ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ: ಮದ್ಯ ಖರೀದಿಗೆ ಮುಗಿಬಿದ್ದ ಜನ

ಅಗತ್ಯ ಸಾಮಗ್ರಿ ಖರೀದಿಸಿದ ಜನ, ಪಾಲನೆಯಾಗದ ಕೋವಿಡ್‌ ಮಾರ್ಗಸೂಚಿ: ವಿವಿಧೆಡೆ ಜಾಗೃತಿ
Last Updated 27 ಏಪ್ರಿಲ್ 2021, 4:10 IST
ಅಕ್ಷರ ಗಾತ್ರ

ಯಲಬುರ್ಗಾ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸರ್ಕಾರದ ಈ ಪ್ರಯತ್ನಕ್ಕೆ ಸಹಕರಿಸದೇ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಪಟ್ಟಣದಲ್ಲಿ ವ್ಯಾಪಕವಾಗುತ್ತಿದೆ.

ತಾಲ್ಲೂಕು ಆಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಉದಾಸೀನ ಧೋರಣೆ ಅನುಸರಿಸುತ್ತಿರುವುದರಿಂದ ಕೋವಿಡ್ ವ್ಯಾಪಕವಾಗಿ ಹರಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ರಾಜ್ಯ ಸರ್ಕಾರ ಏ.27 ರಿಂದ ಮುಂದಿನ ಎರಡು ವಾರಗಳ ಕಾಲ ಕಠಿಣ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರಿಂದ ಮದ್ಯಪ್ರಿಯರು ಅಂಗಡಿಗೆ ಧಾವಿಸಿ ಸಂಗ್ರಹಿಸಿಟ್ಟುಕೊಳ್ಳುವುದು ಸೋಮವಾರ ಕಂಡುಬಂತು.

ಮಾಂಸದ ಅಂಗಡಿ ಹಾಗೂ ವಿವಿಧ ದಿನಸಿ ಅಂಗಡಿಗಳಲ್ಲಿ ದಟ್ಟಣೆ ಸಾಮಾನ್ಯವಾಗಿತ್ತು. ಆದರೆ ಕೋವಿಡ್ ನಿಯಂತ್ರಣದ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸದೇ ಗುಂಪು ಗುಂಪಾಗಿರುವುದು, ಮಾಸ್ಕ್ ಧರಿಸದೇ ಸೇರಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯ ಪಟ್ಟಣ ಪಂಚಾಯಿತಿಯವರು ಕೇವಲ ಸಹಕರಿಸಿ ಎಂದೇ ಪ್ರಚಾರ ಮಾಡಿದ್ದನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಕಟ್ಟುನಿಟ್ಟಿನ ನಿಷೇಧದ ಕ್ರಮಗಳು ಪಟ್ಟಣದಲ್ಲಿ ನಡೆಸದೇ ಇರುವುದು ಸ್ಥಳೀಯ ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರಿಂದ ಬೇಸರ ವ್ಯಕ್ತವಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಆದೇಶದಂತೆ ಕಟ್ಟುನಿಟ್ಟಿನಲ್ಲಿ ಕ್ರಮಕೈಗೊಂಡು ನಿಯಂತ್ರಣಕ್ಕೆ ಶ್ರಮಿಸಬೇಕು. ಉಲ್ಲಂಘನೆ ಮಾಡುವ ಯಾರೇ ಆಗಿದ್ದರೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ, ತಿಮ್ಮನಗೌಡ ಪಾಟೀಲ, ನರಸಿಂಹ ಬೇವಿನಕಟ್ಟಿ, ರುದ್ರೇಶ ಹಾಗೂ ಇತರರು ಒತ್ತಾಯಿಸುತ್ತಿದ್ದಾರೆ.

ಮದುವೆ ಮಂಟಪದಲ್ಲಿ ಜಾಗೃತಿ
ಕೋಳಿಹಾಳ (ಯಲಬುರ್ಗಾ):
ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಪಾಲಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದನ್ನು ಮನಗಂಡ ಕೋವಿಡ್ ನಿಯಂತ್ರಣ ಕಾರ್ಯಪಡೆ ಸದಸ್ಯರಾದ ಆಶಾಕಾರ್ಯಕರ್ತೆಯರು ಕೊರೊನಾ ಅರಿವು ಮೂಡಿಸಿದ ಘಟನೆ ಜರುಗಿದೆ.

ಗುನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆರು ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ
ಪಾತ್ರರಾಗಿದ್ದಾರೆ.

ಕಾರ್ಯಕರ್ತೆ ಪರಿಮಳ ಬಡಿಗೇರ,‘ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರತಿಯೊಬ್ಬರೂ ಜಾಗೃತರಾಗಿರುವುದು ಅವಶ್ಯ. ಮದುವೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಹಾಗೂ ಬೇರೆ ಬೇರೆ ಸ್ಥಳಗಳಿಂದ ಬಂಧುಗಳು ಆಗಮಿಸುವುದರಿಂದ ಹೆಚ್ಚಿನ ಜಾಗೃತಿ ಅವಶ್ಯವಾಗಿರುತ್ತದೆ. ಆದ್ದರಿಂದ ಜಾಗೃತಿ ಮೂಡಿಸಲಾಯಿತು’ ಎಂದು ತಿಳಿಸಿದ್ದಾರೆ.

ಕಾರ್ಯಕರ್ತೆ ಶಾರದಾ ವಡ್ಡರ ಮಾತನಾಡಿ,‘ಗ್ರಾಮದಲ್ಲಿ ಎರಡು ಕಡೆ ಮದುವೆ ನಡೆದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಕಾರಣದಿಂದ ಕೋವಿಡ್ ಮಾರ್ಗಸೂಚಿ ಪಾಲಿಸುವುದು ಅಗತ್ಯವಾಗಿತ್ತು. ಆದ್ದರಿಂದ ನಾವು ಭೇಟಿ ನೀಡಬೇಕಾಯಿತು’ ಎಂದು ಅವರು ಹೇಳಿದರು.

ನವದಂಪತಿ ಮದುವೆ ಸಮಾರಂಭ ಮುಗಿಯುವವರೆಗೂ ಮಾಸ್ಕ್ ಧರಿಸಿಕೊಂಡು ಅಭಿನಂದನೆಗಳನ್ನು ಹಾಗೂ ಶುಭಾಶಯಗಳನ್ನು ಸ್ವೀಕರಿಸುತ್ತಿರುವುದು ಸಾಮಾನ್ಯವಾಗಿತ್ತು.

ಮಾರುಕಟ್ಟೆಯಲ್ಲಿ ಜನಜಂಗುಳಿ
ಕುಷ್ಟಗಿ:
ಕೊರೊನಾ ಸೋಂಕು ಪಟ್ಟಣದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡುಬರುತ್ತಿದೆ. ಸಾರ್ವಜನಿಕರು ಮತ್ತು ವ್ಯಾಪಾರಿಗಳು ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ.

ವ್ಯಾಪಾರ ವಹಿವಾಟು ನಡೆಸುವ ಸಂಬಂಧ ದಿನಕ್ಕೊಂದರಂತೆ ನಿಯಮಗಳು ಜಾರಿಗೆ ಬರುತ್ತಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದೆ. ಎಲ್ಲ ಚಟುವಟಿಕೆಗಳಿಗೆ ಶನಿವಾರ ಮತ್ತು ಭಾನುವಾರ ಸಂಪೂರ್ಣ ನಿರ್ಬಂಧ ಎಂದು ತಿಳಿಸಲಾಗಿತ್ತು. ಹಾಗಾಗಿ ಸೋಮವಾರ ಖರೀದಿ ಮತ್ತಿತರೆ ಕೆಲಸ ಕಾರ್ಯಗಳಿಗೆ ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶದ ಸಹಸ್ರ ಸಂಖ್ಯೆಯ ಜನರು ಮಾರುಕಟ್ಟೆಯಲ್ಲಿ ಕಿಕ್ಕಿರಿದು ನೆರೆದಿದ್ದರು. ಆದರೆ ಪುನಃ ಬೆಳಿಗ್ಗೆ 10 ಗಂಟೆ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ಮುಚ್ಚಿಸಿದ್ದರಿಂದ ಜನರ ಮತ್ತು ವ್ಯಾಪಾರಿಗಳು ಮತ್ತೆ ಗೊಂದಲಕ್ಕೀಡಾದರು.

‘ಕರ್ಫ್ಯೂ ವಿಧಿಸಲಾಗಿದೆ ಎಂದು ಮೊದಲೇ ಹೇಳಿದ್ದರೆ ಜನರು ಮಾರುಕಟ್ಟೆಗೆ ಬರುತ್ತಿರಲಿಲ್ಲ. ನಾವು ಅಂಗಡಿ ತೆರೆಯುತ್ತಿರಲೇ ಇಲ್ಲ. ಆದರೆ ಯಾವುದನ್ನೂ ತಿಳಿಸದೆ ದಿಢೀರನೆ ನಿಯಮ ಜಾರಿಗೊಳಿಸಿದರೆ ಹೇಗೆ’ ಎಂದು ಕೆಲವು ವ್ಯಾಪಾರಿಗಳು ಆಕ್ಷೇಪ, ಅಸಮಾಧಾನ ಹೊರಹಾಕಿದರು.

ಲಾಠಿ ಹಿಡಿದ ಮುಖ್ಯಾಧಿಕಾರಿ: ಈ ಮಧ್ಯೆ ಸ್ವತಃ ಕಾರ್ಯಾಚರಣೆಗೆ ಇಳಿದ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಲಾಠಿ ಹಿಡಿದು ಅಂಗಡಿಗಳನ್ನು ಮುಚ್ಚಿಸಲು ಮುಂದಾದರು. ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರಿಗೆ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT