ಬುಧವಾರ, ಸೆಪ್ಟೆಂಬರ್ 22, 2021
28 °C
ನಿಯಮಿತವಾಗಿ ಕ್ರಿಮಿನಾಶಕ ಸಿಂಪರಣೆ ಮಾಡದ ಮಾಲೀಕರು

ಕೊಪ್ಪಳ: ಕೋಳಿ ಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಳ; ಗ್ರಾಮಸ್ಥರ ಆಕ್ಷೇಪ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮುಂಗಾರು ಮಳೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನೀರು ನಿಲ್ಲುವ ಜೊತೆಗೆ ಹತ್ತಾರು ಸಂಖ್ಯೆಯಲ್ಲಿರುವ ಬೃಹತ್‌ ಪ್ರಮಾಣದ ಕೋಳಿ ಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಾಗುತ್ತಿದ್ದು, ಸುತ್ತಲಿನ ಗ್ರಾಮಸ್ಥರು ಸಂಕಟಪಡುವಂತೆ ಆಗಿದೆ.

ತಾಲ್ಲೂಕಿನ ಬಸಾಪುರ, ಭೀಮನೂರ, ಗಿಣಗೇರಾ, ಕಾಸನಕಂಡಿ ಭಾಗದದಲ್ಲಿ ಸಾವಿರಾರು ಕೋಳಿ ಮತ್ತು ಮೊಟ್ಟೆಗಳನ್ನು ಉತ್ಪಾದಿಸುವ 44ಕ್ಕೂ ಹೆಚ್ಚು ಬೃಹತ್‌ ಪ್ರಮಾಣದ ಕೋಳಿ ಸಾಕಾಣಿಕೆ ಕೇಂದ್ರಗಳು ಇವೆ. ಇವು ಉದ್ಯಮದ ಸ್ವರೂಪ ಪಡೆದುಕೊಂಡಿದ್ದು, ಜಿಲ್ಲೆಯ ಆರ್ಥಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಅದರ ಜೊತೆಗೆ ಶುಚಿತ್ವದ ಆರೋಗ್ಯದ ದೃಷ್ಟಿಯಿಂದ ಮಾಲೀಕರು ಲಾಭದ ಜೊತೆಗೆ ಸಾಮಾಜಿಕ ಕಾಳಜಿಯನ್ನು ಮೆರೆಯಬೇಕಾದ ತುರ್ತು ಸಂದರ್ಭ ಇದಾಗಿದೆ.

ಬಸಾಪುರದ ಹೊರವಲಯದಲ್ಲಿರುವ ಪೊಲೀಸ್‌ ವಸತಿ ಗೃಹದಲ್ಲಿ 400ಕ್ಕಿಂತ ಹೆಚ್ಚು ನಿವಾಸಿಗಳು ವಾಸಿಸುತ್ತಾರೆ. ಇಲ್ಲಿಯೂ ನೊಣಗಳ ಹಾವಳಿ ವಿಪರೀತವಾಗಿದ್ದು, ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಅಲ್ಲದೆ. ಅಡುಗೆ ಮನೆಗೆ ನುಗ್ಗಿ ಊಟ ಮಾಡಲು ಹಿಂಜರಿಯಬೇಕಾದ ಪರಿಸ್ಥಿತಿ ಇದೆ.

ಕೋಳಿ ಫಾರಂಗಳ ಅವ್ಯವಸ್ಥೆ ಕುರಿತು ದೂರುಗಳು ಬಂದರೆ ಸಂಬಂಧಿಸಿದ ತಹಶೀಲ್ದಾರ್‌ ಕಚೇರಿ, ಪಶು ಸಂಗೋಪನಾ ಇಲಾಖೆ ಮೇಲಿಂದ ಮೇಲೆ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಸೂಚಿಸಬೇಕು. ಅದನ್ನು ಬಿಟ್ಟು 'ಚೌಕಾಶಿ' ಮಾಡುವ ಮೂಲಕ ಮತ್ತೆ ಅದೇ ಹಳೆ ಚಾಳಿ ಮುಂದುವರಿಸುವುದರ ಕುರಿತು ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳು ಮೇಲಿಂದ ಮೇಲೆ ಮನವಿ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿವೆ.

ಕೈಗೊಳ್ಳಬೇಕಾದ ಕ್ರಮವೇನು?: ಜಿಲ್ಲೆಯಲ್ಲಿ 22 ಮೊಟ್ಟೆಗಾಗಿ ಸಾಕಾಣಿಕೆ ಮಾಡುವ ಬೃಹತ್‌ ಕೋಳಿ ಫಾರ್ಮ್‌ಗಳು, 22 ಮಾಂಸಕ್ಕೆ ಬೇಡಿಕೆ ಇರುವ ಕೋಳಿ ಸಾಕಾಣಿಕೆ ಕೇಂದ್ರಗಳು ಇವೆ. 10 ಲಕ್ಷಕ್ಕೂ ಹೆಚ್ಚು ಕೋಳಿಗಳು ಇರುವ ಅಂದಾಜುಗಳು ಇವೆ. ಅವುಗಳಿಗೆ ರೋಗ ರುಜಿನ ಬಾರದಂತೆ ಎಚ್ಚರಿಕೆ, ರೋಗ ಬಂದ ಕೋಳಿ ಸತ್ತರೆ ಅವುಗಳನ್ನು ವೈಜ್ಞಾನಿಕ ವಿಲೇವಾರಿ, ಸುತ್ತಲಿನ ವಾತಾವರಣದಲ್ಲಿ ಸ್ವಚ್ಛತೆ, ಕ್ರಿಮಿನಾಶಕವನ್ನು ಸಿಂಪಡಣೆ ಮಾಡಬೇಕು.

ಪರ್ಯಾಯ ಉದ್ಯೋಗ: ಕೋಳಿ ಸಾಕಾಣಿಕೆ ಕೇಂದ್ರಗಳಿಂದ ಕೋಳಿ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ. ಅಲ್ಲದೆ ಕೋಳಿಗಳಿಗೆ ಆಹಾರವಾದ ಮೆಕ್ಕೆಜೋಳ ಸೇರಿದಂತೆ ವಿವಿಧ ಕಾಳುಕಡಿಯ ನುಚ್ಚುಗಳನ್ನು ಹೊತ್ತು ನೂರಾರು ಲಾರಿಗಳು ಬರುತ್ತವೆ. ಇದು ರೈತರಿಗೂ ಮತ್ತು ಮಾಲೀಕರಿಗೆ ಲಾಭದಾಯಕವಾದ ಉದ್ಯೋಗವಾಗಿದೆ.

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ಕಾರಣದಿಂದ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿ ಕೋಳಿ ಉದ್ಯಮ ಅತ್ಯಂತ ಸಂಕಷ್ಟದಲ್ಲಿದೆ ಎಂಬುವುದು ಉದ್ಯಮಿಗಳ ಅಳಲು, ಇದರ ಮಧ್ಯೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಕೇಂದ್ರಗಳ ಮಾಲೀಕರು ಹೇಳುತ್ತಾರೆ.

***

ತಾಲ್ಲೂಕಿನ ಭೀಮನೂರು ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿದ್ದರಿಂದ ಜನರಿಗೆ ವಾಂತಿ, ಭೇದಿ, ಜ್ವರ ಹಾಗೂ ಇತರೆ ಕಾಯಿಲೆ ಉಲ್ಬಣಿಸಿದ್ದು, ಕೂಡಲೇ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು

- ಬಾಬುಸಾಬ್. ಆರ್.ವಾಲೀಕಾರ್, ಅಧ್ಯಕ್ಷ, ನವ ಕರ್ನಾಟಕ ಕನ್ನಡಿಗರ ಸಮಿತಿ

***

ಕೋಳಿ ಫಾರಂ ಮಾಲೀಕರಿಗೆ ನಿಯಮಿತವಾಗಿ ಕ್ರಿಮಿನಾಶಕ, ಸ್ಯಾನಿಟೈಜೇಶನ್‌ ಮಾಡಲು ಸೂಚಿಸಲಾಗಿದೆ. ಕೋಳಿಗಳಿಗೆ ರೋಗ ಬಂದರೆ ಅವುಗಳಿಗೆ ಔಷಧ ವಿತರಣೆ ಮಾಡುವ ಕುರಿತು ಇಲಾಖೆ ಸಲಹೆ ನೀಡುತ್ತಿದೆ

ಯು.ನಾಗರಾಜ, ಉಪನಿರ್ದೇಶಕ, ಪಶುಸಂಪನಾ ಇಲಾಖೆ

***

ಕೊರೊನಾ ಲಾಕ್‌ಡೌನ್ ಕಾರಣದಿಂದ ಕೋಳಿ ಸಾಕಾಣೆ ಮತ್ತು ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ. ನಮ್ಮ ಲಾಭದ ನಿರೀಕ್ಷೆಯ ಜೊತೆಗೆ ಸ್ವಚ್ಛತೆ, ಆರೋಗ್ಯದ ಕಡೆಗೆ ಗಮನಹರಿಸಲಾಗುತ್ತದೆ

- ರಾಮು, ಕೋಳಿ ಫಾರಂ ಮಾಲೀಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.