ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಗ್ರಹಣದ ಜಾಗೃತಿ, ಧಾರ್ಮಿಕ ಆಚರಣೆ

Last Updated 8 ನವೆಂಬರ್ 2022, 16:16 IST
ಅಕ್ಷರ ಗಾತ್ರ

ಕೊಪ್ಪಳ/ಮುನಿರಾಬಾದ್‌: ಚಂದ್ರಗ್ರಹಣದ ಅಂಗವಾಗಿ ನಗರದಲ್ಲಿ ಮಂಗಳವಾರ ಅನೇಕರು ಧಾರ್ಮಿಕ ಆಚರಣೆಗಳನ್ನು ಮಾಡಿದರು. ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ, ಪೂಜೆ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಗ್ರಹಣಕ್ಕೂ ಮೊದಲೇ ಭಕ್ತರಿಗೆ ದರ್ಶನ ಬಂದ್‌ ಮಾಡಲಾಗಿತ್ತು. ಗೌರಿ ಹುಣ್ಣಿಮೆ ಇದ್ದ ಕಾರಣ ಭಕ್ತರು ದೇವಿಯ ದರ್ಶನಕ್ಕೆ ಬಂದವರು ರಾತ್ರಿ ತನಕ ಕಾಯಬೇಕಾಯಿತು. ಹುಲಿಗೆ ದೇವಸ್ಥಾನದ ಮುಖ್ಯದ್ವಾರ ಮತ್ತು ಗರ್ಭಗುಡಿಯನ್ನು ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮುಚ್ಚಲಾಗಿತ್ತು. ಗ್ರಹಣ ಮುಗಿದ ಬಳಿಕ ಮತ್ತೆ ಭಕ್ತರಿಗೆ ಅವಕಾಶ ನೀಡಲಾಯಿತು.

ಹುಣ್ಣಿಮೆಯ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬಂದ ಭಕ್ತರು ಬೆಳಗ್ಗೆಯಿಂದ ಹುಲಿಗೆಮ್ಮ ದೇವಿಯ ದರ್ಶನ ಪಡೆದರು. ಮಧ್ಯಾಹ್ನ 1 ಗಂಟೆಯ ನಂತರ ಬಂದ ಭಕ್ತರು ದೇವಸ್ಥಾನ ಆವರಣದಲ್ಲಿ ತಂಗಿದ್ದರು. ದೇವಿಯ ದರ್ಶನ ಬಂದ್ ಮಾಡುವ ಬಗ್ಗೆ ಕಾರ್ಯಾಲಯದಿಂದ ಮೊದಲೇ ಮಾಹಿತಿ ನೀಡಲಾಗಿತ್ತು. ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಗ್ರಹಣದ ಸಮಯದಲ್ಲಿ ದೇವಸ್ಥಾನ ತೆರೆದಿತ್ತು. ಗ್ರಹಣ ಪೂರ್ಣಗೊಂಡ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಾಗೃತಿ: ಯಲಬುರ್ಗಾ ತಾಲ್ಲೂಕಿನ ತಾಳಕೇರಿಯ ಸರ್ಕಾರಿ ಪ್ರೌಢಶಾಲೆಯ ರಾಮನ್ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಚಂದ್ರಗ್ರಹಣದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜ್ಞಾನ ಕೇಂದ್ರದ ಸಂಚಾಲಕ ದೇವೇಂದ್ರ ಜಿರ್ಲಿ ಮಾತನಾಡಿ ‘ಗ್ರಹಣಗಳು ಪ್ರಾಕೃತಿಕ ವಿದ್ಯಮಾನಗಳಷ್ಟೇ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೇ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಓದಿದ್ದೇವೆ. ಗ್ರಹಣ ಅಂದರೆ ಬೆಳಕು ಮತ್ತು ನೆರಳಿನಾಟ ಎನ್ನುವುದು ಪ್ರಾಥಮಿಕ ಶಾಲೆಯ ಪ್ರತಿಮಗುವಿಗೂ ಗೊತ್ತು. ಆದರೆ, ಸಮಾಜದಲ್ಲಿ ಗ್ರಹಣಗಳ ಬಗ್ಗೆ ಇಲ್ಲಸಲ್ಲದ ಕಟ್ಟುಕತೆ ಮೌಢ್ಯಗಳನ್ನು ಬಿತ್ತಲಾಗಿದೆ‌’ ಎಂದರು.

ಗ್ರಹಣದ ಸಮಯದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಾಳೆ ಹಣ್ಣು, ಸಕ್ಕರೆ ಆರತಿ ಸವಿದರು. ತಿಮ್ಮಣ್ಣ ಜಗ್ಗಲ್, ಶಿಕ್ಷಕರಾದ ವೆಂಕಟಲಕ್ಷ್ಮಿ, ಶೋಭಾ ಬಾಗೇವಾಡಿ, ಸುನಿಲಕುಮಾರ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT