ಕೊಪ್ಪಳ: ಮುಂಗಾರು ಹಂಗಾಮು ಆರಂಭವಾಗಿ ಜಿಲ್ಲೆ ಹಾಗೂ ನೆರೆ ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಟೊಮೊಟೊ ಮತ್ತು ಹಸಿ ಮೆಣಸಿನಕಾಯಿ ಪ್ರತಿ ಕೆ.ಜಿಗೆ. ₹100 ದಾಟಿವೆ. ಹೀಗಾಗಿ ಗ್ರಾಹಕರಿಗೆ ಮೆಣಸಿನಕಾಯಿ ಬೆಲೆ ಏರಿಕೆಯ ಘಾಟು ತಟ್ಟುತ್ತಿದೆ.
ಎರಡು ವಾರಗಳ ಹಿಂದೆ ಹಸಿ ಮೆಣಸಿನಕಾಯಿ ಒಂದು ಕೆ.ಜಿಗೆ. ₹50ರಿಂದ ₹60 ಇತ್ತು. ಈಗ ₹90ರಿಂದ ₹110ರ ತನಕ ಇವೆ. ಇಲ್ಲಿನ ಜವಾಹರ ರಸ್ತೆಯಲ್ಲಿರುವ ಜೆ.ಪಿ. ಮಾರುಕಟ್ಟೆ, ಲೇಬರ್ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ವಾಹನದಲ್ಲಿ ತರಕಾರಿ ಮಾರಾಟ ಮಾಡುವ ಸ್ಥಳದಲ್ಲಿ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲಿಗಿಂತಲೂ ಕಡಿಮೆ ತರಕಾರಿ ಖರೀದಿ ಮಾಡುತ್ತಿದ್ದ ಚಿತ್ರಣ ಕಂಡು ಬಂತು.
22 ಕೆ.ಜಿ. ಇರುವ ಒಂದು ಬಾಕ್ಸ್ ಟೊಮೊಟೊಗೆ ₹1,300 ಆಗುತ್ತದೆ. ಸಗಟು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ತರುತ್ತಿರುವ ವ್ಯಾಪಾರಿಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹90ರಿಂದ ₹100 ಮಾರಾಟ ಮಾಡುತ್ತಿದ್ದರೆ, ತಳ್ಳು ಗಾಡಿಯಲ್ಲಿ ಮನೆಯ ಮುಂದೆ ಮಾರಾಟ ಮಾಡಲು ಬರುವವರು ಕೂಡ ಇದಕ್ಕಿಂತ ₹5ರಿಂದ ₹10 ಹೆಚ್ಚು ಬೆಲೆ ಹೇಳುತ್ತಿದ್ದಾರೆ. ಕಳೆದ ವಾರ ಪ್ರತಿ ಕೆ.ಜಿ. ಟೊಮೊಟೊಗೆ ₹40 ಇತ್ತು. ಉಳಿದಂತೆ ಉಳ್ಳಾಗಡ್ಡಿ ₹20, ಆಲೂಗಡ್ಡೆ ₹30, ಸೌತೇಕಾಯಿ ₹40, ಹಿರೇಕಾಯಿ ₹50 ಇದೆ.
ಮೊದಲು ಹೊರಜಿಲ್ಲೆಗಳ ಜೊತೆಗೆ ಜಿಲ್ಲೆಯ ವಿವಿಧೆಡೆಯಿಂದಲೂ ವಿಶೇಷವಾಗಿ ಗ್ರಾಮೀಣ ಭಾಗದಿಂದ ಹೇರಳವಾಗಿ ತರಕಾರಿ ಬರುತ್ತಿತ್ತು. ಈಗ ಆಗಾಗ ಮಳೆ ಬೀಳುತ್ತಿರುವ ಕಾರಣ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಹೀಗಾಗಿ ಜನ ಮೊದಲು ಒಂದು ಕೆ.ಜಿ. ಖರೀದಿ ಮಾಡುತ್ತಿದ್ದವರು ಈಗ ಅರ್ಧ ಕೆ.ಜಿ. ಮಾತ್ರ ಮಾಡುತ್ತಿದ್ದಾರೆ.
‘ನಿತ್ಯದ ಅಡುಗೆಗೆ ಅಗತ್ಯವಾಗಿ ಬೇಕಾಗುವ ಟೊಮೊಟೊ ಮತ್ತು ಹಸಿ ಮೆಣಸಿನಕಾಯಿ ಬೆಲೆ ಹೆಚ್ಚಳವಾಗಿದ್ದು ಇದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ಹೊರೆಯಾಗಿದೆ. ಟೊಮೊಟೊ ಮೊದಲು ದಿನವೊಂದಕ್ಕೆ ನಾಲ್ಕರಿಂದ ಐದು ಬಾಕ್ಸ್ ಮಾರಾಟ ಮಾಡುತ್ತಿದ್ದೆ. ಈಗ ಎರಡು ಬಾಕ್ಸ್ ಮಾರಾಟವಾದರೆ ಅದೇ ಹೆಚ್ಚು ಎನ್ನುವಂತೆ ಆಗಿದೆ. ಮೆಣಸಿನಕಾಯಿ ನಿತ್ಯ 40 ಕೆ.ಜಿ. ಸರಾಗವಾಗಿ ಆಗುತ್ತಿದ್ದ ಮಾರಾಟ ಈಗ 20 ಕೆ.ಜಿ.ಗೆ ಇಳಿದಿದೆ’ ಎಂದು ಜೆ.ಪಿ. ಮಾರುಕಟ್ಟೆಯ ತರಕಾರಿ ವ್ಯಾಪಾರಿ ನಿರ್ಮಲಾ ಮೊರನಾಳ ಹೇಳಿದರು.
ಪಲ್ಲೆ ಬೆಲೆಯೂ ಹೆಚ್ಚಳ
ಮಾರುಕಟ್ಟೆಗೆ ಪಲ್ಲೆ ಬರುವುದು ಕಡಿಮೆಯಾಗಿದ್ದರಿಂದ ಕೊತ್ತಂಬರಿ ಮೆಂತೆ ಪಾಲಕ್ ಹುಣಸಿಕ ಪುದೀನಾ ಬೆಲೆಯೂ ಹೆಚ್ಚಳವಾಗಿದೆ. ಮೊದಲು ₹10ಕ್ಕೆ ಎರಡು ಕಟ್ಟು ಬರುತ್ತಿದ್ದ ಈ ಪಲ್ಲೆಗಳು ಈಗ ಒಂದು ನೀಡಲಾಗುತ್ತಿದೆ. ‘ಸಗಟು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದ್ದರಿಂದ ಜನ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಹೆಚ್ಚು ಬೆಲೆ ಹೇಳಿದರೆ ಜನ ಖರೀದಿ ಮಾಡುತ್ತಿಲ್ಲ. ತರಕಾರಿ ಸಂಗ್ರಹಿಸಲು ಪಡೆದಿರುವ ಕಟ್ಟಡದ ಬಾಡಿಗೆ ಕಟ್ಟಬೇಕು. ನಮ್ಮ ಜೀವನವೂ ನಡೆಯಬೇಕು. ಈಗಿನ ಸ್ಥಿತಿಯಲ್ಲಿ ಇದನ್ನೆಲ್ಲ ನಿರ್ವಹಣೆ ಮಾಡುವುದು ಕಷ್ಟವಾಗಿದೆ’ ಎಂದು ಪಲ್ಲೆಗಳ ವ್ಯಾಪಾರದಲ್ಲಿ ತೊಡಗಿದ್ದ ಮಂಜುಳಾ ಬಳ್ಳಾರಿ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.