ಬುಧವಾರ, ಆಗಸ್ಟ್ 10, 2022
21 °C
ಕೃಷಿ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆ; ರೈತರಿಗೆ ಮಾಹಿತಿ

ರೈತರಿಗೆ ಜೀವದಾಹಿನಿ ‘ಕೃಷಿ ಸಂಜೀವಿನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮಣ್ಣು, ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಸಂಬಂಧಿ ಕೆಲಸಕ್ಕೆ ಇಲಾಖೆಗೆ ಅಲೆಯುವ ತೊಂದರೆ ತಪ್ಪಿಸುವ ಉದ್ದೇಶದಿಂದ ಕಳೆದ ವರ್ಷ ಆರಂಭಗೊಂಡಿದ್ದ ಕೃಷಿ ಸಂಜೀವಿನ ವಾಹನ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅಣಿಯಾಗಿದ್ದು, ರೈತರಿಗೆ ಅನುಕೂಲವಾಗುತ್ತಿದೆ.

ಕೃಷಿ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಈ ರಥಕ್ಕೆ ಕುಕನೂರು ಸಮೀಪದ ಆಟಿಕೆ ಕ್ಲಸ್ಟರ್‌ ಭೂಮಿಪೂಜೆಗೆ ಬಂದಿದ್ದ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಇದು ರಾಜ್ಯದ ಗಮನ ಸೆಳೆದಿತ್ತು. ಈಗ ಮುಂಗಾರು ಹಂಗಾಮಿನಲ್ಲಿ ತನ್ನ ಪ್ರಾಯೋಗಿಕ ಪರೀಕ್ಷೆಗೆ ಇಳಿದಿದ್ದು, ರೈತರ ಮನೆ ಮತ್ತು ಜಮೀನಿಗೆ ತೆರಳಿ ತನ್ನ ಕಾರ್ಯ ಆರಂಭಿಸಿದೆ.

ಏನಿದು ಕೃಷಿ ಸಂಜೀವಿನಿ: ಜಮೀನಿನ ಮಣ್ಣು, ನೀರು ಪರೀಕ್ಷೆಗೆ ಪ್ರಯೋಗಾಲಯ, ಬೀಜ, ಗೊಬ್ಬರಗಳ ಮಾಹಿತಿಗೆ ಇಲಾಖೆಯ ಅಧಿಕಾರಿಗಳ ಕಚೇರಿಗೆ ಅಲೆದಾಡಬೇಕಿದ್ದ ರೈತರು ಕುಳಿತಲ್ಲಿಯೇ ಸಹಾಯವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ನೇರವಾಗಿ ತಮ್ಮ ಜಮೀನಿಗೆ ವಾಹನ ತರಿಸಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಎಲ್ಲ ಮಾಹಿತಿ, ಪರೀಕ್ಷೆಯ ಫಲಿತಾಂಶವನ್ನು ಪಡೆಯಬಹುದಾದ ಯೋಜನೆ ಇದಾಗಿದೆ.

ಏನೆಲ್ಲ ಮಾಹಿತಿ: ಮಳೆ, ತೇವಾಂಶ, ಮಣ್ಣು, ನೀರು, ಕೀಟಬಾಧೆ, ರೋಗ ಸೇರಿದಂತೆ ಇತರೆ ತಾಂತ್ರಿಕ ನೆರವು ಕೂಡಾ ಪಡೆಯಬಹುದು. ಅಲ್ಲದೆ ಈ ವಾಹನದಲ್ಲಿ ಇರುವ ಕೃಷಿ ಹೆಲ್ತ್ ಕ್ಲಿನಿಕ್‌ನಲ್ಲಿ ಪರಿಹಾರ ಪಡೆಯಬಹುದು. ವಾಹನದಲ್ಲಿ ಇರುವ ತಾಂತ್ರಿಕ ತಂಡ ಜಮೀನಿನ ಸಮಗ್ರ ವೀಕ್ಷಣೆ, ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಲಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಕ್ರಿಯಾ ಯೋಜನೆಯಡಿ ಲಭ್ಯವಿರುವ ಅನುದಾನದಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಅಗತ್ಯ ಅನುದಾನ ನೀಡಿ, ರೈತರ ಸಹಾಯಕ್ಕೆ ಮುನ್ನುಡಿ ಬರೆದಿದೆ.

ಸಹಾಯವಾಣಿ: ರೈತರು ಈ ವಾಹನದ ಪ್ರಯೋಜನೆ ಪಡೆಯಲು ಉಚಿತ ಸಹಾಯವಾಣಿಗೆ (155313) ಕರೆ ಮಾಡಿದರೆ, ಆ ಕರೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗಲಿದೆ. ಅಲ್ಲಿಂದ ಸಂಪರ್ಕಿಸಿದ ರೈತರ ಜಮೀನುಗಳಿಗೆ ತೆರಳಿ ಎಲ್ಲ ಮಾಹಿತಿ ನೀಡಲಾಗುತ್ತದೆ.

‘ಈ ಕೃಷಿ ಸಂಜೀವಿನ ರಥ ಹೋಬಳಿ ಮಟ್ಟದ ವಿವಿಧ ಗ್ರಾಮದಲ್ಲಿ ಸಂಚಾರ ನಡೆಸುತ್ತಿದ್ದು, ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್.

‘ಸರ್ಕಾರದ ಯಾವುದೇ ಯೋಜನೆ ಆರಂಭದಲ್ಲಿ ಅದ್ಧೂರಿಯಾಗಿ ಚಾಲನೆಗೊಂಡು ನಂತರ ಮೂಲೆ ಗುಂಪಾಗುತ್ತವೆ. ಆದರೆ ಈ ಸಂಜೀವಿನಿ ವಾಹನ ರೈತರ ಬದುಕಿಗೆ ಜೀವದಾಯಿನಿ ಆಗಿದೆ. ಈಗ ಉತ್ತಮವಾದ ಮಾಹಿತಿ ಈ ವಾಹನದಿಂದ ದೊರೆಯುತ್ತಿದ್ದು, ಅನಗತ್ಯವಾಗಿ ಪ್ರಯೋಗಾಲಯ, ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಿದೆ. ಜನಪ್ರಿಯ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು' ಎನ್ನುತ್ತಾರೆ ರೈತ ಶಂಕರ್ ಮಾಳೆಕೊಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು