ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬೆಣಕಲ್‍ನ ಶಿಲಾಸಮಾಧಿ ವಿಶ್ವಪಾರಂಪರಿಕ ತಾಣ ಮಾನ್ಯತೆ ಸನ್ನಿಹಿತ?

ಯೂನೆಸ್ಕೊ ತಾತ್ಕಾಲಿಕ ಪಟ್ಟಿಗೆ ಆಯ್ಕೆ: ರಾಜ್ಯದ ನಾಲ್ಕನೇ ಸ್ಥಳ
Last Updated 29 ಜೂನ್ 2021, 14:26 IST
ಅಕ್ಷರ ಗಾತ್ರ

ಕೊಪ್ಪಳ: ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯೂನೆಸ್ಕೋದ ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ನ ಮೊರೇರ ಕಾಲದ ಸಮಾಧಿ ಸ್ಥಳ ಸ್ಥಾನ ಪಡೆಯುವುದು ಬಹುತೇಕ ಖಚಿತಗೊಂಡಿದೆ ತಿಳಿದು ಬಂದಿದೆ.

‘ಭಾರತದ ಒಂಬತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ ಯೂನೆಸ್ಕೋಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ಆರು ಪ್ರಮುಖ ಸ್ಥಳಗಳಿಗೆ ತಾತ್ಕಾಲಿಕ ಮಾನ್ಯತೆ ನೀಡಲು ಯೋಜಿಸಲಾಗಿದ್ದು, ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ’ ಎಂದುಇತಿಹಾಸ ತಜ್ಞ ಡಾ.ಸಿದ್ಲಿಂಗಪ್ಪ ಕೊಟ್ನೇಕಲ್ ತಿಳಿಸಿದ್ದಾರೆ.

'ಈ ಸ್ಥಳದ ಮಹತ್ವದ ಕುರಿತು ಯೂನೆಸ್ಕೋ ತಾತ್ಕಾಲಿಕ ಪಟ್ಟಿಗೆ ಪ್ರಸ್ತಾವ ಹೋಗಿದೆ. ಇನ್ನೂ ಅಧಿಕೃತವಾಗಿ ಯಾವುದೇ ಅಂತಿಮ ಆದೇಶ ಬಂದಿಲ್ಲ' ಎಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಇತರೆ ತಾಣಗಳು: ‘ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಣಾ ಪ್ರದೇಶ ಹಾಗೂ ನರ್ಮದಾ ನದಿ ಕಣಿವೆಯ ಬೇಡಾಘಾಟ್-ಲಾಮ್ತಾಘಾಟ್, ಉತ್ತರ ಪ್ರದೇಶದ ವಾರಣಾಸಿಯ ಗಂಗಾನದಿಯ ದಡದಲ್ಲಿರುವ ಘಾಟ್‍ಗಳು, ಮಹಾರಾಷ್ಟ್ರದ ಮರಾಠ ಮಿಲಿಟರಿ ಪಾರಂಪರಿಕ ಕಟ್ಟಡದ ವಾಸ್ತುಶಿಲ್ಪ, ತಮಿಳುನಾಡಿನ ಕಾಂಚಿಪುರಂನ ದೇವಾಲಯಗಳು ತಾತ್ಕಾಲಿಕ ಪಟ್ಟಿಯಲ್ಲಿವೆ’ ಎಂದು ಡಾ.ಸಿದ್ಲಿಂಗಪ್ಪ ಕೊಟ್ನೇಕಲ್ ಮಾಹಿತಿ ನೀಡಿದ್ದಾರೆ.

1986ರಲ್ಲಿ ಹಂಪಿ, 1987ರಲ್ಲಿ ಪಟ್ಟದಕಲ್ಲು, 2012ರಲ್ಲಿ ಪಶ್ಚಿಮ ಘಟ್ಟಗಳಿಗೆ ವಿಶ್ವಪಾರಂಪರಿಕ ಸ್ಥಾನ ನೀಡಲಾಗಿದೆ.

ಹಿರೇಬೆಣಕಲ್ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಎತ್ತರವಾದ ಬೆಟ್ಟದಲ್ಲೇ ಪ್ರಾಗೈತಿಹಾಸದ ಶಿಲಾಸಮಾಧಿಗಳಿವೆ. ಅಲ್ಲಿ ಸುಮಾರು 600ಕ್ಕೂ ಅಧಿಕ ಶಿಲಾಸಮಾಧಿಗಳಿದ್ದವೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಸುಮಾರು 500 ಶಿಲಾಸಮಾಧಿಗಳು ಮಾತ್ರ ಉಳಿದಿರಬಹುದು ಎಂದು ಅಂದಾಜಿಸಲಾಗಿದೆ. ಕ್ರಿ. ಪೂ ಸುಮಾರು 1000 ರಿಂದ 200ಕ್ಕೆ ಸಂಬಂಧಿಸಿದ ಶಿಲಾ-ತಾಮ್ರಯುಗಕ್ಕೆ ಸಂಬಂಧಪಟ್ಟ ಸಂಸ್ಕೃತಿಯ ಬೂದಿದಿಬ್ಬ, ಗುಹಾಚಿತ್ರಗಳು ದೊರಕಿವೆ.

'ಈ ಸಮಾಧಿಗಳ ಕುರಿತು ಡಾ.ಅ.ಸುಂದರ, ಡಾ.ಶರಣಬಸಪ್ಪ ಕೋಲ್ಕಾರ್ ಮುಂತಾದವರು ವ್ಯಾಪಕ ಅಧ್ಯಯನ ನಡೆಸಿದ್ದರು' ಎಂದು ಡಾ.ಸಿದ್ಲಿಂಗಪ್ಪತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT