ಗುರುವಾರ , ಫೆಬ್ರವರಿ 20, 2020
19 °C
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರಥಮ ಜಿಲ್ಲಾ ಸಮ್ಮೇಳನ

250 ದಿನ ಕೆಲಸ, ದಿನಕ್ಕೆ ₹600 ಕೂಲಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೃಷಿ ಕೂಲಿಕಾರರಿಗೆ ವರ್ಷದಲ್ಲಿ 250 ದಿನ ಕೆಲಸ ಮತ್ತು ದಿನಕ್ಕೆ ₹600 ವೇತನ ನೀಡಬೇಕು. ಇದರಿಂದ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಪೂರೈಕೆ ಹೆಚ್ಚಾದಂತೆ ಉತ್ಪಾದನೆ ಕೂಡಾ ಹೆಚ್ಚಾಗುತ್ತದೆ. ಈ ಮೂಲಕ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಲ್ಲದೇ ದೇಶದ ಆರ್ಥಿಕ ಬಿಕ್ಕಟ್ಟು ಕೂಡಾ ನಾಶವಾಗುತ್ತದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಜಿ.ಎನ್‌.ನಾಗರಾಜ್‌ ಹೇಳಿದರು.

ನಗರದ ಶಾದಿಮಹಲ್‌ನಲ್ಲಿ ಶುಕ್ರವಾರ ಕರ್ನಾಟಕ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಡೆದ ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರತಿಯೊಬ್ಬ ಕೂಲಿಕಾರರಿಗೆ ವರ್ಷದಲ್ಲಿ 250 ದಿನ ಕೆಲಸ ನೀಡಬೇಕು‌. ಇದರಿಂದ ಪಟ್ಟಣಕ್ಕೆ ವಲಸೆಯನ್ನು ಹೋಗುವುದನ್ನು ತಡೆಯಬಹುದು. ರೈತರಿಗೆ ವ್ಯವಸಾಯಕ್ಕೆ ಕೂಲಿಕಾರರು ಸಿಗುತ್ತಾರೆ. ರೈತರ ಬೆಳೆಗೆ ಉತ್ತಮ ಬೆಲೆ ನಿಗದಿ ಮಾಡಿ, ಕೂಲಿಕಾರರಿಗೆ ಪ್ರತಿದಿನ ₹600 ಕೂಲಿ ನೀಡುವ ಶಕ್ತಿ ನೀಡಬೇಕು. ಪುಷ್ಠಿ ಆಹಾರವಿಲ್ಲದೇ ಕೂಲಿಕಾರರ ಮಕ್ಕಳ ಸರಿಯಾಗಿ ಬೆಳೆಯುತ್ತಿಲ್ಲ. ಇದಕ್ಕೆ ಅವರಿಗೆ ಕಡಿಮೆ ಕೂಲಿ ನೀಡುತ್ತಿರುವುದೇ ಕಾರಣವಾಗಿದೆ. ಹಾಗಾಗಿ ಕನಿಷ್ಠ ತಿಂಗಳಿಗೆ ₹18 ಸಾವಿರ ಕೂಲಿ ನೀಡಬೇಕು ಎಂದರು.

ಭಾರತದಲ್ಲಿ ಎಲ್ಲ ಧರ್ಮದವರು, ಜಾತಿಯವರು ಬದುಕಬೇಕು ಎನ್ನುವ ಆಶಯ ಸಂವಿಧಾನ ಹೊಂದಿದೆ. ಆದರೆ ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಇದರಿಂದ ಧಾರ್ಮಿಕ ಕಲ್ಪನೆ ನಾಶವಾಗಿದೆ. ಖಾಸಗಿ ಕಾಲೇಜಿನಲ್ಲಿ ಮೀಸಲಾತಿ ಇಲ್ಲ.‌ ಕೇಂದ್ರದಲ್ಲಿ ಮೀಸಲಾತಿ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಅಲ್ಲಾಡಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ರೈತರೇ ಅತಿಹೆಚ್ಚು ಸಂಖ್ಯೆಯಲ್ಲಿದ್ದರು. ಆದರೆ ಈಗ ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ರೈತರೆಲ್ಲರೂ ತಮ್ಮ ಹೊಲಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಕೃಷಿ ಕೂಲಿಕಾರರಾಗಿದ್ದಾರೆ. ಇದರಿಂದ ರೈತರ ಬಿಕ್ಕಟ್ಟು ದೇಶದಲ್ಲಿದೆ. ಅಲ್ಲದೇ ಮೋದಿ ಅವರ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಕೈಗಾರಿಕೆಗಳು ಮುಚ್ಚುತ್ತಿದೆ. ಇದರಿಂದಾಗಿ ಕೋಟ್ಯಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಹಾಗಾಗಿ ಕೈಗಾರಿಕಾ ಬಿಕ್ಕಟ್ಟು ಕೂಡಾ ತಲೆದೋರಿದೆ. ಸರ್ಕಾರ ಈ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದರು.

ಕೇರಳದಲ್ಲಿ ಕೂಲಿಕಾರರಿಗೆ ಮದುವೆ, ಪಿಂಚಣಿ, ಮನೆ, ಆರೋಗ್ಯ, ಶಿಕ್ಷಣ ಹೀಗೆ ಹಲವಾರು ಯೋಜನೆಗಳಿವೆ. ಈ ಮೂಲಕ ಕೂಲಿಕಾರರ ಪಾಲನ್ನು ಸರ್ಕಾರ ನೀಡಿದೆ. ಆದರೆ ಕರ್ನಾಟಕ ಮತ್ತು ದೆಹಲಿಯ ಕೇಂದ್ರ ಸರ್ಕಾರ ನಮ್ಮ ಏಕೆ ನೀಡುತ್ತಿಲ್ಲ. ಇದು ಅನ್ಯಾಯವಾಗಿದ್ದು, ಅಂಬೇಡ್ಕರ್‌ ಅವರ ಆಶಯದಂತೆ ಸಂಘಟನೆಯ ಮೂಲಕ ನಮ್ಮ ಪಾಲನ್ನು ನಾವು ಪಡೆಯಬೇಕು ಎಂದರು.

ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರ ಹೊಸಕೇರಾ, ಉಪಾಧ್ಯಕ್ಷ ಎಚ್‌.ಗಂಗಾಧರಸ್ವಾಮಿ, ಕೆಪಿಆರ್‌ಎಸ್‌ ಅಧ್ಯಕ್ಷ ಜಿ.ನಾಗರಾಜ, ಸಂಘದ ಸಂಚಾಲಕರಾದ ಸುಂಕಪ್ಪ ಗದಗ, ಎಂ.ಬಸವರಾಜ, ಎಚ್‌.ಹುಸೇನಪ್ಪ, ಸಿಐಟಿಯು ಕಾರ್ಯದರ್ಶಿ ಕಾಸೀಂಸಾಬ್‌, ಜಿ.ಬಸವರಾಜ, ಎಸ್‌ಎಫ್‌ಐ ಕಾರ್ಯದರ್ಶಿ ಸುಬಾನ್‌, ಮರಿನಾಗಪ್ಪ ಡಗ್ಗಿ, ಬಾಳಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)