ಬುಧವಾರ, ಸೆಪ್ಟೆಂಬರ್ 22, 2021
29 °C
ಮದ್ಯದಂಗಡಿಗಳ ಬಾಗಿಲು ಬಂದ್

ಗಂಗಾವತಿ | ಲಾಕ್‌ಡೌನ್ ಪರಿಣಾಮ, ನೆಮ್ಮದಿ ಕಂಡ ಮದ್ಯವ್ಯಸನಿಗಳ ಕುಟುಂಬ

ಶಿವಕುಮಾರ್. ಕೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕೊರೊನಾ ವೈರಸ್‌ ಭೀತಿಯಲ್ಲೇ ಜನರು ಬದುಕು ಸಾಗಿಸುತ್ತಿದ್ದಾರೆ. ಇದರ ಮಧ್ಯೆಯೇ ಮದ್ಯವ್ಯಸನಿಗಳ ಬದುಕು ಹಸನಾಗಿದೆ.

ಬಾರ್ ಆಂಡ್ ರೆಸ್ಟೋರೆಂಟ್‌ಗಳು ಬಂದ್ ಆಗಿರುವುದರಿಂದ ಕುಡಿದು ತೂರಾಡುತ್ತಿದ್ದ ಕೆಲವರು ಇದೀಗ ಕುಟುಂಬದವರ ಜೊತೆಗೂಡಿ ನಲಿಯುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಮದ್ಯದ ಚಟ ಬಿಡದವರು, ಕೊರೊನಾದಿಂದಾಗಿ ಕುಡಿತ ಬಿಟ್ಟಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿನ ಮಹಿಳೆಯರ ಮೊಗದಲ್ಲಿ ಮಂದಹಾಸ ಮೂಡಿದೆ.

ನಗರದ ಸಾಕಷ್ಟು ಕುಟುಂಬಗಳು ಕೊರೊನಾ ಲಾಕ್‌ಡೌನ್ ನಡುವೆಯೂ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಮದ್ಯವ್ಯಸನಿಗಳಾಗಿದ್ದ ಅಣ್ಣ-ತಮ್ಮ, ಗಂಡ, ಇಂದು ಇರುವಂತೆ ಕೊನೆಯ ತನಕವೂ ಆರೋಗ್ಯವಾಗಿ ಇರಬೇಕು ಎಂಬುದು ಬಹುತೇಕ ಮಹಿಳೆಯರ ಆಶಯವಾಗಿದೆ.

‘ನಿತ್ಯ ಕುಡಿದು, ತೂರಾಡಿಕೊಂಡು ಬರುತ್ತಿದ್ದ ನಮ್ಮ ಯಜಮಾನರು ಮದ್ಯವಿಲ್ಲದೆ, ಮನೆಯಲ್ಲಿಯೇ ಮೂರೋತ್ತು ಊಟ ಮಾಡಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಯಾವುದೇ ರೀತಿಯ ಜಗಳಗಳಿಲ್ಲದೇ ಚೆನ್ನಾಗಿದ್ದೇವೆ‘ ಎನ್ನುತ್ತಾರೆ ನಗರದ 18 ನೇ ವಾರ್ಡ್‌ನ ಬಹುತೇಕ ಮಹಿಳೆಯರು.

‘ಲಾಕ್‌ಡೌನ್ ನಮಗೆ ಒಳ್ಳೆಯದನ್ನೇ ಮಾಡಿದೆ. ಇದರಿಂದ ನಮ್ಮ ಕುಟುಂಬಗಳಲ್ಲಿ ನಗು ಮೂಡಿದೆ. ಈ ಕೊರೊನಾ ಮದ್ಯವ್ಯಸನಿಗಳಿಗೆ ಸರಿಯಾದ ಬುದ್ಧಿ ಕಲಿಸಿದೆ‘ ಎನ್ನುತ್ತಾರೆ ಅವರು.

‘ಬಡತನದಲ್ಲಿಯೂ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಮದ್ಯ ಸಿಗದೇ ಇರುವಂಥಹ ಲಾಕ್‌ಡೌನ್‌ ಕಾರಣ. ನಮ್ಮ ಏರಿಯಾದಲ್ಲಿ ಹಲವು ಗಂಡಸರು ಮದ್ಯ ಸೇವನೆ ಬಿಟ್ಟಿದ್ದಾರೆ. ಬಾರ್‌ಗಳು ಬಂದ್ ಆಗಿರುವುದರಿಂದ ಒಳ್ಳೆಯದಾಗಿದೆ‘ ಎನ್ನುತ್ತಾರೆ ಮದ್ಯವ್ಯಸನಿ ಹನುಮಂತಪ್ಪ ಅವರ ಪತ್ನಿ ನೀಲಮ್ಮ.

ವಾರ್ಡ್‌ನ ಕೆಲ ಮದ್ಯವ್ಯಸನಿಗಳು ಲಾಕ್‌ಡೌನ್‌ನಿಂದಾಗಿ ಆರಂಭದಲ್ಲಿ ಮದ್ಯ ಸಿಗದೇ ಪರದಾಡುತ್ತಿದ್ದರು. ಕ್ರಮೇಣ ಮದ್ಯವಿಲ್ಲದೇ ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹೊಟ್ಟೆ ತುಂಬಾ ಊಟ ಮಾಡಿ, ದೈಹಿಕವಾಗಿ ಫಿಟ್ ಆಗಿದ್ದಾರೆ. ಕೆಲವರು ಮತ್ತೆ ಮದ್ಯದಂಗಡಿ ಶುರುವಾದರೂ ನಾವು ಅದನ್ನು ಮುಟ್ಟುವುದಿಲ್ಲ‘ ಎಂದು ಪ್ರತಿಜ್ಞೆ ಕೂಡ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು