ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿ ಅನುಮಾನ: ಮಹೇಶ ಜೋಷಿ

ಜಮುರಾ ನಾಟಕೋತ್ಸವ: ಕಸಾಪ ಅಧ್ಯಕ್ಷ ಮಹೇಶ ಜೋಷಿ ಹೇಳಿಕೆ
Last Updated 12 ಏಪ್ರಿಲ್ 2022, 5:04 IST
ಅಕ್ಷರ ಗಾತ್ರ

ಕುಷ್ಟಗಿ: ರಾಜ್ಯದಲ್ಲಿರುವ ಉದ್ಯಮಗಳಲ್ಲಿ ಕನ್ನಡಗರಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬ ಶಿಫಾರಸು ಹೊಂದಿರುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಬರುವುದು ಅನುಮಾನ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ‌ಮಹೇಶ ಜೋಷಿ ಹೇಳಿದರು.‌

ಪಟ್ಟಣದಲ್ಲಿ ಸಮೃದ್ಧಿ ವಿವಿಧೋದ್ದೇಶ ಸಂಸ್ಥೆಯ ವತಿಯಿಂದ ನಡೆದ ಜಮುರಾ ತಂಡದ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಹರಿಯಾಣದಲ್ಲಿನ ಉದ್ಯಮಗಳಲ್ಲಿ ಅಲ್ಲಿಯ ಜನರಿಗಷ್ಟೇ ಉದ್ಯೋಗ ನೀಡಬೇಕು ಎಂಬ ನಿಯಮ ಜಾರಿಗೆ ಅಲ್ಲಿನ ಸರ್ಕಾರ ಮುಂದಾದರೂ ಸಂವಿಧಾನದ ನಿಯಮಗಳ ಪ್ರಕಾರ ಈ ರೀತಿ ನಿಯಮ ರೂಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಒಂದು ವಿಚಾರದಲ್ಲಿ ನ್ಯಾಯಾಲಯ ನೀಡುವ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದು ಸ್ವಾಭಾವಿಕ. ಹಾಗಾಗಿ ಡಾ.ಮಹಿಷಿ ವರದಿ ಜಾರಿ ಸುಲಭದ ಮಾತಲ್ಲ ಎಂdು ಅವರು ತಿಳಿಸಿದರು..

ರಾಜ್ಯದಲ್ಲಿ ಕನ್ನಡ ಭಾಷೆಯ ಸ್ಥಿತಿ ಗತಿ ಕುರಿತು ಕಳವಳ ಹೊರಹಾಕಿದ ಅವರು, ಕನ್ನಡ ಮತ್ತು ಕನ್ನಡಿಗರು ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಒಂದೆಡೆ ಕನ್ನಡ ಶಾಲೆಗಳು ಮುಚ್ಚುವಂಥ ಅಪಾಯಕಾರಿ ಬೆಳವಣಿಗೆಗಳು ಕಂಡುಬರುತ್ತಿದೆ. ಇನ್ನೊಂದೆಡೆ ಭಾಷಾ ಮಾಧ್ಯಮ ಆಯ್ಕೆ ಸ್ವಾತಂತ್ರ್ಯವನ್ನು ನ್ಯಾಯಾಲಯ ಪಾಲಕರಿಗೇ ನೀಡಿದೆ. ಇಂಥ ಅನೇಕ ವಿಷಯಗಳ ಬಗ್ಗೆ ಸಾಹಿತಿಗಳು, ಚಿಂತಕರು, ಅಧಿಕಾರಿಗಳು ಮತ್ತು ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆ ಯಲ್ಲಿಯೇ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಪಡೆಯುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಬೇಕಿದೆ ಎಂದರು.

ಪರಿಷತ್ತು ಕೇವಲ ಒಂದು ಗುಂಪಿಗೆ ಸೀಮಿತಗೊಳ್ಳದೆ ಜನರ ಪರಿಷತ್ತು ಆಗಿ ಹೊರ ರೂಪ ತಳೆಯಬೇಕು ಎಂಬುದು ತಮ್ಮ ಆಶಯವಾಗಿದ್ದು ಅನೇಕ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಪರಿಷತ್ತಿನ ನಿಯಮ (ಬೈಲಾ)ಗಳ ತಿದ್ದುಪಡಿಗೆ ಉದ್ದೇಶಿಸಲಾಗಿದೆ. ಒಟ್ಟಾರೆ ಪರಿಷತ್ತಿನ ಚಟುವಟಿಕೆಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಬದ್ಧರಾಗಿರುವುದಾಗಿ ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಪ್ರತಿನಿಧಿ ನಬಿಸಾಬ್ ಕುಷ್ಟಗಿ ಇತರರು ನಾಟಕೋತ್ಸವ ಕುರಿತು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಶರಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ತಾಲ್ಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ಪುರಸಭೆ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಬಸವರಾಜ ಉಪ್ಪಲದಿನ್ನಿ ನಿರೂಪಿಸಿದರು.

ಚಿತ್ರದುರ್ಗದ ಮುರುಘಾ ಶರಣರು ರಚಿಸಿದ ‘ಅವಿರಳ ಜ್ಞಾನ ಚೆನ್ನಬಸವಣ್ಣ’ ಹಾಗೂ ಮಹಾಂತೇಶ ರಾಮದುರ್ಗ ಅವರ ‘ಸೋರುತಿಹುದು ಸಂಬಂಧ’ ಈ ಹೊಸ ಅಲೆಯ ನಾಟಕಗಳನ್ನು ಒಳಗೊಂಡ ಎರಡು ದಿನಗಳ ಜಮುರಾ ನಾಟಕೋತ್ಸವ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT