ಮಂಗಳವಾರ, ಫೆಬ್ರವರಿ 7, 2023
27 °C
ದೇಶದಾದ್ಯಂತ ಖ್ಯಾತಿ ಗಳಿಸಿದ ಅಂಜನಾದ್ರಿ ಬೆಟ್ಟ, ಸ್ಥಳೀಯರ ಆಶಯಕ್ಕೆ ಸಿಗಲಿ ಮಾನ್ಯತೆ, ಇಂದು ಹನುಮಮಾಲಾ ಸಂಭ್ರಮ

ಅಂಜನಾದ್ರಿಯ ಅಭಿವೃದ್ಧಿ; ಮೂಲಸ್ವರೂಪಕ್ಕೆ ಆಗದಿರಲಿ ಧಕ್ಕೆ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಹಲವು ದಶಕಗಳ ಹಿಂದೆ ಏನೂ ಅಲ್ಲದ, ಕಿಂಚಿತ್ತೂ ಅಭಿವೃದ್ಧಿ ಕಾಣದೇ ಇದ್ದ ಅಂಜನಾದ್ರಿ ಬೆಟ್ಟ ಈಗ ವಿದೇಶಗಳಲ್ಲಿಯೂ ಖ್ಯಾತಿ ಪಡೆದಿದೆ. ವರ್ಷದಿಂದ ವರ್ಷಕ್ಕೆ ಅಂಜನಾದ್ರಿಗೆ ಬರುವ ಭಕ್ತರು ಹಾಗೂ ಗಣ್ಯವ್ಯಕ್ತಿಗಳ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಗುತ್ತಿದ್ದಂತೆ ಸರ್ಕಾರ ಅಭಿವೃದ್ಧಿಗೆ ಮುಂದಾಗಿದೆ.

ಅಂಜನಾದ್ರಿ ಐತಿಹಾಸಿಕವಾಗಿ ಗಮನ ಸೆಳೆಯುತ್ತಿದೆ. ಕಿಷ್ಕಿಂಧೆ ಪ್ರದೇಶದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹತ್ತು, ಹಲವು ಯೋಜನೆಗಳನ್ನು ರೂಪಿಸಿದೆ. ₹120 ಕೋಟಿ ಮೀಸಲಿಟ್ಟಿದೆ. ಆದರೆ, ಅಭಿವೃದ್ಧಿ ಹೇಗಿರಬೇಕು ಎನ್ನುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಜೊತೆಗೆ ಕ್ಷೇತ್ರದ ಇತಿಹಾಸವೂ ಅನೇಕರಲ್ಲಿ ಕುತೂಹಲ ಮೂಡಿಸಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸರ್ಕಾರ ತನ್ನದೇ ಆದ ಯೋಜನೆಗಳನ್ನು ರೂಪಿಸಿದ್ದರೂ ಸ್ಥಳೀಯ ಜನ, ಇತಿಹಾಸತಜ್ಞರು, ಸಂಶೋಧಕರು, ಸಾಹಿತಿಗಳು ಹಾಗೂ ಕಲಾವಿದರು ‘ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿ ಯಲ್ಲಿ ಅಭಿವೃದ್ಧಿಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಅಂಜನಾದ್ರಿ ಬೆಟ್ಟ ಕೇವಲ ಐತಿಹಾಸಿಕವಾಗಿ ಮಾತ್ರವಲ್ಲ, ಸಸ್ಯಸಂಪತ್ತಿನ ರಾಶಿಯಿಂದಲೂ ಖ್ಯಾತಿ ಪಡೆದಿದೆ. ವನಸ್ಪತಿಗಳ ತಾಣವಾಗಿದೆ. ಆದ್ದರಿಂದ ಸರ್ಕಾರ ಕಿಷ್ಕಿಂಧೆ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಮಾಡ ಬೇಕು. ಕಾಂಕ್ರೀಟ್‌ ರಸ್ತೆಗಿಂತಲೂ ಗ್ರಾಮೀಣ ಜೀವನ ಬಿಂಬಿಸುವ ನೈಸರ್ಗಿಕವಾಗಿ ಅಭಿವೃದ್ಧಿ ಮಾಡಿದರೆ ಅಂಜನಾದ್ರಿ ಜಗತ್ತಿಗೆ ಮಾದರಿಯಾಗಿಸಬಹುದು’ ಎಂದು ಕೊಪ್ಪಳದ ಕನ್ನಡ ಉಪನ್ಯಾಸಕ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಅಭಿಪ್ರಾಯಪಟ್ಟರು.

ಧಾರ್ಮಿಕ ಪ್ರವಾಸೋದ್ಯಮವೇ ಆದ್ಯತೆಯಾಗಲಿ

ಕೊಪ್ಪಳ: ಆಂಜನೇಯನು ಪವನಪುತ್ರ, ಕೇಸರಿನಂದನ, ಮಾರುತಿ, ಹನುಮಂತ ಎಂದೆಲ್ಲಾ ಪ್ರಸಿದ್ಧನಾಗಿದ್ದಾನೆ. ಆತನ ದೇವಾಲಯಗಳು ಇಲ್ಲದ ಊರುಗಳೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಹನುಮ ಶೈವರಿಗೂ ಬೇಕು, ವೈಷ್ಣವರಿಗೂ ಬೇಕು. ಜೈನ್‌, ಸಿಖ್‌ ಸಮುದಾಯದವರೂ ಹನುಮನನ್ನು ಆರಾಧಿಸುತ್ತಾರೆ.

ಕರ್ನಾಟಕದ ಕಿಷ್ಕಿಂಧೆ ಪ್ರದೇಶದ ಹನುಮನನ್ನು ಉತ್ತರ ಭಾರತೀಯರು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ರಾಜಸ್ಥಾನ, ಜಾರ್ಖಂಡ್‌, ಮಧ್ಯಪ್ರದೇಶ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ, ಹರಿಯಾಣದ ಹನುಮನ ಭಕ್ತರು ತಮ್ಮ ಗ್ರಾಮಗಳ ಆಂಜನೇಯ ದೇವಾಲಯಗಳಷ್ಟೇ ಅಲ್ಲದೆ; ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೂ ಪ್ರತಿವರ್ಷವೂ ಆಗಮಿಸಿ ರಾಮಚರಿತ ಮಾನಸ, ಹನುಮಾನ್‌ ಚಾಲಿಸ್‌ ಪಠಿಸುತ್ತಾರೆ.

‘ಪವನಸುತ ಹನುಮಾನ’ ಎಂದು ಸ್ವತಃ ರಾಮನೇ ಗುಣಗಾನ ಮಾಡಿರುವುದನ್ನು ಕಿಷ್ಕಿಂಧಾಕಾಂಡದಲ್ಲಿ ಕಾಣಬಹುದು. ಹನುಮನ ವಾಕ್ಚಾತುರ್ಯ, ವಿನಯತೆ, ಪಾಂಡಿತ್ಯ, ಶೌರ್ಯ, ಸಾಹಸ, ನಿಷ್ಠೆಗೆ ರಾಮನು ಮನಸೋತು ಹೋಗಿದ್ದ. ಹನುಮಂತನಂಥ ಆಪ್ತನನ್ನು ಪಡೆದಿದ್ದು ನನ್ನ ಪುಣ್ಯ ಎಂಬ ಭಾವನೆ ರಾಮನಲ್ಲಿ ಮೂಡಿತ್ತು.

ಹನುಮನ ತವರಿಗೆ ಹಲವು ಸಾಕ್ಷ್ಯ : ಹನುಮ ಕನ್ನಡ ನೆಲದ ವೀರ ಎನ್ನುವುದರಲ್ಲಿ ಎರಡು ಮಾತಿಲ್ಲ. ಹುಯಿಲಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಕನ್ನಡ ಗೀತೆಯಲ್ಲಿ ‘ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು’ ಎಂದು ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಹಿಂದೆಯೇ ಹೇಳಿದ್ದಾರೆ.

ತುಂಗಭದ್ರಾ ತೀರದಲ್ಲಿದ್ದ ಕಿಷ್ಕಿಂಧೆ ರಾಜ್ಯವೇ ಹನುಮಂತಾದ್ರಿ. ಕಿಷ್ಕಿಂಧೆಯ ಅಂಜನಾದ್ರಿಯಲ್ಲಿ ಆಂಜನೇಯ ಜನಿಸಿದ್ದು ಹಂಪಿ–ಆನೆಗೊಂದಿ ಎಂದು ಹೆಸರಾಗಿರುವ ಪ್ರದೇಶವೇ ರಾಮಾಯಾಣ ಕಾಲದ ಕಿಷ್ಕಿಂಧೆ ಎನ್ನುವುದು ಜನಜನಿತ. ಅಂಜನಾದ್ರಿ ಸಮೀಪದ ಶಿವಪುರದಲ್ಲಿದ್ದ ಗೌತಮ ಹಾಗೂ ಅಹಲ್ಯಾದೇವಿ ಎಂಬ ಋಷಿ ದಂಪತಿ ಮಗಳೇ ಅಂಜನಾದೇವಿ. ಕುಂಜರ ಮತ್ತು ವಿಂದ್ಯಾವಳಿಯರು ಆಕೆಯನ್ನು ಸಾಕಿದ್ದರು. ಅಂಜನಾದೇವಿಯ ಗುಡಿ ಈಗಲೂ ಶಿವಪುರದಲ್ಲಿದ್ದು, ಆ ಗ್ರಾಮದ ಜನ ಹನುಮ ಜಯಂತಿಯಂದು ಆಂಜನಾದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಅಂಜನಾದ್ರಿ ಬೆಟ್ಟಕ್ಕೆ ತರುತ್ತಾರೆ. ಇದಕ್ಕೆ ತಾಯಿ– ಮಗನ ಭೇಟಿ ಎಂದು ಕರೆಯುತ್ತಾರೆ. ಶಿವಪುರದಲ್ಲಿದ್ದ ಅಂಜನಾದ್ರಿಯ ಬಾಲ್ಯದ ಒಂದು ಪ್ರಸಂಗವನ್ನು ಪಂಪಾಮಹಾತ್ಮೆ ಹಾಗೂ ಶಿವಪುರ ಕ್ಷೇತ್ರ ಮಹಿಮೆಯಲ್ಲಿ ವರ್ಣಿಸಲಾಗಿದೆ. ಅಂಜನಾದೇವಿ ಸುಮೇರು ಪರ್ವತದ ವಾನರವೀರ ಕೇಸರಿಯನ್ನು ವಿವಾಹವಾಗಿ ಆ ಪರ್ವತದಲ್ಲಿಯೇ ಆಂಜನೇಯನಿಗೆ ಜನ್ಮನೀಡಿದಳು. ಹಾಗಾಗಿ ಅಂದಿನಿಂದ ಸುಮೇರು ಪರ್ವತ ಅಂಜನಾದ್ರಿ ಎಂದು ಹೆಸರು ಪಡೆಯಿತು.

ಅಂಜನಾದ್ರಿ ಅಭಿವೃದ್ಧಿಯ ಆಶಯ: ಅಂಜನಾದ್ರಿ ಬೆಟ್ಟ ದೇಶದಾದ್ಯಂತ ಪ್ರಸಿದ್ಧಿಯಾಗಿದೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಹನುಮಮಾಲೆ, ಜನವರಿಯಲ್ಲಿ ರಾಮಾಯಣ ವಾರ್ಷಿಕೋತ್ಸವ, ಏಪ್ರಿಲ್‌ನಲ್ಲಿ ಹನುಮ ಜಯಂತಿ, ರಾಮನವಮಿ ಕಾರ್ಯಕ್ರಮಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಅಂಜನಾದ್ರಿ ಬೆಟ್ಟವನ್ನು ಸುಗಮವಾಗಿ ಏರಲು ಭಕ್ತರು ಪ್ರಯಾಸ ಪಡಬೇಕಾಗಿದೆ. 574 ಮೆಟ್ಟಿಲುಗಳಿದ್ದು, ಅವುಗಳನ್ನು ಏರಲು ಗಟ್ಟಿಗರಿಂದ ಮಾತ್ರ ಸಾಧ್ಯ. ಬೆಟ್ಟದ ಮೇಲೆ ವಿಜಯನಗರ ಕಾಲದಲ್ಲಿ ಕಟ್ಟಿದ ಚಿಕ್ಕದೇವಾಲಯವಿದ್ದು, ಕೆಲವೇ ಜನರಿಗೆ ಮಾತ್ರ ಅರ್ಚನೆಗೆ ಅವಕಾಶವಿದೆ.

ಹಾಗಾಗಿ ಸರ್ಕಾರ ಬೆಟ್ಟದ ಬಳಿ ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆ, ಸಾರ್ವಜನಿಕ ಶೌಚಾಲಯ, ಯಾತ್ರಿಕರಿಗೆ 600 ವಸತಿಕೊಠಡಿಗಳು, 20 ಸಿಬ್ಬಂದಿ ವಸತಿಗೃಹ, ಸಮುದಾಯ ಭವನ, ವಿಐಪಿ ಅತಿಥಿಗೃಹಗಳು, ಸ್ನಾನಘಟ್ಟ, ಪ್ರದರ್ಶನ ಪಥ, ಬೆಟ್ಟಕ್ಕೆ ರೋಪ್‌ ವೇ, ಮಾಹಿತಿ ಕೇಂದ್ರಗಳ ಜೊತೆಗೆ ದೇವಾಲಯವನ್ನು ಪುನರ್‌ ನಿರ್ಮಿಸುವ ಯೋಜನೆ ರೂಪಿಸಿದೆ. ಜೊತೆಗೆ ರಾಮಾಯಣ ಕುರಿತು ಲೇಸರ್ ಶೋ ವಿಡಿಯೊ, ಆಡಿಯೊ ಮಾಡುವ ಯೋಜನೆ ಹೊಂದಿದೆ.

ಅಂಜನಾದ್ರಿ ಅಭಿವೃದ್ಧಿ ಕುರಿತು ಈ ಎಲ್ಲಾ ಯೋಜನೆ ಸ್ವಾಗತಾರ್ಹವಾದರೂ ನಿರ್ಮಾಣ ಸ್ವರೂಪದ ಬಗ್ಗೆ ಅಪಸ್ವರ ಎದ್ದಿವೆ. ಇತ್ತೀಚೆಗೆ ಆನಗೊಂದಿಯಲ್ಲಿ ಸಭೆ ಸೇರಿದ್ದ ರಾಜವಂಶಸ್ಥರು, ಆನೆಗೊಂದಿ ಭಾಗದ ರೈತರು, ಸಾರ್ವಜನಿಕರು ಅಭಿವೃದ್ಧಿ ಹೆಸರಿನಲ್ಲಿ ಸುಂದರ ಪ್ರಾಕೃತಿಕ ಪರಿಸರವನ್ನು ಹಾಳು ಮಾಡಿ ಕಾಂಕ್ರೀಟ್‌ ಕಾಡು ರೂಪಿಸುವುದನ್ನು ವಿರೋಧಿಸಿದ್ದಾರೆ.

ಬೆಟ್ಟದ ಬಳಿ ಇರುವ ಫಲವತ್ತಾದ ಕೃಷಿಭೂಮಿಯನ್ನು ರೈತರಿಂದ ಕಿತ್ತುಕೊಳ್ಳದೇ ಬೆಟ್ಟದ ಹಿಂಭಾಗದಲ್ಲಿರುವ ಅಂಜನಹಳ್ಳಿ ಹಾಗೂ ಚಿಕ್ಕರಾಂಪುರದಲ್ಲಿರುವ ನೂರಾರು ಎಕರೆ ಭೂಮಿಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎನ್ನುವುದು ಎಲ್ಲರ ಸಲಹೆಯಾಗಿದೆ.

ಅಂಜನಾದ್ರಿ ಅಭಿವೃದ್ಧಿ ಯೋಜನೆ ಕಟ್ಟಡಗಳು ಪರಿಸರಕ್ಕೆ ಪೂರಕವಾಗಿದ್ದು, ಸ್ಥಳೀಯ ಪರಂಪರೆ ಪ್ರತಿನಿಧಿಸುವಂತಿರಲಿ. ಸುತ್ತಲಿನ ರಾಮಾಯಣಕ್ಕೆ ಸಂಬಂಧಿಸಿದ ಋಷಿಮುಖ ಪರ್ವತ, ವಾಲಿ ಪರ್ವತ, ಪಂಪಾಸರೋವರ, ಚಿಂಚಿಲ ಕೋಟೆ, ತಾರಾ ಪರ್ವತ, ಶಬರಿ ಗವಿ, ವಾಲಿಕಾಷ್ಠ, ಸುಗ್ರೀವ ಗವಿಗಳನ್ನು ಅಭಿವೃದ್ಧಿಪಡಿಸಿದರೆ ಅಂಜನಾದ್ರಿ ಹಾಗೂ ಕಿಷ್ಕಿಂಂಧೆಗಳು ದೇಶದಲ್ಲಿಯೇ ಮಾದರಿ ಕ್ಷೇತ್ರಗಳಾಗಿ ಅಭಿವೃದ್ಧಿ ಹೊಂದಿ ಧಾರ್ಮಿಕ ಪ್ರವಾಸೋದ್ಯಮ ಬೆಳೆಯಲು ಅನುಕೂಲವಾಗುತ್ತದೆ.

ಡಾ.ಶರಣಬಸಪ್ಪ ಕೋಲ್ಕಾರ

ಲೇಖಕರು: ಇತಿಹಾಸ ಹಾಗೂ ಪುರಾತತ್ವ ಸಂಶೋಧಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು