ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು: ಜೆಸ್ಕಾಂ ಕಚೇರಿ ಉದ್ಘಾಟನೆ, ಕೋಲ್ಡ್ ಸ್ಟೋರೆಜ್‌ಗೆ ಭೂಮಿ ಪೂಜೆ

Published 3 ಆಗಸ್ಟ್ 2024, 15:29 IST
Last Updated 3 ಆಗಸ್ಟ್ 2024, 15:29 IST
ಅಕ್ಷರ ಗಾತ್ರ

ಕುಕನೂರು: ‘ಸಿದ್ದರಾಮಯ್ಯನವರ ಉತ್ತಮ ಆಡಳಿತ ಸಹಿಸದ ವಿರೋಧ ಪಕ್ಷದವರು ಮೂಡಾ ಹಗರಣದಲ್ಲಿ ಅವರನ್ನು ಸಿಲುಕಿಸಿ ಅವರ ಕಪ್ಪು ಚುಕ್ಕೆ ಬರುವಂತೆ ಮಾಡಲು ಹೊರಟಿದ್ದಾರೆ’ ಎಂದು ಶಾಸಕ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಉದ್ಘಾಟನೆ, ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೆಜ್ ಘಟಕದ ಭೂಮಿಪೂಜೆ ಹಾಗೂ ತಾಲ್ಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪಿಯುಸಿ ವಸತಿ ಕಾಲೇಜಿನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಯಲಬುರ್ಗಾ ಕ್ಷೇತ್ರದಲ್ಲಿ ಕಳೆದ ಹದಿನಾಲ್ಕು ತಿಂಗಳಲ್ಲಿ 12 ಪ್ರೌಢಶಾಲೆ, 6 ಪಿಯು ಕಾಲೇಜುಗಳನ್ನು ಹುದ್ದೆ ಸಮೇತ ಹಾಗು ಕಟ್ಟಡಕ್ಕೆ ಅನುದಾನ ಸಮೇತ ಮಂಜೂರು ಮಾಡಿಸಿದ್ದೇನೆ. 15 ಬಸ್ ನಿಲ್ದಾಣ, ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ತಾಲ್ಲೂಕಿನ ತಹಶೀಲ್ದಾರ್ ಕಟ್ಟಡಕ್ಕೆ₹30 ಕೋಟಿ ಅನುದಾನ, ಕುಡಿಯುವ ನೀರಿನ ಯೋಜನೆಗೆ ₹ 210 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದರು.

ನವೋದಯ ವಿದ್ಯಾಲಯಕ್ಕೆ ₹120 ಕೋಟಿ ಕೊಡಿಸಿ ನೂತನ ಕಟ್ಟಡ ನಿರ್ಮಿಸುತ್ತೇನೆ. ಕ್ಷೇತ್ರದಲ್ಲಿ 38 ನೂತನ ಕೆರೆ ನಿರ್ಮಾಣಕ್ಕೆ ಗ್ರಾಮ ಗ್ರಾಮಗಳಲ್ಲಿ ಸಭೆ ಮಾಡಲಾಗಿದೆ. ಕೆರೆ ಹಾಗೂ ಭವನಗಳ ನಿರ್ಮಾಣಕ್ಕೆ ಜಮೀನು ಅಗತ್ಯತೆ ಇದೆ. ರೈತರು ಜಮೀನು ನೀಡಿ ಸಹಕರಿಸಬೇಕು. ಈ ಭಾಗದಲ್ಲಿ ಅನುಕೂಲ ಆಗಲೆಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಉದ್ಘಾಟನೆ, ಎಪಿಎಂಸಿಯಲ್ಲಿ ₹7 ಕೋಟಿ ವೆಚ್ಚದ ಕೋಲ್ಡ್ ಸ್ಟೋರೆಜ್ ಘಟಕದ ಮಂಜೂರು ಮಾಡಿಸಿದ್ದೇನೆ ಎಂದರು.

ರೈತರ ಪಂಪ್ ಸೆಟ್‌ಗೆ ಸೋಲಾರ್: ರಾಜ್ಯದ 32 ಲಕ್ಷ ರೈತರ ಪಂಪಸೆಟಗೆ ಸೋಲಾರ್ ವಿದ್ಯುತ್ ನೀಡಲು ಈಗಾಗಲೇ ರಾಜ್ಯ ಸರ್ಕಾರ ಮುಂದಾಗಿದೆ. ಶೇ 8 ರಿಯಾಯತಿಯಲ್ಲಿ ಸೋಲಾರ್ ಅಳವಡಿಕೆ ಮಾಡಿಕೊಡಲಾಗುವುದು. ಸದ್ಯ ರೈತರ ಪಂಪ್‌ ಸೆಟ್ ವಿದ್ಯುತ್ ಬಿಲ್ಲನ್ನು ರಾಜ್ಯ ಸರ್ಕಾರವೇ ₹ 13 ಸಾವಿರ ಕೋಟಿ ನೀಡಿ ಭರಿಸುತ್ತಿದೆ. ಗೃಹಜ್ಯೋತಿ ₹8500 ಕೋಟಿ ಸೇರಿ ಒಟ್ಟು ₹22 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರವೇ ಪಾವತಿ ಮಾಡುತ್ತಿದೆ ಎಂದರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸುರೇಶ ಕೊಕ್ರೆ, ತಹಸೀಲ್ದಾರ ಪ್ರಾಣೇಶ,ಇಒ ಸಂತೋಷ ಬಿರಾದಾರ, ಸಿಪಿಐ ಮೌನೇಶ್ವರ ಪಾಟೀಲ್, ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪನಿಡಗುಂದಿ, ಸತ್ಯನಾರಾಯಣಪ್ಪ ಹರಪನ್ಹಳ್ಳಿ, ಮಂಜುನಾಥ ಕಡೇಮನಿ, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಸಿರಾಜ್ ಕರಮುಡಿ, ಗಗನ ನೋಟಗಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT