ಸೋಮವಾರ, ಜನವರಿ 25, 2021
27 °C
ವಿವಿಧೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಗೌರವ: ಕೊಡುಗೆ ಸ್ಮರಣೆ

ಸಂವಿಧಾನ ಸಮರ್ಪಣಾ ದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಸಂವಿಧಾನ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವೈಚಾರಿಕತೆ ಬೆಳೆಸಿಕೊಳ್ಳಲು ಸಲಹೆ

ಕನಕಗಿರಿ: ಪಟ್ಟಣದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಹಯೋಗದಲ್ಲಿ ಗುರುವಾರ ಸಂವಿಧಾನ ಸಮರ್ಪಣಾ ದಿನ
ಆಚರಿಸಲಾಯಿತು.

ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ,‘ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಧಿಕ್ಕರಿಸಿ ವೈಚಾರಿಕತೆ, ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂವಿಧಾನದ ಪ್ರತಿಯನ್ನು ದೇಶದ ಪ್ರತಿಯೊಂದು ಮನೆಗೂ ತಲುಪಿಸಿ  ಸಂವಿಧಾನದ ಮಹತ್ವವನ್ನು ತಿಳಿಸಿ ಕೊಡಬೇಕಾಗಿದೆ ಎಂದರು.

ಉತ್ತರ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಮಣ್ಣ ಸೋಮಸಾಗರ ಮಾತನಾಡಿ,‘ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಕೋರಿದರು.

ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಪ್ರಗತಿ ಪರ ಚಿಂತಕ ನೀಲಕಂಠ ಬಡಿಗೇರ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಮಹ್ಮದಪಾಷ ಮುಲ್ಲಾರ, ಸುಭಾಸ ಕಂದಕೂರು, ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಮಂಡಲ ಅಧ್ಯಕ್ಷ ಹನುಮಂತಪ್ಪ ಬಸರಿಗಿಡದ, ಪ್ರಮುಖರಾದ ಸಂಗಪ್ಪ ಸಜ್ಜನ್, ಪಾಮಣ್ಣ ಅರಳಿಗನೂರ, ಶಾಂತಪ್ಪ ಬಸರಿಗಿಡದ, ಪಂಪಾಪತಿ ಚೆಲುವಾದಿ, ಕನಕಪ್ಪ ಮ್ಯಾಗಡೆ, ವೆಂಕಟೇಶ ನೀರ್ಲೂಟಿ, ಸಣ್ಣ ದುರಗಪ್ಪ, ಕಂಠಿ ಮ್ಯಾಗಡೆ, ತಿಮ್ಮಣ್ಣ ಚೆಲುವಾದಿ ಹಾಗೂ ಬೇನಾಳಪ್ಪ ಇದ್ದರು.

‘ಮೌಲ್ಯಗಳನ್ನು ಸಂರಕ್ಷಿಸಿ’

ಕಾರಟಗಿ: ಪಟ್ಟಣದ ಶರಣಬಸವೇಶ್ವರ ಇಂಗ್ಲಿಷ್‌, ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಭಾರತ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ಅಮರೇಶ ಮಾತನಾಡಿ,‘ಭಾರತೀಯರಾದ ನಾವು ದೇಶದ ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರ
ಪೇಕ್ಷತೆಯನ್ನು ಕಾಪಾಡಬೇಕಿದೆ. ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ದೊರೆಯಲಿ ಎನ್ನುವ ಆಶಯದಿಂದ ಸಂವಿಧಾನ ರಚನೆ ಮಾಡಿ ಸಮರ್ಪಣೆ ಮಾಡಲಾಗಿದೆ’ ಎಂದರು.

ಶಿಕ್ಷಕರಾದ ಜಗದೀಶ್ ಭಜಂತ್ರಿ ಮಾತನಾಡಿ,‘ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.‌ಅಂಬೇಡ್ಕರ್‌ ಅವರ ಕೊಡುಗೆ ಮಹತ್ವದ್ದಾಗಿದೆ’ ಎಂದರು.

ಮುಖ್ಯಶಿಕ್ಷಕ ವೀರೇಶ ಮ್ಯಾಗೇರಿ, ಶಿಕ್ಷಕರಾದ ಜಗದೀಶ್ ಹಳ್ಳೂರ, ಗಿರೀಶ್. ಈಶ್ವರಪ್ಪ ಇಟಗಿ, ಮೆಹಬೂಬ ಕಿಲ್ಲೇದಾರ, ಎಂ. ಡಿ. ಇಬ್ರಾಹಿಂ ಹಾಗೂ ಗುಂಡಪ್ಪ ಅರಳಿ ಇದ್ದರು.

‘ಸಂವಿಧಾನ ಬಹುದೊಡ್ಡ ಕೊಡುಗೆ’

ಗಂಗಾವತಿ: ಅಂಬೇಡ್ಕರ್ ಸೇನೆ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್‍ನಲ್ಲಿ ಗುರುವಾರ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಛಲವಾದಿ ಮಾತನಾಡಿ,‘ದೇಶದಲ್ಲಿಯೇ ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ಗೌರವಿಸಲಾಗುತ್ತದೆ. ಸಂವಿಧಾನ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಅದ್ಭುತ ಕೊಡುಗೆ. ಅದನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು’ ಎಂದು ಹೇಳಿದರು.

ಸಂಘಟನೆಯ ಕಾರ್ಯಕರ್ತರಾದ ಅಣ್ಣೋಜಿ ರಾವ್, ಹಂಪೇಶ ಹರಿಗೋಲ, ಹುಸೇನಪ್ಪ ಹಂಚಿನಾಳ, ವೀರೇಶ ವಕೀಲರ ಹಾಗೂ ಸೋಮನಾಥ ವಕೀಲರು ಈ ವೇಳೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು