ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ವಾರಸುದಾರರಿಗೆ ಪರಿಹಾರ ನೀಡಿ- ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್

ಕೋವಿಡ್‌ ಪರಿಹಾರ: ವಿಡಿಯೊ ಸಂವಾದದಲ್ಲಿ ತಹಶೀಲ್ದಾರರಿಗೆ
Last Updated 6 ಅಕ್ಟೋಬರ್ 2021, 5:26 IST
ಅಕ್ಷರ ಗಾತ್ರ

ಕೊಪ್ಪಳ: ‘ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ನಿಜವಾದ ವಾರಸುದಾರರಿಗೆ ಪರಿಹಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಿಸುವ ಕುರಿತು ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್‌ಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಮಾತನಾಡಿದರು.

ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬದವರು ದುಃಖದಲ್ಲಿರುತ್ತಾರೆ. ದಾಖಲಾತಿ ನೆಪದಲ್ಲಿ ವಿಳಂಬ ಮಾಡಬೇಡಿ. ಬದಲಿಗೆ ಅಗತ್ಯ ದಾಖಲೆಗಳನ್ನು ಪಡೆದು, ತ್ವರಿತವಾಗಿ ಪರಿಹಾರ ಒದಗಿಸಬೇಕು. ಮೃತರ ಕುಟುಂಬದವರ ಮನೆಗೆ ತೆರಳಿ, ಎಲ್ಲ ತಹಶೀಲ್ದಾರರು ತಮ್ಮ ತಾಲ್ಲೂಕಿನ ದಾಖಲೆಗಳನ್ನು ಪಡೆದು, ನಮ್ಮ ಕಚೇರಿಗೆ ಸಲ್ಲಿಸಬೇಕು. ಒಂದು ವಾರದಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಬೇಕು ಮತ್ತು ಅವರಿಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಅವರು ಸೂಚನೆ ಈ ವೇಳೆ ನೀಡಿದರು.

ಪರಿಹಾರ ಪಾವತಿ ವಿಧಾನ: ಕೇಂದ್ರ ಸರ್ಕಾರದಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ₹1 ಲಕ್ಷ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸುವುದು. ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ತಲಾ ₹50 ಸಾವಿರ ಪರಿಹಾರವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ಅವರು ಹೇಳಿದರು.

ಕೋವಿಡ್‌ನಿಂದ ಬಿಪಿಎಲ್ ಕುಟುಂಬದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಲ್ಲಿ ಅಂಥ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹1 ಲಕ್ಷ ಮತ್ತು ಎಸ್‌ಡಿಆರ್‌ಎಫ್ ಅಡಿ ₹50 ಸಾವಿರ ಸೇರಿದಂತೆ ಒಟ್ಟು ₹1.50 ಲಕ್ಷ ಪಾವತಿಸಲಾಗುತ್ತದೆ. ಅಲ್ಲದೆ, ಕೋವಿಡ್‌ನಿಂದ ಬಿಪಿಎಲ್ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದ್ದಲ್ಲಿ ಅಂಥ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹1 ಲಕ್ಷ ಮತ್ತು ಎಸ್‌ಡಿಆರ್‌ಎಫ್ ಅಡಿ ಮೃತರ ಸಂಖ್ಯೆಗೆ ಅನುಗುಣವಾಗಿ ತಲಾ ₹50 ಸಾವಿರ ಪಾವತಿಸಲಾಗುತ್ತದೆ ಎಂದು ಹೇಳಿದರು.

ಬಿಪಿಎಲ್ ಹೊರತುಪಡಿಸಿದ ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದ್ದಲ್ಲಿ ಅಂಥ ಕುಟುಂಬಕ್ಕೆ ಎಸ್‌ಡಿಆರ್‌ಎಫ್ ಅಡಿ ಮೃತ ಸಂಖ್ಯೆಗೆ ಅನುಗುಣವಾಗಿ ತಲಾ ₹50 ಸಾವಿರ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ವಿವರಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಇ-ಜನ್ಮ ತಂತ್ರಾಂಶ ಮತ್ತು ಪರಿಹಾರ ಪೋರ್ಟಲ್‌ಗಳ ಕುರಿತು ಮಾಹಿತಿ ನೀಡಿದರು.

ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಹೇಮಂತ್‌ಕುಮಾರ್.ಎನ್, ಜಿಲ್ಲಾ ವಾರ್ತಾಧಿಕಾರಿ ಜಿ.ಸುರೇಶ ಅವರು ಈ ವೇಳೆ ಸಭೆಯಲ್ಲಿಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT