ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಹಬ್ಬ: ಗ್ರಾಹಕರ ಖರೀದಿ ಸಂಭ್ರಮ

Last Updated 10 ಸೆಪ್ಟೆಂಬರ್ 2021, 5:40 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಸಂಕಷ್ಟ ತೊಲಗಿಸು ವಿಘ್ನೇಶ್ವರ ಎಂದು ಬೇಡಿಕೊಳ್ಳುತ್ತಾ, ಗುರುವಾರ ನಗರದ ಗಾಂಧಿ ಸರ್ಕಲ್ ಮಾರುಕಟ್ಟೆಯಲ್ಲಿ ಗಣೇಶ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿಯನ್ನು ಜೋರಾಗಿ ಮಾಡಿದರು.

ಕೊರೊನಾ 3ನೇ ಸಂಭಾವ್ಯ ಅಲೆ ಆತಂಕದ ಹಿನ್ನಲೆಯಲ್ಲೆ, ರಾಜ್ಯ ಸರ್ಕಾರ ಷರತ್ತುಗಳನ್ವಯ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಿದ್ದು, ತಾಲ್ಲೂಕಿನಲ್ಲಿ ಚತುರ್ಥಿಗೆ ಒಂದು ದಿನ ಬಾಕಿ ಇರುವಾಗಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ತುಸು‌ ಏರಿಕೆಯಾಗಿದೆ.

ಶ್ರಾವಣ ನಂತರದ ಮೊದಲ ಹಬ್ಬ ಗಣೇಶ ಚತುರ್ಥಿ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಗಣೇಶ ಹಬ್ಬ ಸ್ವಲ್ಪ ಮೆರಗು ಪಡೆದಿದೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಹಬ್ಬದ ಆಚರಣೆಗೆ ಅವಕಾಶ ಒದಗಿ ಬಂದಿದ್ದು, ನಗರದಲ್ಲಿ ಪುಟ್ಟ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ಭರಾಟೆ ಹೆಚ್ಚಾಗಿದೆ.

ತಾಲ್ಲೂಕಿನ ಆನೆಗುಂದಿ, ಮಲ್ಲಾಪುರ, ಸಂಗಾಪುರ, ಹಿರೇ ಜಂತಕಲ್, ಬಸಾಪಟ್ಟಣ, ದಾಸನಾಳ, ಮರಳಿ ಹಾಗೂ ನಗರದ ಗುಂಡಮ್ಮ ಕ್ಯಾಂಪ್, ಜಯನಗರ, ಮುರಾರಿ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್ ಸೇರಿದಂತೆ ಇತರೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿ ಮತ್ತು ಸಾವರ್ಜನಿಕರುಗಣೇಶ ಮೂರ್ತಿ ಖರೀದಿಗಾಗಿ ಮುಗಿಬಿದ್ದರು.

ಹಬ್ಬದ ಅಂಗವಾಗಿ ನಗರದ ಗಾಂಧಿವೃತ್ತ, ಮಹಾವೀರ ಸರ್ಕಲ್, ಗುಂಡಮ್ಮ ಕ್ಯಾಂಪ್ ಗಳಲ್ಲಿ ಗಣೇಶ ಹಬ್ಬಕ್ಕೆ ಬೇಕಾಗುವ ಹಣ್ಣು, ಹೂವು, ಡೆಕೊರೇಷನ್ ಸಾಮಗ್ರಿಗಳನ್ನು ತಳ್ಳು ಗಾಡಿಯ ಮೇಲೆ ಇಟ್ಟು ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು.

ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಸೇಬು ₹ 150, ಆರಂಜ್‌ಗೆ ₹ 50, ಸಿತಾಫಲ ₹ 70, ಡಜನ್ ಬಾಳೆ ಹಣ್ಣಿಗೆ ₹ 60 ಹಾಗೂ ಸಣ್ಣ ಗಾತ್ರ ಬಿಲ್ಪತ್ರಿ, ಸಪೋಟಾ, ಮೊಸಂಬಿ, ಸಿತಾಫಲ, ಬೆಳವಳ ಕಾಯಿ ಒಂದಕ್ಕೆ ₹ 20, ಮಾವಿನ ಎಲೆಕಟ್ಟೆಗೆ ₹ 20, ಜೋಡಿ ಬಾಳೆದಿಂಡು ₹ 150 ರಿಂದ ₹ 200 ರಷ್ಟು ದರ ತುಟ್ಟಿಯಾಗಿದ್ದರು, ವಸ್ತುಗಳ ಖರೀದಿ ಜೋರಾಗಿ ನಡೆಯಿತು.

ಪೂಜಾ ಕಾರ್ಯಕ್ರಮಕ್ಕೆ ಹೂವುಗಳು ಮುಖ್ಯವಾಗಿದ್ದು, ಮಾರುಕಟ್ಟೆಯಲ್ಲಿ ಗುಲಾಬಿ ಹೂವಿನ ಮಾಲೆ ₹ 500, ಸೆವಂತಿ, ಚೆಂಡು ಹೂವು ಮೊಳಕ್ಕೆ ₹ 40, ಜರ್ಬಾರ ಒಂದಕ್ಕೆ ₹ 20, ಒಂದು ಕೆ.ಜಿ ಮಲ್ಲಿಗೆ ₹ 800 ರಂತೆ ಮಾರಾಟ ಮಾಡಲಾಯಿತು.

ಕೋವಿಡ್‌ನಿಂದ ಸಾಕಷ್ಟು ಜನರು ಆರ್ಥಿಕ ಸಂಕಷ್ಟ ಎದುರುಸುತ್ತಿದ್ದು, ಹಬ್ಬ ಆಚರಣೆಗೆ ಜನರಲ್ಲಿ ಉತ್ಸಾಹ ಕಾಣುತ್ತಿಲ್ಲ. ಎಲ್ಲಾ ವಸ್ತುಗಳು ದುಬಾರಿಯಾಗಿದ್ದು, ಸಾಕಷ್ಟು ಮಂದಿ ಖರೀದಿಯಿಂದ ದೂರ ಉಳಿದಿದ್ದಾರೆ. ಈ ಬಾರಿ ಶೇ 30ರಷ್ಟು ಜನರು ಕೂಡ ಹೂವು ಖರೀದಿ ಆಸಕ್ತಿ ತೋರುತ್ತಿಲ್ಲ ಎಂದು ಹೂವಿನ ವ್ಯಾಪಾರಸ್ಥ ಶಂಕ್ರಪ್ಪ ಹೂಗಾರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT