ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ನಗರಸಭೆ: ಕಾಂಗ್ರೆಸ್ ಬೆಂಬಲದೊಂದಿಗೆ ಉಪಾಧ್ಯಕ್ಷೆಯಾದ ಬಿಜೆಪಿ ಸದಸ್ಯೆ!

Published 21 ಆಗಸ್ಟ್ 2024, 13:14 IST
Last Updated 21 ಆಗಸ್ಟ್ 2024, 13:14 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ರಾಜಕೀಯ ಎದುರಾಳಿಗಳಾಗಿ ನಿತ್ಯ ಜಿದ್ದಾಜಿದ್ದಿ ನಡೆಸುತ್ತಿದ್ದರೆ ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಬಿಜೆಪಿ ಸದಸ್ಯೆ ಅಶ್ವಿನಿ ಗದಗಿನಮಠ ಬುಧವಾರ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಇಲ್ಲಿನ ನಗರಸಭೆಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, 15 ಕಾಂಗ್ರೆಸ್, ಒಂಬತ್ತು ಬಿಜೆಪಿ, ಮೂರು ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ. ಇಬ್ಬರು ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಜೊತೆ ಅಶ್ವಿನಿ ಗುರುತಿಸಿಕೊಂಡಿದ್ದಾರೆ.

ಹೀಗಾಗಿ ಅಧ್ಯಕ್ವ ಸ್ಥಾನ ಸ್ಥಳೀಯ ಶಾಸಕ ಕಾಂಗ್ರೆಸ್‌ ರಾಘವೇಂದ್ರ ಹಿಟ್ನಾಳ ಆಪ್ತ ಅಮ್ಜದ್‌ ಪಟೇಲ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಅಶ್ವಿನಿ ಅವರಿಗೆ ಮೀಸಲು ಎಂದು ಪೂರ್ವ ನಿರ್ಧರಿತವಾಗಿತ್ತು.

ಈ ಎಲ್ಲ ಬೆಳವಣಿಗೆ ಗಮನಿಸಿಯೇ ಬಿಜೆಪಿ ತನ್ನ ಸದಸ್ಯರಿಗೆ ವಿಪ್‌ ಜಾರಿ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದು ಯಾವುದನ್ನೂ ಲೆಕ್ಕಿಸದೇ ಅಶ್ವಿನಿ ಹಾಗೂ ಬಿಜೆಪಿಯ ಇನ್ನಿಬ್ಬ ಸದಸ್ಯರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಜೆಡಿಎಸ್‌ ಕೂಡ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಸದಸ್ಯನಿಗೆ ಬೆಂಬಲ ನೀಡಿದೆ.

ಒಟ್ಟು 29 ಸದಸ್ಯರು ಮತ ಚಲಾಯಿಸಿದ್ದು ಇದರಲ್ಲಿ ಅಶ್ಚಿನಿ ಸದಸ್ಯರ 23, ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರ ತಲಾ ಒಂದು ಮತ ಪಡೆದುಕೊಂಡು ಉಪಾಧ್ಯಕ್ಷ ಗಾದಿಗೆ ಏರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ ‘ವಿಪ್‌ ಜಾರಿ ಮಾಡಿ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಅಶ್ವಿನಿ ನಮ್ಮ ರಾಜಕೀಯ ಎದುರಾಳಿ ಕಾಂಗ್ರೆಸ್‌ ಪರ ಮತ ಚಲಾಯಿಸಿ ವಿಪ್‌ ಉಲ್ಲಂಘಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT