ಭಾನುವಾರ, ಸೆಪ್ಟೆಂಬರ್ 19, 2021
27 °C
ತುಂಗಭದ್ರಾ ಜಲಾಶಯದ ಒಳಹರಿವು ಇಳಿಮುಖ: ಕಂಪ್ಲಿ ಸೇತುವೆ ಮೇಲೆ ಪ್ರವಾಹ ಇಳಿಕೆ, ವಾಹನ ಸಂಚಾರ ಬಂದ್

ಗಂಗಾವತಿ: ಕಂಪ್ಲಿ ಸೇತುವೆ ಮೇಲಿನ ತ್ಯಾಜ್ಯ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕಂಪ್ಲಿ–ಗಂಗಾವತಿ ಸೇತುವೆ ಮೇಲಿನ ಪ್ರವಾಹ ಮಂಗಳವಾರ ಬೆಳಿಗ್ಗೆ ಇಳಿಮುಖವಾಗಿದೆ.

ಪ್ರವಾಹ ಇಳಿಮುಖವಾದ ಕೂಡಲೇ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುದರ್ಶನ್ ರೆಡ್ಡಿ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಸೇತುವೆ ಮೇಲಿನ‌ ರಕ್ಷಣಾ ಕಂಬಿಗಳಿಗೆ ಸಿಲುಕಿದ ಕಸ ತೆರವು ಮಾಡಲಾಯಿತು.

ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುಮತಿ ನೀಡಿಲ್ಲ.

ಕಳೆದ ಎರಡು ದಿನಗಳಿಂದ ನದಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಗ್ರಾಮಗಳಿಗೆ ನೀರು ನುಗ್ಗಿಲ್ಲ.

ಸಾಣಾಪುರ, ಸೇತುವೆ, ಹನುಮನಹಳ್ಳಿ, ದೇವಘಾಟ್, ಲಕ್ಷ್ಮಿಪುರ, ನಾಗನಳ್ಳಿ, ಚಿಕ್ಕಂಜಂತಕಲ್ ನದಿ ಭಾಗದ ಗದ್ದೆಗಳಲ್ಲಿ ಕಸ ಸಂಗ್ರಹವಾಗಿದೆ. ಬದುಗಳು ಕೊಚ್ಚಿ ಹೋಗಿವೆ. ಬಾಳೆ ಗಿಡಗಳು ನೆಲ ಕಚ್ಚಿವೆ.

ನೆರೆಗೆ ಹಲವು ರೈತರ ಬೆಳೆ ನಾಶವಾಗಿದೆ. ನೀರಿನ ಪ್ರಮಾಣ ಇಳಿಕೆ ಆದ ಮೇಲೆ ನಷ್ಟದ ಅಂದಾಜು ಸಿಗಲಿದೆ.

ಚಿಕ್ಕಜಂತಕಲ್, ನಾಗನಳ್ಳಿ, ಆನೆಗೊಂದಿ ಭಾಗದಲ್ಲಿ ಸಾರ್ವಜನಿಕರ ಬಳಕೆಗೆ ನೀರು ಪೂರೈಸಲು ನದಿಗೆ ಅಳವಡಿಸಿದ್ದ ಪೈಪ್‌ಲೈನ್‌ ತೆರವುಗೊಳಿಸಲಾಗಿದೆ.

ಈ ಭಾಗದ ಜನರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.

ವಿರುಪಾಪುರಗಡ್ಡೆ–ಹಂಪಿ ಸಂಪರ್ಕ ಕಡಿತವಾಗಿದೆ. ಆನೆಗೊಂದಿಯ ಶ್ರೀಕೃಷ್ಣದೇವರಾಯರ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಭಾಗಶಃ ಮುಳುಗಡೆಯಾಗಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಇಳಿಮುಖವಾಗದ ಕಾರಣ ನೀರಿನ ಒಳ ಹರಿವು ಹೆಚ್ಚಳವಾಗುವ ನೀರಿಕ್ಷೆ ಇದೆ. ನೀರಿಕ್ಷೆಯಂತೆ ನೀರು ಹರಿದು ಬಂದರೆ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಈ ವೇಳೆ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಆದ ಕಾರಣ ಸಂಪೂರ್ಣವಾಗಿ ಪ್ರವಾಹ ಇಳಿಮುಖವಾಗಿ ಜಿಲ್ಲಾಡಳಿತ ಅಧಿಕೃತವಾಗಿ ಆದೇಶ ನೀಡುವವರೆಗೂ ನದಿ ಬಳಿ ಸಾರ್ವಜನಿಕರು ತೆರಳಬಾರದು. ಜಾನುವಾರುಗಳನ್ನು ಸಹ ಬಿಡಬಾರದು ಎಂದು ತುಂಗಭದ್ರಾ ಜಲಾಶಯದ ಮಂಡಳಿ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.