ಮಂಗಳವಾರ, ಡಿಸೆಂಬರ್ 7, 2021
20 °C

ಕೊಪ‍್ಪಳ ಜಿಲ್ಲೆಯಲ್ಲಿ ಚಿನ್ನದ ಅದಿರಿಗೆ ಶೋಧ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ: ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿಯ ನಾರಿನಾಳ ಗ್ರಾಮದಲ್ಲಿ ಬಂಗಾರದ ಅದಿರು ಪತ್ತೆಗಾಗಿ ಸಮೀಕ್ಷಾ ತಂಡವು ಬೀಡುಬಿಟ್ಟಿದೆ. ಅದಿರು ಸಮೀಕ್ಷೆಗಾಗಿ ತಂಡವು ಡಿಗ್ಗಿಂಗ್ ಮೂಲಕ ಪರಿಶೀಲನೆ ಕೈಗೊಂಡಿದೆ.

ಗ್ರಾಮದ ಜಮೀನೊಂದರಲ್ಲಿ ಬಂಗಾರ ಅದಿರು ಪತ್ತೆಗಾಗಿ ಕೇಂದ್ರ ಸರ್ಕಾರದ ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಪರಿಣತರ ತಂಡವು ಹಗಲಿರುಳು ಸಮೀಕ್ಷೆ ಕೈಗೊಂಡಿದೆ. ಶೋಧನೆಗಾಗಿ ಭೂಮಿಯ ಆಳದಲ್ಲಿ 113 ಮೀಟರ್‌ವರೆಗೆ  ಕೊರೆದಿರುವ ತಂಡವು ಬಂಗಾರದ ಅದಿರು ಪತ್ತೆಯಾಗಿರುವ ಮಾಹಿತಿಯನ್ನು ಹೊರಹಾಕಿದೆ.

ಭೂಗರ್ಭದಲ್ಲಿನ ಬಹುತೇಕ ಖನಿಜಯುಕ್ತ ಕಲ್ಲುಗಳನ್ನು ಸಮೀಕ್ಷಾ ತಂಡವು ಈಗಾಗಲೇ ಸಂಗ್ರಹಿಸಿದೆ. ಇದರ ಸಮೀಪದಲ್ಲಿರುವ ಮ್ಯಾದರಡೊಕ್ಕಿ ಗ್ರಾಮದ ಜಮೀನಿನಲ್ಲಿ ಈ ಹಿಂದೆ ಮ್ಯಾಂಗನೀಸ್ ಪತ್ತೆಯಾಗಿತ್ತು. ಈಗ ನಾರಿನಾಳ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಬಂಗಾರದ ಅದಿರು ಪತ್ತೆಯಾಗಿರುವುದು ಈ ಭಾಗದ ಜಮೀನುಗಳಿಗೆ ಮತ್ತಷ್ಟು ಬೆಲೆ ಬಂದಂತಾಗಿದೆ.

ಕಲ್ಲು ಮಿಶ್ರಿತವಾಗಿರುವ ಈ ಭಾಗದ ಜಮೀನುಗಳಿಗೆ ಬಂಗಾರದ ಅದಿರು ಪತ್ತೆಯಾಗಿರುವುದರಿಂದ ಜಮೀನುಗಳಿಗೆ ಬೇಡಿಕೆ ಇದೆ. ಈ ಕುರಿತು ಕಳೆದ 2017 ರಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಅಲ್ಫಾ ಜಿಯೊ ಇಂಡಿಯಾ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಈ ಭಾಗದಲ್ಲಿ ಖನಿಜ ಸೇರಿದಂತೆ ಬೆಲೆ ಬಾಳುವ ತೈಲಗಳನ್ನು ಹೊಂದಿರುವ ಕುರಿತು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಂಗಾರದ ಅದಿರು ಪತ್ತೆಯಾಗಿರುವದರಿಂದ ಈ ಭಾಗದ ಜಮೀನುಗಳಿಗೆ ಉತ್ತಮ ಬೆಲೆ ಸಿಗುವುದು ಎನ್ನುತ್ತಾರೆ ಸ್ಥಳೀಯರು.

***

ಗಣಿ ಭೂವಿಜ್ಞಾನ ಇಲಾಖೆ ಮತ್ತು ಕುಷ್ಟಗಿ ತಹಶೀಲ್ದಾರ್‌ ಅವರಿಗೆ ಪರಿಶೀಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು.
ಸುರಳ್ಕರ್ ವಿಕಾಸ್ ಕಿಶೋರ್. ಜಿಲ್ಲಾಧಿಕಾರಿ

ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಪ್ರದೇಶದಲ್ಲಿನ ಅದಿರಿನಲ್ಲಿ ಚಿನ್ನದ ಅಂಶ ಪತ್ತೆಯಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಇದೇ ಎಂಬುದನ್ನು ಸಂಶೋಧನಾ ತಂಡವು ದೃಡಪಡಿಸಬೇಕಿದೆ.
ಮುತ್ತಪ್ಪ, ಹಿರಿಯ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು