ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರಧಾನ್ಯದ ಕಿಟ್‌ ಹಂಚಿಕೆ ಪಕ್ಷಾತೀತವಾಗಿರಲಿ: ಶಾಸಕ ಬಯ್ಯಾಪುರ

Last Updated 3 ಜೂನ್ 2021, 5:46 IST
ಅಕ್ಷರ ಗಾತ್ರ

ಕುಷ್ಟಗಿ: ‘ಕೋವಿಡ್‌ ಲಾಕ್‌ಡೌನ್‌ ಸಂಕಷ್ಟದ ಪರಿಸ್ಥಿತಿಯಿಂದ ಕೂಲಿಕಾರರು ಮತ್ತು ಇತರೆ ಕಾರ್ಮಿಕರು ಸೇರಿದಂತೆ ತಾಲ್ಲೂಕಿನ ಕಡುಬಡವರಿಗೆ ಆಹಾರದ ವಸ್ತುಗಳನ್ನು ಒಳಗೊಂಡ ಸುಮಾರು ನಾಲ್ಕು ಸಾವಿರ ಕಿಟ್‌ಗಳನ್ನು ಪಕ್ಷದ ವತಿಯಿಂದ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕಿಟ್‌ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕುರಿತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಹಿರಿಯರು ಚರ್ಚೆ ನಡೆಸಿದ್ದು ಕೋವಿಡ್‌ ಎರಡನೇ ಅಲೆಯಿಂದ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳು ಅಸಹಾಯಕ ಸ್ಥಿತಿ ತಲುಪಬಾರದು. ಕಿಟ್‌ ಹಂಚಿಕೆ ಪಕ್ಷಾತೀತ ಮತ್ತು ತಾರತಮ್ಯ ರಹಿತವಾಗಿ ನಡೆಸುವಂತೆ ಕಾರ್ಯಕರ್ತರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಬಹುತೇಕ ಸಂದರ್ಭಗಳಲ್ಲಿ ಅರ್ಹರಿಗಿಂತ ಅನರ್ಹರೇ ಪರಿಸ್ಥಿತಿಯ ಲಾಭ ಪಡೆದಿರುವುದನ್ನು ಕಂಡಿದ್ದೇವೆ. ನಿಜವಾದ ಬಡವರಿಗೆ ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಯಾರ ಮನೆಯಲ್ಲಿಯೂ ಸರ್ಕಾರದ ಉದ್ಯೋಗಿಗಳು ಇರಬಾರದು ಮತ್ತು ಬಡತನದಲ್ಲಿರುವವರನ್ನು ಗುರುತಿಸುವ ಕೆಲಸ ನಡೆಸುವಂತೆ ತಿಳಿಸಲಾಗಿದೆ ಎಂದರು. ಈಗಾಗಲೇ ಪಟ್ಟಣದ ಮಾರುತಿನಗರ, ಸಂದೀಪ್ ನಗರ ,ಶರೀಫ ನಗರ ,ಗಾಂಧಿನಗರ ಕಾಲೊನಿಗಳಲ್ಲಿರುವ ಬಡವರು, ದೈನಂದಿನ ದುಡಿಮೆಯನ್ನೇ ಅವಲಂಬಿಸಿ ಬದುಕುವವರಿಗೆ ಕಿಟ್‌ಗಳನ್ನು ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಪ್ರಮುಖರು ಇದ್ದರು.

ದಾನಿಗಳಿಂದ ಕಿಟ್‌ ಸಂಗ್ರಹ: ಕೋವಿಡ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ತಾಲ್ಲೂಕಿನ ಜನರಿಗೆ ವಿತರಿಸಲು ಆಹಾರದ ವಸ್ತುಗಳ ಕಿಟ್‌ ಸ್ವೀಕರಿಸಲು ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದ್ದಾರೆ. ಈ ವಿಷಯದ ಕುರಿತು ಪ್ರಕಟಣೆ ನೀಡಿರುವ ಅವರು, ಅಲ್ಲಲ್ಲಿ ಜನರು, ಸಂಘ ಸಂಸ್ಥೆಗಳು ಬಡವರಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ನೀಡುತ್ತಿರುವುದು ಕಂಡುಬಂದಿದ್ದು, ಇದರಿಂದ ಜನರ ಗುಂಪುಗೂಡುವಿಕೆ ಹೆಚ್ಚಾಗಿ ಸೋಂಕು ಹರಡಲು ಕಾರಣವಾಗುತ್ತಿದೆ. ತಹಶೀಲ್ದಾರ್ ಕಚೇರಿ, ಪುರಸಭೆ ಕಚೇರಿ ಹಾಗೂ ತಾವರಗೇರಾ ಪಟ್ಟಣ ಪಂಚಾಯಿತಿಗಳಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದ್ದು, ದಾನಿಗಳು ಅಲ್ಲಿಗೆ ಬಂದು ಆಹಾರ ವಸ್ತುಗಳನ್ನು ನೀಡುವ ಮೂಲಕ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT