ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

Published 27 ಏಪ್ರಿಲ್ 2024, 16:29 IST
Last Updated 27 ಏಪ್ರಿಲ್ 2024, 16:29 IST
ಅಕ್ಷರ ಗಾತ್ರ

ಕೊಪ್ಪಳ: ‘ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ, ಅವಮಾನ ಮತ್ತು ಮಲತಾಯಿ ಧೋರಣೆ ತೋರಿಸುತ್ತಲೇ ಬಂದಿದ್ದರೂ ರಾಜ್ಯದ ಬಿಜೆಪಿ ಸಂಸದರು ತುಟಿ ಬಿಚ್ಚಿಲ್ಲ. ಆ ಸಂಸದರನ್ನು ಮತ್ತು ಬಿಜೆಪಿ ಸರ್ಕಾರವನ್ನು ಹೊಡೆದೊಡಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿನ ಭಾಗ್ಯನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಮೇಲಿಂದ ಮೇಲೆ ಖಾಲಿ ಚೊಂಬು ಪ್ರದರ್ಶಿಸಿ ಕೇಂದ್ರದ ವಿರುದ್ಧ ಹರಿಹಾಯ್ದರು.

‘ಕೇಂದ್ರ ಸರಣಿ ಅನ್ಯಾಯಗಳನ್ನು ಮಾಡಿದರೂ ರಾಜ್ಯದ ಸಂಸದರು ಮೌನಕ್ಕೆ ಜಾರಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಎದುರು ಮಾತನಾಡುವ ಧೈರ್ಯ ಹಾಗೂ ತಾಕತ್ತು ಬಿಜೆಪಿ ಸಂಸದರಿಗೆ ಇಲ್ಲ’ ಎಂದರು.

‘ನಮ್ಮ ಶ್ರಮದ ದುಡಿಮೆಯ ಹಣ ಪಡೆದ ಕೇಂದ್ರ ಸರ್ಕಾರ ನಮಗೆ ಖಾಲಿ ಚೆಂಬು ನೀಡಿ ಕನ್ನಡಿಗರ ಸ್ವಾಭಿಮಾನ ಕೆಣಕಿದೆ. ತೆರಿಗೆ ವಿಚಾರದಲ್ಲಿ ಘನಘೋರ ಅನ್ಯಾಯ ಮಾಡಿದೆ. ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಡುವುದಾಗಿ ಘೋಷಿಸಿ ನಯಾಪೈಸೆಯೂ ನೀಡಿಲ್ಲ. ಕೇಂದ್ರದಿಂದ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮಾತ್ರವಲ್ಲ, ದ್ವೇಷದ ರಾಜಕಾರಣವೂ ನಡೆಯುತ್ತಿದೆ’ ಎಂದು ಆರೋಪಿಸಿದರು.

’ಈಗಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮೆಲ್ಲರ ಸಂಸಾರ, ಬದುಕು, ಭವಿಷ್ಯ ಅಡಗಿದೆ. ಪ‍್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು. ಎಲ್ಲದರ ಮೇಲೂ ತೆರಿಗೆ ಹಾಕಿ ಕುಬೇರರ ಬದುಕು ಮತ್ತಷ್ಟು ಶ್ರೀಮಂತ ಮಾಡಿದ ಹಾಗೂ ಬಡವರ ಜೀವನ ಇನ್ನಷ್ಟು ಕಷ್ಟಕರವಾಗಿಸಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಉದ್ಯಮಿ ಶ್ರೀನಿವಾಸ ಗುಪ್ತಾ, ಪಕ್ಷದ ಮುಖಂಡರಾದ ಅಮರೇಶ ಕರಡಿ, ಎಸ್.ಬಿ ನಾಗರಳ್ಳಿ, ಜುಲ್ಲು ಖಾದ್ರಿ, ಕೃಷ್ಣ ಇಟ್ಟಂಗಿ, ಜ್ಯೋತಿ ಗೊಂಡಬಾಳ, ಕಿಶೋರಿ ಬೂದನೂರ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

‘ರಾಜ್ಯದ ಬಿಜೆಪಿ ಸಂಸದರು ನಾಲಾಯಕ್‌’

ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಕೇಂದ್ರ ಬೇರೆ ರಾಜ್ಯಗಳಿಗೆ ನೀಡುತ್ತಿದ್ದರೂ ರಾಜ್ಯದ ಬಿಜೆಪಿ ಸಂಸದರು ಸುಮ್ಮನಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಮೋದಿ ಎದುರು ಉಸಿರೆತ್ತುವ ಧೈರ್ಯ ಯಾರಿಗೂ ಇಲ್ಲ. ರಾಜ್ಯದ ಬಿಜೆಪಿ ಸಂಸದರು ನಾಲಾಯಕ್ ಎಂದು ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ತೆರಿಗೆ ಹಣ ಪಡೆಯುತ್ತಿರುವ ಬೇರೆ ರಾಜ್ಯಗಳಲ್ಲಿ ಸ್ಪರ್ಧೆ ಮಾಡಿ ಕರ್ನಾಟಕದ ಬಿಜೆಪಿ ಸಂಸದರು ಗೆದ್ದು ಬರಲಿ’ ಎಂದು ಸವಾಲು ಹಾಕಿದ ಅವರು ’ಇಲ್ಲಿನ ಜನರ ಮತ ಪಡೆದು ಮೌನಕ್ಕೆ ಜಾರಿರಿರುವುದು ಸರಿಯೇ’ ಕಟುವಾಗಿಯೇ ಪ್ರಶ್ನಿಸಿದರು.

ಒಂದು ತಿಂಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ರಾಜ್ಯಕ್ಕೆ ನಯಾಪೈಸೆ ಕೊಡುವುದು ಬಾಕಿಯಿಲ್ಲ ಎಂದು ಹೇಳಿದ್ದರು. ನಾವು ಸುಪ್ರೀಂ ಕೋರ್ಟ್‌ಗೆ ಹೋದ ಬಳಿಕ ಈಗ ಬರಪರಿಹಾರ ಬಂದಿದ್ದು ಹೇಗೆ?
ಕೃಷ್ಣ ಬೈರೇಗೌಡ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT