ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವಕ್ಕೆ ಮಣೆ; ಕೊಪ್ಪಳ ಜಿಲ್ಲೆಯ ಉತ್ಸವಗಳ ಕಡೆಗಣನೆ

ಮೆಹಬೂಬಹುಸೇನ / ವಿಜಯ ಎನ್‌. ಗಂಗಾವತಿ
Published 15 ಜನವರಿ 2024, 5:29 IST
Last Updated 15 ಜನವರಿ 2024, 5:29 IST
ಅಕ್ಷರ ಗಾತ್ರ

ಉತ್ಸವಗಳು ಆಯಾ ಕ್ಷೇತ್ರದ ಕಲೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ. ಈ ವೇದಿಕೆಯ ಮೂಲಕ ಸ್ಥಳೀಯ ವಿಶೇಷತೆಗಳನ್ನು ನಾಡಿಗೆ ತಿಳಿಸುವ ಕೆಲಸವಾಗುತ್ತದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರ ತವರು ಜಿಲ್ಲೆ ಕೊಪ್ಪಳದಲ್ಲಿಯೇ ಉತ್ಸವಗಳನ್ನು ಕಡೆಗಣನೆ ಮಾಡಲಾಗುತ್ತದೆ. ಬೇರೆ ಕಡೆ ಉತ್ಸವ ಮಾಡಲು ಬರದ ನೆಪ ಹೇಳುವ ಸರ್ಕಾರ ಹಂಪಿ ಉತ್ಸವಕ್ಕೆ ಮಾತ್ರ ಯಾವ ಸಬೂಬು ಮುಂದಿಡುವುದಿಲ್ಲ. ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಭಾಗವೇ ಆದ ಕೊಪ್ಪಳ ಜಿಲ್ಲೆಯ ಉತ್ಸವಗಳ ಆಚರಣೆಗೆ ಈ ತಾರತಮ್ಯ ಯಾಕೆ?

14 ವರ್ಷಗಳಲ್ಲಿ ಮೂರು ಬಾರಿ ಮಾತ್ರ ಕನಕಗಿರಿ ಉತ್ಸವ

‘ಕಣ್ಣಿದ್ದವರು ಕನಕಗಿರಿ ನೋಡಬೇಕು ಕಾಲಿದ್ದವರು ಹಂಪಿ ನೋಡಬೇಕು’ ಎನ್ನುವ ನಾಣ್ಣುಡಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಕನಕಗಿರಿಯನ್ನು ಎರಡನೇ ಹಾಗೂ ಬಡವರ ತಿರುಪತಿ ಒಂದು ಕರೆಯಲಾಗುತ್ತಿದೆ. ಮೌರ್ಯರ ಅಶೋಕ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಐತಿಹಾಸಿಕ ಪ್ರವಾಸಿ ಕೇಂದ್ರವಾಗಿದೆ. 701 ಭಾವಿ ದೇವಾಲಯ ಹಾಗೂ ಐತಿಹಾಸಿಕ ಸ್ಮಾರಕ ಇಲ್ಲಿವೆ. ಕನಕಾಚಲಪತಿ ದೇಗುಲ ವೆಂಕಟಪತಿ ಬಾವಿ ಪುಷ್ಕರಣಿ ನೋಡುಗರನ್ನು ಆಕರ್ಷಿಸುತ್ತವೆ. ಸೌಂದರ್ಯದ ಗಣಿಯಾದ ಕನಕಾಚಲಪತಿ ದೇವಾಲಯದಲ್ಲಿರುವ ಶಿಲ್ಪಕಲೆ ನಯನ ಮನೋಹರವಾಗಿವೆ. ಗುಜ್ಜಲವಂಶದ ರಾಜನಾದ ಉಡಚಪ್ಪನಾಯಕನು ಈ ಸುಂದರ ದೇವಸ್ಥಾನಗಳನ್ನು ಕಟ್ಟಿಸಿದನು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇಂಥ ಐತಿಹಾಸಿಕ ತಾಣದಲ್ಲಿರುವ ಸ್ಮಾರಕ ಬಾವಿ ದೇಗುಲಗಳು ಪ್ರವಾಸೋದ್ಯಮ ಹಾಗೂ ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅವಸಾನದ ಅಂಚಿನಲ್ಲಿವೆ. ಸ್ಮಾರಕಗಳ ರಕ್ಷಣೆ ಗತ ವೈಭವ ಮರುಕಳಿಸಲು ಅನುಕೂಲವಾಗುವಂತೆ ಮಾಡಲು 'ಕನಕಗಿರಿ ಉತ್ಸವ' ಆಚರಣೆ ಮಾಡಬೇಕೆಂಬುದು ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದೆ.  ಜನರ ಬಹು ವರ್ಷಗಳ ಉತ್ಸವ ಆಚರಣೆಯ ಬೇಡಿಕೆಯನ್ನು 2008ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಹಾಗೂ ಆಗಿನ ಸಚಿವ ಶಿವರಾಜ ತಂಗಡಗಿ ಈಡೇರಿಸಿದ್ದರು. 2010 2013 ಹಾಗೂ 2015ರಲ್ಲಿ ಶಾಸಕ ಹಾಗೂ ಸಚಿವರಾಗಿದ್ದ ತಂಗಡಗಿ ಅವರು ತಮ್ಮ ಅವಧಿಯಲ್ಲಿ ಒಟ್ಟು ಮೂರು ಸಲ ಉತ್ಸವ ಆಚರಣೆ ಮಾಡಿ ಗಮನ ಸೆಳೆದರು. 2018ರಲ್ಲಿ‌ ಶಾಸಕರಾಗಿ ಆಯ್ಕೆಯಾದ ಬಸವರಾಜ ದಢೇಸೂಗೂರು ಕನಕಗಿರಿ ಉತ್ಸವ ಮಾಡುವುದಾಗಿ ಭರವಸೆ‌ ನೀಡಿದ್ದರೂ ಎರಡು ವರ್ಷ ಕಾಡಿದ ಕೋವಿಡ್‌ ಹಾಗೂ ಬರಗಾಲ ಉತ್ಸವ ಆಚರಣೆಗೆ ಅಡ್ಡಿಯಾಯಿತು. ಕಳೆದ ವರ್ಷ ಉತ್ಸವ ಆಚರಣೆಗೆ ಎಲ್ಲಾ ರೀತಿಯ ಅವಕಾಶಗಳಿದ್ದರೂ ಸರ್ಕಾರ ಹಾಗೂ ಶಾಸಕರ ಇಚ್ಛಾ ಶಕ್ತಿಯ ಕೊರತೆಯಿಂದ ಆಚರಣೆ ನೆನಗುದಿದೆ ಬಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಂಪಿ ಉತ್ಸವ ಸೇರಿದಂತೆ‌ ಇತರೆ ಉತ್ಸವಗಳಿಗೆ‌ ನೀಡಿದಂತ ಮಹತ್ವ ಕನಕಗಿರಿ ಉತ್ಸವಕ್ಕೆ ಸರ್ಕಾರ ಆದ್ಯತೆ‌ ನೀಡದಿರುವುದು‌ ಉತ್ಸವ ಆಚರಣೆ ನೆನಗುದಿಗೆ ಬೀಳಲು ಕಾರಣವಾಗಿದೆ ಎಂದು ಸ್ಥಳೀಯರಾದ ಅಮರೇಶ ಪಟ್ಟಣಶೆಟ್ಟಿ ರವಿ ಬಲಿಜ ಆಕ್ರೋಶ ವ್ಯಕ್ತಪಡಿಸಿದರು.

ಆನೆಗೊಂದಿ ಉತ್ಸವಕ್ಕೆ ಮುಹೂರ್ತ ಯಾವಾಗ?

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಉದ್ದೇಶದಿಂದ ಆರಂಭಿಸಿದ ಆನೆಗೊಂದಿ ಉತ್ಸವ ಕಳೆದ ಮೂರು ವರ್ಷಗಳಿಂದ ಆಚರಣೆ ಮಾಡದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಕೊನೆಯದಾಗಿ 2020ನೇ ಸಾಲಿನ ಜನವರಿಯಲ್ಲಿ ಆನೆಗೊಂದಿ ಉತ್ಸವ ನಡೆಸಿದ್ದು ಈ ವರ್ಷ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಉತ್ಸವದ ಬಗ್ಗೆ ಯಾರೂ ಚಕಾರ ಎತ್ತಿಲ್ಲ. ವಿಜಯನಗರ ಸಾಮ್ರಾಜ್ಯ ಮತ್ತು ರಾಮಾಯಣ ಕಾಲದ ಇತಿಹಾಸ ಹೊಂದಿರುವ ಆನೆಗೊಂದಿ ಅಂಜನಾದ್ರಿ ಪಂಪಾಸರೋವರ ನವವೃಂದಾವನಗಡ್ಡಿ ಚಿಂತಾಮಣಿ ದುರ್ಗಾದೇವಿ ದೇವಸ್ಥಾನ ಸೇರಿದಂತೆ ಅನೇಕ ಪ್ರದೇಶಗಳಿವೆ. ಆದ್ಯತೆ ನೀಡಿ ಅಭಿವೃದ್ಧಿ ಮಾಡಿದರೆ ಆನೆಗೊಂದಿ ವಿಶ್ವಪ್ರಸಿದ್ಧ ತಾ ಣವಾಗಬೇಕಿತ್ತು. ಆದ್ಯಾವುದು ನಡೆಯುತ್ತಿಲ್ಲ. ಕಳೆದ ವರ್ಷ ಮಾಜಿ ಶಾಸಕ ಪರಣ್ಣ ಉತ್ಸವ  ಡೆಸುವ ಬಗ್ಗೆ ಸರ್ಕಾರಕ್ಕೆ ₹10ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದರು. ಚುನಾವಣೆ ಕಾರಣ ಮುಂದೂಡಲಾಯಿತು. ಈ ಬಾರಿ ಶಾಸಕ ಜಿ.ಜನಾರ್ದನರೆಡ್ಡಿ ಉತ್ಸವ ನಡೆಸುವ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲರ ಬಳಿ ಚರ್ಚಿಸುವುದಾಗಿ ತಿಳಿಸಿದ್ದು  ಇನ್ನು ಯಾವಾಗ ಎನ್ನುವುದು ಖಚಿತವಿಲ್ಲ. 1998ರಲ್ಲಿ ಎಂ.ಪಿ ಪ್ರಕಾಶ ನೇತೃತ್ವದಲ್ಲಿ ಆರಂಭವಾದ ಆನೆಗೊಂದಿ ಉತ್ಸವ 1999 2003 2009 20112015 201 7 2020ರಲ್ಲಿ ನಡೆದಿದೆ. ಆನೆಗೊಂದಿ ಭಾಗದಲ್ಲಿ ಅನೇಕ ದೇವಾಲಯಗಳು ಶಾಸನಗಳು ಮಂಟಪಗಳು ಗುಹೆ ಸೇರಿ ವಿಜಯನಗರ ಕಾಲಕ್ಕೆ ಸಂಬಂಧಪಟ್ಟ ಕುರುಹುಗಳು ಸಾಕಷ್ಟಿದ್ದು ಇಲ್ಲಿನ ಕಲೆ ಸಂಸ್ಕೃತಿ ಸಂಪ್ರದಾಯ ಉಳಿಸಲು ದೇಶ-ವಿದೇಶ ಅನ್ಯ ರಾಜ್ಯಗಳಿಗೆ ಸಾರಲು ಉತ್ಸವ ನಡೆಸಲಾಗುತ್ತಿತ್ತು. ಉತ್ಸವದಲ್ಲಿ ಹಗ್ಗಜಗ್ಗಾಟ ಬ್ಯಾಡ್ಮಿಂಟನ್ ಹ್ಯಾಂಡ್ ಬಾಲ್ ಸೈಕ್ಲಿಂಗ್ ವಾಲಿಬಾಲ್ ಕುಸ್ತಿ ರಂಗೋಲಿ ಸ್ಪರ್ಧೆ ನೃತ್ಯ ಕೋಲಾಟ ಚಿತ್ರನಟರಿಂದ ಸಂಗೀತ ಬೋಟಿಂಗ್ ಕ್ಲೈ ಮಿಂಗ್. ಚಿತ್ರಕಲೆ ಫೋಟೋಗ್ರಫಿ ಸೈಂಟ್ಸ್ ಸ್ಥಳೀಯ ಕಲಾ ವಿದರಿಂದ ನೃತ್ಯ ಕಾರ್ಯಕ್ರಮಗಳು ಆಯೋಜಿಸಿ ನಾಡಿನ ಸಂಸ್ಕೃತಿ ಸೊಬಗು ಸಾರಲಾಗುತ್ತಿತ್ತು. ಆದರೆ ಈ ಬಾರಿ ಆನೆಗೊಂದಿ ಉತ್ಸವಕ್ಕೆ ಆಚರಣೆ ಬಗ್ಗೆ ಸ ರ್ಕಾರವಾಗಲಿ ಪ್ರವಾಸೋದ್ಯಮ ಸಚಿವರಾಗಲಿ ಯಾವ ನಿರ್ಧಾರವು ಸ್ಪಷ್ಟಪಡಿಸಿಲ್ಲ. ಈಗಾಗಲೇ ಹಂಪಿ ಉತ್ಸವ ಆಚರಿಸಲು ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಜಿಲ್ಲೆಯ ಉತ್ಸವಗಳ ಬಗ್ಗೆ ಸರ್ಕಾರ ಮೌನ ವಹಿಸಿದೆ.

ಶಿಲ್ಪ ಸಂಪತ್ತಿನ ಕಲಾ ಕಣಜವಾಗಿರುವ ಕನಕಗಿರಿಯಲ್ಲಿ ಉತ್ಸವ ಪ್ರತಿ ವರ್ಷ ನಡೆಯಬೇಕು ಈ ಕುರಿತು ಸರ್ಕಾರ ಪ್ರತಿ ವರ್ಷ ಉತ್ಸವ ನಡೆಸಬೇಕು.
ದುರ್ಗಾದಾಸ ಯಾದವ, ಲೇಖಕ, ಕನಕಗಿರಿ
ನಡೆದು ನೋಡಲು ಹೋಗು ಹಂಪಿ ಸಿರಿ ಮನತಣಿದು ನೋಡಲು ಬಾ ಕನಕಗಿರಿ ಎಂಬ ಕವಿಯ ಸಾಲುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಸರ್ಕಾರ ಮಾಡಬೇಕು. ಒಂದು ವರ್ಷ ಉತ್ಸವ ಮಾಡಿ ಹತ್ತು ವರ್ಷ ಬಿಡುವುದು ಸರಿಯಲ್ಲ
ಕನಕರೆಡ್ಡಿ ಕೆರಿ, ಗೌರವ ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನಕಗಿರಿ
ಈ ಸಲದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವನೂ ಆಗಿದ್ದೇನೆ. ಕನಕಗಿರಿ ಉತ್ಸವ ಮಾಡಲು ಕ್ರಮ ವಹಿಸುತ್ತೇನೆ.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ
ಮೂರು ವರ್ಷಗಳಿಂದ ಆನೆಗೊಂದಿ ಉತ್ಸವ ನಡೆದಿಲ್ಲ. ಈ ವರ್ಷವಾದರೂ ಆಯೋಜಿಸಿ ಇಲ್ಲಿನ ಐತಿಹ್ಯ ಪರಂಪರೆ ಸಾರುವ ನಿಟ್ಟಿನಲ್ಲಿ ಪ್ರತಿವರ್ಷವೂ ಕೆಲಸವಾಗಬೇಕು.
ಸಾಯಿಕುಮಾರ ರಂಗಾಪುರ, ಗ್ರಾಮದ ನಿವಾಸಿ
ಹಂಪಿಯಷ್ಟೆ ಅನೆಗೊಂದಿ ಭಾಗಕ್ಕೆ ಮಹತ್ವವಿದ್ದು ಹಂಪಿ ಜೊತೆಗೆ ಆನೆಗೊಂದಿ ಉತ್ಸವು ನಡೆಯಬೇಕು. ಪ್ರತಿಬಾರಿ ಹಂಪಿ ಉತ್ಸವ ಮಾತ್ರ ನಡೆಸಿ ಆನೆಗೊಂದಿ ಉತ್ಸವ ಕೈಬಿಡಲಾಗುತ್ತಿದೆ. ಯಾಕೆ ಈ ತಾರತಮ್ಯ?
ಪುನೀತಕುಮಾರ ಹನುಮನಹಳ್ಳಿ, ಗ್ರಾಮದ ನಿವಾಸಿ
ಕನಕಗಿರಿ ಕನಕಾಚಲಪತಿ ದೇವಸ್ಥಾನ
ಕನಕಗಿರಿ ಕನಕಾಚಲಪತಿ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT