ಗುರುವಾರ , ಜೂನ್ 30, 2022
25 °C
ಗವಿಮಠದ ಪರಿಸರ ಕಾಳಜಿ ರಾಜ್ಯಕ್ಕೆ ಮಾದರಿ

ಪರಿಸರದ ಅನನ್ಯ ಪರಿಚಾರಕ ಗವಿಶ್ರೀ; ಶ್ರೀಗಳ ಪರಿಸರ ಪ್ರೀತಿಗೆ ಮೆಚ್ಚುಗೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಶರಣರು ಅನ್ನ, ಅಕ್ಷರ, ಅರಿವು ಎಂಬ ತ್ರಿವಿಧ ದಾಸೋಹದ ಮೂಲಕ ಧರ್ಮಕ್ಷೇತ್ರಗಳಲ್ಲಿಯೇ ರಾಜ್ಯಕ್ಕೆ ಮಾದರಿಯಾದದ್ದು ಶ್ರೀ ಗವಿಸಿದ್ಧೇಶ್ವರ ಸಂಸ್ಥಾನಮಠ. ತನ್ನ ಪರಿಸರ ಕಾಳಜಿಯಿಂದ ಬರಗಾಲದ ಜಿಲ್ಲೆಯನ್ನು ನಂದನವನವನ್ನಾಗಿ ಮಾಡುವ ತನ್ನ ಕಾಯಕಕ್ಕೆ ಪ್ರೇರಕ ಶಕ್ತಿಯೇ ಇಂದಿನ 18ನೇ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ.

ಧರ್ಮ, ಸಂಸ್ಕೃತಿ, ಆಚರಣೆ ಜೊತೆಗೆ ಪರಿಸರದ ಕಾಳಜಿಯನ್ನು ತನ್ನ ಸೇವೆಯನ್ನಾಗಿ ಮಾಡಿಕೊಂಡ ಶ್ರೀಗಳು ಗವಿಮಠದ ಜಾತ್ರೆಯನ್ನು ಪರಿಸರದ ಜಾತ್ರೆಯನ್ನಾಗಿ ರೂಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಲಕ್ಷ ವೃಕ್ಷ ಆಂದೋಲನದ ಮೂಲಕ ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡಿಸಿ, ಮಠದ ಆವರಣವನ್ನು ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ.

ಮಠದ ಗುಡ್ಡ ಮತ್ತು ಸುತ್ತಲಿನ ಜಮೀನುಗಳಲ್ಲಿ ಲಕ್ಷಾಂತರ ಔಷಧೀಯ ಸಸ್ಯ, ಹಣ್ಣಿನ ಮರಗಳು, ನೆರಳು ನೀಡುವ ವೃಕ್ಷಗಳು, ಮಠದ ನರ್ಸರಿ ಅರಣ್ಯ ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ತಾವೇ ಮಾಡುವ ಮೂಲಕ ಪರಿಸರದ ಬಗೆಗಿನ ತಮ್ಮ ಕಾಳಜಿಯನ್ನು ಮೇಲಿಂದ ಮೇಲೆ ಸಾರಿ ಹೇಳಿದ್ದಾರೆ.

ಸೈಕಲ್‌ ಜಾಥಾ, ಸಸಿ ನೆಡುವುದು, ನಿಸರ್ಗದ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿರುವ ಸ್ವಾಮೀಜಿ ವರ್ಷದ ಉದ್ದಕ್ಕೂ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡು ಗಮನ ಸೆಳೆಯುತ್ತಾರೆ. ಕಾಯಕದಲ್ಲಿಯೇ ಶಿವನನ್ನು ಕಂಡ ಅವರು ಪರಿಸರದಲ್ಲಿ ಮುಕ್ತಿಯನ್ನು ಅನುಭವಿಸಿದ ಅವಿಮುಕ್ತ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ.

ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ದಾಸೋಹ ಕಲ್ಪಿಸುವ ದಾಸೋಹ ಮಂಟಪ, ಗಿಡಗಳ ನೆರಳಿನಲ್ಲಿಯೇ ಲೋಕಾಭಿರಾಮವಾಗಿ ಕುಳಿತು ಪ್ರಸಾದ ಸೇವಿಸುವ ದೃಶ್ಯ ಚೇತೋಹಾರಿ, ಅದರಂತೆ ಕೈಲಾಸ ಮಂಟಪ, ಕೆರೆಯ ಬದಿಯ ತಿಂಗಳ ಬೆಳಕಿನ ಕಾರ್ಯಕ್ರಮಗಳು ನಿಸರ್ಗ ನಿರ್ಮಿತ, ಸಸ್ಯ ಲೋಕದ ಮಧ್ಯೆ ನಡೆಯುವುದು ಕೂಡಾ ಗಂಧರ್ವ ಲೋಕವನ್ನೇ ನೆನಪಿಸುವಂತೆ ಮಾಡುತ್ತವೆ. 

ನಿಸರ್ಗಪ್ರಿಯರನ್ನು ಆಕರ್ಷಿಸುವ ಈ ತಾಣ, ಪರಿಸರ ತಜ್ಞರನ್ನು ಕರೆಸಿ ಅವರಿಂದ ಉಪನ್ಯಾಸ, ಕಾರ್ಯಾಗಾರ ಹಮ್ಮಿಕೊಂಡು ಸನ್ಮಾನಿಸಿ ಮಾದರಿ ಕಾರ್ಯ ಮಾಡುತ್ತಾ ಬಂದಿದ್ದು ಪರಿಸರ ದಿನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಿದೆ. ಧರ್ಮ, ಅಧ್ಯಾತ್ಮದ ಜಾಗೃತಿ ಜೊತೆಗೆ ನಿಸರ್ಗದ ಧ್ಯಾನ, ಗಿಡಗಳ ಪೋಷಿಸುವ ಪೂಜೆ ಮಾದರಿಯಾಗಿದೆ.

ಕೆರೆ ಹಳ್ಳ ಸ್ವಚ್ಛ: 27 ಕಿ.ಮೀ ಉದ್ದದ ಹಿರೇಹಳ್ಳ ಕೆರೆಯನ್ನು ಸ್ವಚ್ಛ ಮಾಡಿ, ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಹಳ್ಳದ ದಂಡೆಯ 30ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.

ಗಿಣಗೇರಾ, ಕಲ್ಲತಾವರಗೇರಾ ಕೆರೆಗೆ ಪುನಶ್ಚೇತನ ನೀಡುವ ಮೂಲಕ ನೀರು ಸಂಗ್ರಹ, ಸುತ್ತಲಿನ ಪರಿಸರದ ರಕ್ಷಣೆಗೆ ಸ್ವಾಮೀಜಿಯೇ ಪ್ರೇರಕ ಶಕ್ತಿಯಾಗಿ ನಿಂತಿರುವುದು ಜಿಲ್ಲೆಯ ಹಸಿರು ಪರಿಸರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು