ಹನಮಸಾಗರ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ಹನಮಸಾಗರ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಹಬ್ಬಗಳನ್ನು ಶಾಂತಿಯುತವಾಗಿ, ಸಮುದಾಯದ ಎಲ್ಲಾ ಸದಸ್ಯರು ಸಹಭಾಗಿಯಾಗಿ ಆಚರಿಸುವ ಮಹತ್ವವನ್ನು ಎಲ್ಲಾ ನಾಯಕರು ಪ್ರಸ್ತಾಪಿಸಿದರು. ಪಿಎಸ್ಐ ಧನಂಜಯ್ ಹಿರೇಮಠ ಮಾತನಾಡಿ, ‘ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕು’ ಎಂದರು.
ಹಬ್ಬಗಳ ಸಂಭ್ರಮದಲ್ಲಿ ಯಾವುದೇ ರೀತಿಯ ಗಲಭೆ ಅಥವಾ ವಿವಾದ ಉಂಟಾಗದಂತೆ ಜಾಗೃತರಾಗಲು ಗ್ರಾ.ಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ತಿಳಿಸಿದರು.
ಮೈನುದ್ದೀನ್ ಖಾಜಿ, ನಜರಸಾಬ ಮೇನೆದಾಳ, ಶಿವಪ್ಪ ಕಂಪ್ಲಿ, ಸೋಚಪ್ಪ ಬೋವಿ, ಇನ್ನಿತರ ಮುಖಂಡರು, ಗಜಾನನ ಯುವಕ ಮಂಡಳಿ ಸದಸ್ಯರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.