ ಎಲ್ಲಾ ಗ್ರಾಮಗಳ ಸುತ್ತಮುತ್ತಲಿನ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಗೇಟ್ ಅಳವಡಿಕೆ ಕಾರ್ಯಕ್ಕೆ ₹5 ಕೋಟಿ: ಸಚಿವ

ಕೊಪ್ಪಳ: ‘ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕರ್ನಾಟಕಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದು  ಆಂಧ್ರಪ್ರದೇಶ ಜಲ ಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು ಹೇಳಿದರು. ಜಲಾಶಯಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು ‘ತುಂಗಭದ್ರಾ ಮಂಡಳಿಯಲ್ಲಿ ಸುಮಾರು ₹130 ಕೋಟಿ ಅನುದಾನವಿದೆ. ಸದ್ಯ ಗೇಟ್ ಅಳವಡಿಕೆ ಕಾರ್ಯಕ್ಕೆ ₹5 ಕೋಟಿ ಬಿಡುಗಡೆ ಮಾಡಲಾಗಿದೆ. ಮಂಡಳಿ ಆಡಳಿತ ಮಂಡಳಿ ಅನುದಾನ ಬಳಕೆಗೆ ಅನುಮೋದನೆ ನೀಡಿದೆ’ ಎಂದು ತಿಳಿಸಿದರು. ‘ಜಲಾಶಯದ ನೀರು ಪೋಲಾಗದಂತೆ ಯಾವ ರೀತಿ ಗೇಟ್ ಅಳವಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಆಂಧ್ರ ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳು ಒಗ್ಗೂಡಿ ಕೆಲಸ ಮಾಡುತ್ತೇವೆ. ಆಂಧ್ರಪ್ರದೇಶ ಸಿಎಂ ಕೂಡ ಈ ಬಗ್ಗೆ ನಿರಂತರ ಸಭೆ ನಡೆಸಿದ್ದಾರೆ. ಮುಂದಿನ ದಿನದಲ್ಲಿ ಅವರೂ ಕೂಡ ಗೇಟ್ ಪರಿಶೀಲನೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT