ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಸಂಗಣ್ಣ ಮಾತು, ನಡೆ

ಬಿಜೆಪಿ ಅಭ್ಯರ್ಥಿ ಪ್ರಚಾರ, ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡ ಸಂಸದ
Published 17 ಮಾರ್ಚ್ 2024, 5:20 IST
Last Updated 17 ಮಾರ್ಚ್ 2024, 5:20 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿ ಮೂರು ದಿನಗಳು ಕಳೆದರೂ ಹಿಂದಿನ ಎರಡು ಅವಧಿಗೆ ಸಂಸದರಾಗಿದ್ದ ಸಂಗಣ್ಣ ಕರಡಿ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರ ನಡೆ ಹಾಗೂ ಮಾತು ಕ್ಷೇತ್ರದಾದ್ಯಂತ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆಯಲ್ಲದೇ ಕುತೂಹಲಕ್ಕೂ ಕಾರಣವಾಗಿದೆ.

ಮೂರನೇ ಬಾರಿಯೂ ಪಕ್ಷದ ವರಿಷ್ಠರು ನನಗೇ ಟಿಕೆಟ್‌ ಕೊಡುತ್ತಾರೆ ಎಂದು ಅವರು ಬಲವಾದ ನಂಬಿಕೆ ಹೊಂದಿದ್ದರು. ಆದರೆ ಹೈಕಮಾಂಡ್‌ ಡಾ. ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್‌ ಘೋಷಿಸಿದೆ. ಟಿಕೆಟ್‌ ಘೋಷಣೆಯಾದ ಹೊತ್ತಿನಿಂದಲೇ ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಪಕ್ಷದ ಕೆಲ ಮುಖಂಡರು ಅಭ್ಯರ್ಥಿ ಬಸವರಾಜ ಅವರ ಜೊತೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರೆ, ಇನ್ನೂ ಕೆಲವರು ಸಂಗಣ್ಣ ಅವರ ಜೊತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಬಿಜೆಪಿ ಒಡೆದ ಮನೆಯಂತಿದೆ. ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಎಲ್ಲರನ್ನೂ ಒಂದುಗೂಡಿಸಿ ಪಕ್ಷ ಸಂಘಟನೆಗೆ ಕಸರತ್ತು ನಡೆಸುತ್ತಿದ್ದಾರೆ.

ನಡೆ ನಿಗೂಢ: ಟಿಕೆಟ್‌ ವಂಚಿತನಾದರೂ ರಾಜ್ಯದ ಯಾವ ನಾಯಕರೂ ಫೋನ್ ಕರೆ ಮಾಡಿಲ್ಲ ಎನ್ನುವ ವಿಷಯವೇ ಸಂಗಣ್ಣ ಅವರ ಬೇಸರಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯದವರ ಜೊತೆ ಅವರು ಆಡಿರುವ ಮಾತು ಹಾಗೂ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು ’ಆ ರೀತಿಯ ಸ್ಪರ್ಧೆಗೆ ಇದು ಸರಿಯಾದ ಸಮಯವಲ್ಲ’ ಎಂದು ಅವರು ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಸಿಂಧನೂರಿನ ಬಸನಗೌಡ ಬಾದರ್ಲಿ ಅವರ ನಡುವೆಯೇ ಸ್ಪರ್ಧೆಯಿದೆ. ಹಿಟ್ನಾಳ ಹೆಸರು ಮುಂಚೂಣಿಯಲ್ಲಿದೆ ಎಂದು ಪಕ್ಷದ ಕೆಲ ಮುಖಂಡರೇ ತಿಳಿಸಿದ್ದು, ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯತಂತ್ರ ಬದಲಾವಣೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಟಿಕೆಟ್‌ ಅಧಿಕೃತವಾಗಿ ಘೋಷಣೆಯಾಗುವ ತನಕ ಕಾಂಗ್ರೆಸ್‌ ಆಕಾಂಕ್ಷಿಗಳಿಗೂ ಆತಂಕ ತಪ್ಪಿದ್ದಲ್ಲ.

ಕಾಂಗ್ರೆಸ್‌ನ ಕೆಲ ನಾಯಕರು ಸಂಗಣ್ಣ ಅವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಅವರನ್ನು ಕೇಳಿದಾಗ ’ಟಿಕೆಟ್‌ ಸಿಗದ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಸೌಜನ್ಯಕ್ಕಾಗಿ ಫೋನ್‌ ಕರೆ ಮಾಡಿದ್ದಾರೆ. ಟಿಕೆಟ್‌ ವಿಚಾರವಾಗಿ ಯಾರೂ ನನ್ನೊಂದಿಗೆ ಮಾತನಾಡಿಲ್ಲ’ ಎಂದರು. ಹಾಗಾದರೆ ಮುಂದಿನ ನಿಮ್ಮ ನಡೆ ಏನು ಎನ್ನುವ ಪ್ರಶ್ನೆಗೆ ’ಕಾದು ನೋಡಿ’ ಎನ್ನುವ ಕುತೂಹಲದ ಉತ್ತರ ನೀಡಿದರು.

ಸಂಗಣ್ಣ ಕರಡಿ
ಸಂಗಣ್ಣ ಕರಡಿ

ಅಭ್ಯರ್ಥಿಯಿಂದ ನಾಯಕರ ಮನೆ ಮನೆ ಭೇಟಿ

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ತಮ್ಮ ಹಾಗೂ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷದ ನಾಯಕರ ಮನೆಮನಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ  ಅವರ ಮನೆಗೆ ತೆರಳಿದರು. ಈ ವೇಳೆ ಬಸವರಾಜ ಅವರನ್ನು ಸನ್ಮಾನಿಸಿದರು. ‘ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಬೆಂಬಲ ನೀಡಬೇಕು ಬಿಜೆಪಿಗೆ ಮತ ಹಾಕಬೇಕು’ ಎಂದು ಬಸವರಾಜ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT