ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಮೊದಲ ಶಿಲ್ಪಿ ಬಸವಣ್ಣ: ಸಂಸದ ಸಂಗಣ್ಣ ಕರಡಿ ಅಭಿಮತ

ಬಸವ ಜಯಂತಿ ಕಾರ್ಯಕ್ರಮ
Last Updated 7 ಮೇ 2019, 14:37 IST
ಅಕ್ಷರ ಗಾತ್ರ

ಕೊಪ್ಪಳ: ‘12ನೇ ಶತಮಾನದಲ್ಲಿಯೇ ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ ಜಗಜ್ಯೋತಿ ಬಸವಣ್ಣನವರು ಸಂವಿಧಾನದ ಮೊದಲ ಶಿಲ್ಪಿ ಆಗಿದ್ದಾರೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬಸವ ಜಯಂತ್ಯುತ್ಸವ ಸಮಿತಿ ಹಾಗೂ ಬಸವಾನುಯಾಯಿ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆದ ಷಟಸ್ಥಲ ಧ್ವಜಾರೋಹಣ ಹಾಗೂ ಬಸವ ಪುತ್ಥಳಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿಗೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರು ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶೋಷಿತರ ಬದುಕಿನಲ್ಲಿ ಸಾಮಾಜಿಕ ಕ್ರಾಂತಿಯನ್ನೆ ಮಾಡಿದ ಅವರು ಅಂತರ್ಜಾತಿ ವಿವಾಹಗಳ ಮೂಲಕ ಸಮಾಜವನ್ನು ಪರಿವರ್ತನೆ ಪಥದತ್ತ ಕೊಂಡೊಯ್ದರು. ಅಲ್ಲದೆ ಸಮಾಜದಲ್ಲಿ ಜಾತ್ಯಾತೀತ ಭಾವನೆ ಬೆಳೆಸಲು ಪ್ರಯತ್ನಿಸಿದ್ದರು’ ಎಂದರು.

‘ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರಾದ ಬಸವಣ್ಣ ತಮ್ಮ ಕ್ರಾಂತಿಕಾರಿ ವಿಚಾರಗಳಿಂದಲೇ ಇಂದು ಪ್ರತಿ ಮನೆಯಲ್ಲೂ ಮನದಲ್ಲೂ ನೆಲೆಸಿದ್ದಾರೆ. ಪ್ರತಿಯೊಬ್ಬ ಮನುಷ್ಯ ಕಾಯಕದಿಂದ ಬದುಕಬೇಕು. ಆತ ಸೋಮಾರಿ, ಸ್ವಾರ್ಥಿ ಆಗಬಾರದು ಎಂಬ ಅವರ ಮಹಾನ್ ಆಶಯದಂತೆ ನಾವೆಲ್ಲರೂ ನಮ್ಮ ಕಾಯಕದ ಮೂಲಕ ದೇಶವನ್ನು ಅಭಿವೃದ್ಧಿಪಡಿಸೋಣ’ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಅಂಬೇಡ್ಕರರ ಸಂವಿಧಾನಕ್ಕೆ ಸ್ಪೂರ್ತಿ ಬಸವಣ್ಣನವರು. ಪ್ರಸ್ತುತ ದೇಶದ ಸಂಸತ್ತು ಸಹ ಅವರ ಪರಿಕಲ್ಪನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಮನುಕುಲದಲ್ಲಿ ಒಳ್ಳೆಯತನ ಹೆಚ್ಚಿಸುವಲ್ಲಿ ಶ್ರಮಿಸಿದ್ದ ಅವರು, ಜಾತಿ ಸಂಘರ್ಷದ ನಿರ್ನಾಮಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದರು.

‘ಬಸವ ಜಯಂತ್ಯುತ್ಸವ ಸಮಿತಿಯು ಜಯಂತಿ ಅಂಗವಾಗಿ ಪ್ರವಚನ ಕಾರ್ಯಕ್ರಮ ನಡೆಸಿರುವುದು ಅಭಿನಂದನಾರ್ಹ. ಆ ಮೂಲಕ ಸಮಾಜದಲ್ಲಿ ಬಸವ ಸಂದೇಶಗಳನ್ನು ಪ್ರಚುರಪಡಿಸುತ್ತಿರುವುದು ಮಹತ್ಕಾರ್ಯ. ಬಸವಾನುಯಾಯಿಗಳ ಆಶಯದಂತೆ ನಗರದಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ವೃತ್ತದ ಹೆಚ್ಚಿನ ಅಭಿವೃದ್ಧಿಗೆ ಮುಖಂಡರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದರು.

ಹೊನ್ನೂರು-ಮಧುರಖಂಡಿ ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರು ಮಾತನಾಡಿ, ‘ಈ ಜಗತ್ತಿನಲ್ಲಿ
ತುಳಿತಕ್ಕೊಳಗಾದವರ ಪರ ಮೊದಲು ನಿಂತವರು ಬಸವಣ್ಣ. ಜಗತ್ತಿಗೆ ಸಮಾನತೆ ಸಾರಿದವರಲ್ಲಿ ಅವರೇ ಮೊದಲಿಗರು. ಜಾತಿಯ ಭೂತವನ್ನು ದೂರ ತಳ್ಳಿ, ಸಮಾಜದಲ್ಲಿ ಸ್ವಾಸ್ಥ್ಯ ಮನೆಮಾಡಲು ಸಾಕಷ್ಟು ಶ್ರಮಿಸಿದರು. ಅಶ್ವಾರೋಢ ಬಸವಣ್ಣ ಕೇವಲ ಪ್ರತಿಮೆಯಾಗದೆ ಎಲ್ಲರ ಮನಸ್ಸಿನಲ್ಲಿ ನೆಲೆಸಬೇಕು. ವಚನ ಸಾಹಿತ್ಯ ಧರ್ಮಗ್ರಂಥವಾಗಬೇಕು. ಬಸವ ಸಂದೇಶ ಮನೆ ಮನೆಗೆ ತಲುಪಬೇಕು. ಷಟಸ್ಥಲ ಬಾವುಟ ಸಮಾನತೆ ಸಾರಬೇಕು. ದುಡಿದು, ದಣಿದ ಜೀವಗಳಿಗೆ ನಾವೆಲ್ಲ ಆಸರೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ, ಮುಖಂಡರಾದ ಗುರುರಾಜ ಹಲಗೇರಿ, ಗವಿಸಿದ್ದಪ್ಪ ಚಿನ್ನೂರು, ಶಿವಕುಮಾರ ಕುಕನೂರು, ರಾಜೇಶ ಸಸಿಮಠ, ಮಹಾವೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT