ಶನಿವಾರ, ಸೆಪ್ಟೆಂಬರ್ 19, 2020
22 °C
ಕುಷ್ಟಗಿ ತಾಲ್ಲೂಕಿನಲ್ಲಿ ಮುಂಗಾರು ಬೆಳೆ ಉತ್ತಮ

ರೈತರಲ್ಲಿ ಭರವಸೆ ಮೂಡಿಸಿರುವ ‘ಸಜ್ಜೆ’ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿರುವ ಹಬ್ರೀಡ್‌ ಸಜ್ಜೆಬೆಳೆ ಸದ್ಯದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿರುವುದು ಕಂಡುಬಂದಿದ್ದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಯಾವುದೇ ಪ್ರದೇಶಕ್ಕೆ ಹೋದರೂ ಕಣ್ಣು ಹಾಯಿಸಿದಲ್ಲೆಲ್ಲ ಹುಲುಸಾಗಿ ಬೆಳೆದಿರುವ ಸಜ್ಜೆ ಹೊಲಗಳು ಗೋಚರಿಸುತ್ತಿದ್ದು ಬೆಳವಣಿಗೆ ಹಂತದಿಂದ ಹಿಡಿದು ಕೆಲವೆಡೆ ತೆನೆಯಾಡುವ ಹಂತ ತಲುಪಿವೆ. ಬೆಳೆಯ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ತೇವಾಂಶ ಇರುವುದರಿಂದ ಹೊಲಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿವೆ. ಕುಷ್ಟಗಿ ಹೋಬಳಿಯಲ್ಲಿ ತಡವಾಗಿ ಬಿತ್ತನೆಯಾಗಿದ್ದರೂ ಬೆಳೆ ಉತ್ತಮವಾಗಿದ್ದು ಹನುಮಸಾಗರ, ಹನುಮನಾಳ, ತಾವರಗೇರಾ ಹೋಬಳಿಗಳಲ್ಲಿ ಸಜ್ಜೆ ಅತ್ಯುತ್ತಮವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಗುರಿಮೀರಿ ಸಾಧನೆ: ಕೃಷಿ ಇಲಾಖೆ ಅಂದಾಜಿಸಿದಂತೆ ಈ ವರ್ಷ 20,900 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 22,650 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪ್ರಮಾಣ ಗುರಿಮೀರಿದ ಸಾಧನೆಯಾಗಿದೆ. ಹಿಂದಿನ ವರ್ಷಗಳಲ್ಲಿ ಮೆಕ್ಕೆಜೋಳ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಮಳೆಯ ಕೊರತೆ, ಸೈನಿಕ ಹುಳುವಿನ ಬಾಧೆ ಕಾರಣದಿಂದ ಈ ಬಾರಿ ಬಹುತೇಕ ರೈತರು ಮೆಕ್ಕೆಜೋಳ ಕೈಬಿಟ್ಟಿದ್ದಾರೆ. ಕಡಿಮೆ ಮಳೆ ಮತ್ತು ಕಡಿಮೆ ಅವಧಿಯಲ್ಲಿ ಕೊಯಿಲಿಗೆ ಬರುವ ಹಾಗೂ ಹೆಚ್ಚು ಖರ್ಚು ಇಲ್ಲದ ಸಜ್ಜೆ ಮತ್ತು ತೊಗರಿಯನ್ನು ಪರ್ಯಾಯ ಬೆಳೆಯನ್ನಾಗಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಮೆಕ್ಕೆಜೋಳದ ಕ್ಷೇತ್ರ ಕಡಿಮೆಯಾಗಿದೆ ಎಂದು ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಂಗಳವಾರ ಇಲ್ಲಿ ಮಾಹಿತಿ ನೀಡಿದರು.

ಬಿತ್ತನೆ ಕ್ಷೇತ್ರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 67,575 ಹೆಕ್ಟೇರ್‌ ಪೈಕಿ 59,775 ಹೆಕ್ಟೇರ್‌ ಪ್ರದೇಶದಲ್ಲಿ (ಶೇಕಡ 88) ಬಿತ್ತನೆಯಾಗಿದೆ. ತೊಗರಿ ಕೂಡ ಗುರಿಮೀರಿ (9120 ಹೆ) ಬಿತ್ತನೆಯಾಗಿದೆ. ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಈ ಬೆಳೆಯ ಪ್ರದೇಶ ಹೆಚ್ಚಿದೆ. ಅದೇ ರೀತಿ ಎಳ್ಳು ಸಹ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮಳೆ ವಾಡಿಕೆಗಿಂತ ಹೆಚ್ಚು: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಜುಲೈ ಅವಧಿಯಲ್ಲಿ ಕುಷ್ಟಗಿ ಹೋಬಳಿಲ್ಲಿ ಶೇಕಡ 7ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿದೆ. ಹನುಮಸಾಗರ 246 ಮಿಮೀ (260 ವಾಡಿಕೆ ಮಳೆ). ಹನುಮನಾಳ 261 (268 ವಾಡಿಕೆ ಮಳೆ). ತಾವರಗೇರಾ 214 (228). ಹಾಗೂ ಕುಷ್ಟಗಿ ಹೋಬಳಿಯಲ್ಲಿ 251 ಮಿಮೀ (235) ಮಳೆ ದಾಖಲಾಗಿದೆ.

ಬಂಪರ್‌ ಇಳುವರಿ: ಸದ್ಯದ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಸಜ್ಜೆ, ಮೆಕ್ಕೆಜೋಳ, ಶೇಂಗಾ, ತೊಗರಿ, ಎಳ್ಳು ಮೊದಲಾದ ಬೆಳೆಗಳು ಉತ್ತಮವಾಗಿದೆ, ಅಧಿಕ ಮಳೆಯಾಗದಿದ್ದರೂ ಸದ್ಯಕ್ಕಂತೂ ತೇವಾಂಶ ಕೊರತೆ ಇಲ್ಲ. ಇದೇ ರೀತಿ ಮುಂದುವರೆದರೆ ಸಜ್ಜೆ ಬೆಳೆಯಲ್ಲಿ ರೈತರು ಬಂಪರ್‌ಇಳುವರಿ ಬರುವ ನಿರೀಕ್ಷೆ ಇದೆ. ಇಂಥ ಬೆಳೆಯನ್ನು ನೋಡಿ ಬಹಳ ವರ್ಷಗಳಾಗಿದ್ದವು ಎಂದು ರೈತರಾದ ಯಲಬುರ್ತಿಯ ಬಸವರಾಜ ದಾನಮ್ಮನವರ, ಶರಣಪ್ಪ ನೆರೆಬೆಂಚಿ ಇತರರು ಹೇಳಿದರು.

ಡಿಜಿಟಲ್‌ ಮಾಪನ ಕೇಂದ್ರ: ಈ ಹಿಂದೆ ಹೋಬಳಿ ಮಟ್ಟದಲ್ಲಿ ಮಾತ್ರ ಮಳೆ ಮಾಪನ ಕೇಂದ್ರಗಳು ಇದ್ದವು ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಜಿಟಲ್‌ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದ್ದು ಅವುಗಳಿಂದ ನಿಖರ ಮಾಹಿತಿ ಲಭ್ಯವಾಗುತ್ತಿದೆ. ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಪೈಕಿ 32 ಕೇಂದ್ರಗಳಲ್ಲಿ ಮಳೆ ಮಾಪಕಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ (ಕೆಎಸ್‌ಎನ್‌ಡಿಎಂಸಿ) ಉಪಗ್ರಹ ಆಧಾರಿತ ತಾಂತ್ರಿಕ ವ್ಯವಸ್ಥೆಯ ಮೂಲಕ ನಿತ್ಯ ಮಳೆ ಪ್ರಮಾಣದ ದತ್ತಾಂಶ ಮಾಹಿತಿ ಸಂಗ್ರಹಿಸುತ್ತಿದ್ದು ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಮಳೆ ವಿವರ ತಲುಪಿಸುತ್ತದೆ ಎಂದು ಕೃಷಿ ಇಲಾಖೆ ಮಾಹಿತಿ ತಿಳಿಸಿದೆ.

*
ಕಳೆದ ವರ್ಷ ಮೆಕ್ಕೆಜೋಳ ನಿರೀಕ್ಷಿತ ಇಳುವರಿ ಬರಲಿಲ್ಲ, ಕಾರಣ ಈ ಬಾರಿ ಬಹುತೇಕ ರೈತರು ಸಜ್ಜೆ ಬೆಳೆದಿದ್ದಾರೆ.
-ರಾಘವೇಂದ್ರ ಕೊಂಡಗುರಿ, ಕೃಷಿ ಅಧಿಕಾರಿ.

*
ತೇವಾಂಶ ಇದೇ ರೀತಿ ಮುಂದುವರೆದರೆ ಈ ಬಾರಿ ಸಜ್ಜೆ ಬೆಳೆಯಲ್ಲಿ ಬಂಪರ್ ಇಳುವರಿ ಬರುವ ಖಾತರಿ ಇದೆ.
-ಬಸವರಾಜ ದಾನಮ್ಮನವರ, ಯಲಬುರ್ತಿ ರೈತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು