ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಗುಂಡಿಗೆಯೂ ಇಲ್ಲ, ಗಂಡಸ್ತನವೂ ಇಲ್ಲ: ಆನಂದ್ ಸಿಂಗ್ 

Last Updated 2 ಏಪ್ರಿಲ್ 2023, 8:19 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ಜಗತ್ತು ಅಮೆರಿಕ ದೇಶವನ್ನು ಹಾಡಿ ಹೊಗಳುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ‌ಮೋದಿ ನೇತೃತ್ವದ ಭಾರತ, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿತು. ಆಗ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಯಿತು.‌ ವೈರಿ ದೇಶಕ್ಕೆ ಮೋದಿ ನೀಡುವಷ್ಟು ಪ್ರತ್ಯುತ್ತರ ನೀಡುವುದು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಗಂತೂ ಈ ವಿಷಯದಲ್ಲಿ ಗುಂಡಿಗೆ ಹಾಗೂ ಗಂಡಸ್ತನ ಎರಡೂ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಮಾಧ್ಯಮ ಪ್ರಕೋಷ್ಠದ ವತಿಯಿಂದ ನಡೆದ ಬಳ್ಳಾರಿ, ಕೊಪ್ಪಳ ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಯುದ್ದಕ್ಕೆ ಸಜ್ಜಾಗುವ ಸನ್ನಿವೇಶ ಇದಾಗಿದ್ದು , ದೇಶವನ್ನು ರಕ್ಷಣೆ ಮಾಡಲು ನರೇಂದ್ರ ಮೋದಿ ಸೇನಾಧಿಪತಿಯಂತೆ ಸಜ್ಜಾಗಿದ್ದಾರೆ. ನಾವೆಲ್ಲರೂ ಸೈನಿಕರಂತೆ ಅವರ ಕೈ ಬಲಪಡಿಸಬೇಕು. ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ದೇಶದಲ್ಲಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವ ಗುಂಡಿಗೆ ಇರುವುದು ಮೋದಿಗೆ ಮಾತ್ರ ಎಂದರು.

ಕಾಂಗ್ರೆಸ್ ಕುಟುಂಬ ರಾಜಕಾರಣದ ಬೆನ್ನು ಹತ್ತಿದೆ. ಈ ಚುನಾವಣೆ ಕಾಂಗ್ರೆಸ್ ಅಂತ್ಯಕ್ಕೆ ಮುನ್ನುಡಿಯಾಗಲಿ ಎಂದರು.

ಬಿಜೆಪಿ ಕೇವಲ ಸಾಮಾಜಿಕ ತಾಣಗಳ ಮೂಲಕ ಬೆಳೆದ ಪಕ್ಷವಲ್ಲ. ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿ, ಅನೇಕರ ತ್ಯಾಗ ಹಾಗೂ ಬಲಿದಾನದಿಂದ ಬೆಳೆದು ಬಂದಿದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ವಿಜಯದ ಬಾವುಟ ಹಾರಿಸಲಿದೆ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಮುಖರು‌. ಅವರು ನನಗೆ ಕೊಟ್ಟ ಮಾತಿನಂತೆ ವಿಜಯನಗರ ಜಿಲ್ಲೆ ರಚನೆ ಮಾಡಿಸಿಕೊಟ್ಟರು. ರಾಜ್ಯದಲ್ಲಿ ಗುಂಡಿಗೆ ಇರುವ ಗಂಡು ಯಡಿಯೂರಪ್ಪ ಎಂದು ಭಾವಾವೇಶದಿಂದ ಮಾತನಾಡಿದರು.

ಸಚಿವ ಹಾಲಪ್ಪ ಆಚಾರ್ ಮಾತನಾಡಿ ಪಕ್ಷ ಈ‌ ಮಟ್ಟಿಗೆ ಬೆಳೆಯಲು ಸಾಮಾಜಿಕ ಜಾಲತಾಣಗಳು ಕಾರಣ. ಪಕ್ಷದ ಸಾಮಾಜಿಕ ತಾಣದ ಬುದ್ದಿವಂತ ಕಾರ್ಯಕರ್ತರ ಶ್ರಮ ಇದಕ್ಕೆ ಕಾರಣವಾಗಿದ್ದು, ನಮ್ಮ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ ಜಗತ್ತು ನರೇಂದ್ರ ಮೋದಿ ಅವರನ್ನು ಕೆಂಪು ಹಾಸು ಹಾಸಿ ಕರೆಯುತ್ತಿದೆ. ಮತ್ತೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರಲು ನೀವೆಲ್ಲರೂ ಕೈ ಜೋಡಿಸಬೇಕು ಎಂದರು.

ವಯಸ್ಸಾದವರಿಗೆ ಆಸೆ, ಆಮಿಷ ಹೆಚ್ಚು. ಆದರೆ ಯುವಜನತೆ ದೇಶಕ್ಕಾಗಿ ತ್ಯಾಗ ಮಾಡಬೇಕು. ಪಕ್ಷವನ್ನು ಕಟ್ಟಿ ಇನ್ನಷ್ಟು ‌ಬಲಿಷ್ಠಗೊಳಿಸಬೇಕು ಎಂದರು.

ಶಾಸಕ ಪರಣ್ಣ ಮುನವಳ್ಳಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ನಾಲ್ಕೂ ಜಿಲ್ಲೆಗಳ ಸಾಮಾಜಿಕ ತಾಣಗಳ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT