ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಕಾಡುತ್ತಿದೆ ಕೊಠಡಿಗಳ ಕೊರತೆ

ಕೂಕನೂರು: ತಾಲ್ಲೂಕಿನಲ್ಲಿವೆ ಆರು ಸರ್ಕಾರಿ ಪದವಿಪೂರ್ವ ಕಾಲೇಜುಗಳು
Published 3 ಜುಲೈ 2024, 6:08 IST
Last Updated 3 ಜುಲೈ 2024, 6:08 IST
ಅಕ್ಷರ ಗಾತ್ರ

ಕುಕನೂರು: ಖಾಯಂ ಉಪನ್ಯಾಸಕರ ಕೊರತೆ, ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಹಾಗೂ ಮೈದಾನದ ಸಮಸ್ಯೆ. ಇವು ತಾಲ್ಲೂಕಿನ ಆರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಕಾಡುತ್ತಿರುವ ಸಾಮೂಹಿಕ ಸಮಸ್ಯೆಗಳು.

ತಾಲ್ಲೂಕಿನ ಬಿನ್ನಾಳ ಸರ್ಕಾರಿ ಪದವಿ ಪೂರ್ವ ಕಾಲೇಜು, ತಳಕಲ್ ಪಿಯು ಕಾಲೇಜ, ಮಂಗಳೂರಿನ ಪಿಯು ಕಾಲೇಜು, ಮಸಬಹಂಚಿನಾಳ ಪಿಯು ಕಾಲೇಜು, ಬನ್ನಿಕೊಪ್ಪ ಪಿಯು ಕಾಲೇಜು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಅಲ್ಪಸಂಖ್ಯಾತರ ಬಾಲಕಿಯರ ವಸತಿ ಪದವಿಪೂರ್ವ ಕಾಲೇಜಗಳಿವೆ.

ಸಾಲುತ್ತಿಲ್ಲ ಕೊಠಡಿಗಳು: ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಎಲ್ಲರಿಗೂ ಖಾಸಗಿ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಲು ಆಗುವುದಿಲ್ಲ. ಸರ್ಕಾರಿ ಕಾಲೇಜುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಬಹುತೇಕ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ, ಅವರ ಸಂಖ್ಯೆಗೆ ತಕ್ಕಷ್ಟು ಕೊಠಡಿಗಳು ಇಲ್ಲ. ಇದರಿಂದಾಗಿ ವ್ಯಾಸಾಂಗಕ್ಕೆ ತೊಂದರೆಯಾಗುತ್ತಿದೆ. ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ ಎಂದು ವಿದ್ಯಾರ್ಥಿಗಳು, ಬೋಧಕರು ಹೇಳುತ್ತಾರೆ.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಯಂ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಇದ್ದು, ಅತಿಥಿ ಉಪನ್ಯಾಸಕರ ಅವಲಂಬನೆಯಲ್ಲಿ ಬೋಧನೆ ನಡೆಯುತ್ತಿದೆ. ಬೋಧಕೇತರ ಸಿಬ್ಬಂದಿ ಕೊರತೆಯಿಂದ ಕಾಲೇಜಿನ ಕಾರ್ಯ ಚಟುವಟಿಕೆಗಳು ಕುಂಟುತ್ತಾ ಸಾಗಿವೆ.

ಬಿನ್ನಾಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಕಟ್ಟಡವಿದ್ದರೂ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅದೇ ರೀತಿಯಾಗಿ ಪೂರ್ಣ ಪ್ರಮಾಣದ ಬೋಧಕರ ಕೊರತೆ. ಶೌಚಾಲಯ ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು.

ಅಲ್ಪಸಂಖ್ಯಾತರ ಬಾಲಕಿರ ಪದವಿಪೂರ್ವ ವಸತಿ ಶಾಲೆ: ತಾಲ್ಲೂಕಿನಲ್ಲಿ ಪ್ರತಿಷ್ಠಿತವಾದ ಬಾಲಕಿಯರ ಅಲ್ಪಸಂಖ್ಯಾತರ ವಸತಿ ಶಾಲೆಯು ಪ್ರಾರಂಭವಾಗಿ ಏಳು ವರ್ಷಗಳು ಗತಿಸಿದರು ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯನ್ನೇ ಅವಲಂಬಿಸಿದೆ. ₹10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷಗಳಾದರೂ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿಲ್ಲ. ಕಾರಣ ಪಟ್ಟಣದಿಂದ 6 ಕಿ.ಮೀ ಹೊರ ಪ್ರದೇಶದಲ್ಲಿ ಹಳ್ಳದ ದಂಡೆಯ ಮೇಲೆ ನಿರ್ಮಾಣವಾದ ಈ ವಸತಿ ಶಾಲೆ ಅತ್ಯಂತ ಕಳಪೆಯಿಂದ ಕೂಡಿದ್ದು ಈ ಕಟ್ಟಡ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಪಾಲಕರು ಹಾಗೂ ಗ್ರಾಮದ ಜನರು ಆರೋಪ ಮಾಡಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಕುನೂರು, ತಳಕಲ್ ಬನ್ನಿಕೊಪ್ಪ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆಯಿದ್ದು ಮೂಲಸೌಕರ್ಯಗಳನ್ನು ಒಳಗೊಂಡಂತಹ ಪ್ರಮುಖ ಕಾಲೇಜುಗಳಾಗಿವೆ. ಕಳೆದ ವರ್ಷ ಸರ್ಕಾರಿ ಪದವಿ ಪೂರ್ವ ಕಾಲೇಜು ಮಸಬ ಹಂಚಿನಾಳ ಹಾಗೂ ಈ ವರ್ಷ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜೂರು ಹೊಸ ಕಾಲೇಜುಗಳನ್ನು ಶಾಸಕ ಬಸವರಾಜ ರಾಯರಡ್ಡಿ ಅವರು ಮಂಜೂರು ಮಾಡಿಸಿ ಕಾಲೇಜು ಪ್ರಾರಂಭವಾಗಿವೆ. ಆದರೆ ಈ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆ, ಜಾಗದ ಸಮಸ್ಯೆ, ಹಾಗೂ ವಿದ್ಯಾರ್ಥಿಗಳ ದಾಖಲಾತಿಯೇ ದೊಡ್ಡ ಸಮಸ್ಯೆ.

Quote - ಕಾಯಂ ಉಪನ್ಯಾಸಕರ ಹಾಗೂ ಸಿಬ್ಬಂದಿ ಕೊರತೆ ಬಿಟ್ಟರೆ ಉಳಿದ ಎಲ್ಲ ಮೂಲಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಪಕೀರಪ್ಪ ವಜ್ರಬಂಡಿ ಪ್ರಾಚಾರ್ಯರು ತಳಕಲ್

Quote - ಗ್ರಾಮಕ್ಕೆ ಒಂದರಂತೆ ಪಿಯು ಕಾಲೇಜು ಪ್ರಾರಂಭ ಮಾಡಿದರೆ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ ಕಾಣುತ್ತೇವೆ. ಆ ಕಾಲೇಜಿಗೆ ಮೂಲ ಸೌಕರ್ಯಗಳನ್ನು ನೀಡುವುದು ಕಷ್ಟ ಮಾರುತಿ ಎಸ್ ಪಾಲಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT