ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಡಿಲ: ಇಂದಿನಿಂದ ಸಾರಿಗೆ ಸಂಚಾರ ಆರಂಭ- ಸೇವೆಗೆ ಬಸ್‌ಗಳು ಸಿದ್ಧ

ಅಧಿಕಾರಿಗಳಿಂದ ಸಿದ್ಧತೆ ಪರಿಶೀಲನೆ
Last Updated 21 ಜೂನ್ 2021, 1:38 IST
ಅಕ್ಷರ ಗಾತ್ರ

ಕುಷ್ಟಗಿ: ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿರುವುದರಿಂದ ಸೋಮವಾರ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಆರಂಭವಾಗಲಿದೆ.

ಕಳೆದ ಎರಡು ಮೂರು ತಿಂಗಳಿನಿಂದಲೂ ಘಟಕದಲ್ಲೇ ಠಿಕಾಣಿ ಹೂಡಿದ್ದ ಬಸ್‌ಗಳು ರಸ್ತೆಗೆ ಇಳಿಯುವುದಕ್ಕೆ ಅವಕಾಶ ದೊರೆತಿದ್ದು, ಈ ಕಾರಣಕ್ಕೆ ಇಲ್ಲಿಯ ಘಟಕ ಮತ್ತು ನಿಲ್ದಾಣದಲ್ಲಿ ಸಿಬ್ಬಂದಿ ಹೊಸ ಹುರುಪಿನಿಂದ ಕರ್ತವ್ಯ ನಿರತರಾಗಿದ್ದು ಕಂಡುಬಂದಿತು. ನಿಲ್ದಾಣ ಮತ್ತು ಘಟಕ ಸ್ವಚ್ಛತೆ, ಬಸ್‌ಗಳನ್ನು ತೊಳೆದು ಒಳಗೆ ಮತ್ತು ಹೊರಗೆ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಲಾಯಿತು.

ಸಾರಿಗೆ ಸಂಚಾರ ಪುನರಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಘಟಕಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ್ದ ಜಿಲ್ಲೆಯ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿ ಎಂ.ಎ.ಮುಲ್ಲಾ ಸಂಚಾರಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು,‘ಲಾಕ್‌ಡೌನ್‌ ಮತ್ತಿತರೆ ಕಾರಣಗಳಿಂದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು ₹22 ಕೋಟಿ ನಷ್ಟ ಸಂಭವಿಸಿದೆ. ಈಗ ಲಾಕ್‌ಡೌನ್‌ ತೆರವುಗೊಂಡಿರುವುದರಿಂದ ಹಂತ ಹಂತವಾಗಿ ಬಸ್‌ ಸಂಚಾರ ಯಥಾಸ್ಥಿತಿಗೆ ತರಬೇಕಾಗಿದೆ. ಮೊದಲ ಹಂತದಲ್ಲಿ ತಾಲ್ಲೂಕು ಕೇಂದ್ರಗಳಿಗೆ ಬಸ್‌ಗಳು ಬರಹೋಗುತ್ತವೆ. ಸರ್ಕಾರದ ಮಾರ್ಗಸೂಚಿಯಂತೆ ಮುಂದೆ ಹೆಚ್ಚಿನ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಸದ್ಯ ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಬಸ್‌ಗಳು ಸಂಚರಿಸಲಿದ್ದು, ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅದರ ಅನುಸಾರ ಒಂದು ಬಸ್‌ನಲ್ಲಿ ಶೇಕಡ ಅರ್ಧದಷ್ಟು (ಅಂದಾಜು 27) ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸೋಮವಾರದಿಂದ ಚಾಲಕ ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಲಿದ್ದು, ಸಿಬ್ಬಂದಿ ಕೊರತೆ ಇಲ್ಲ. ಆದರೆ ಕಡ್ಡಾಯವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರಬೇಕು. ಅದೇ ರೀತಿ ಮುಂಜಾಗ್ರತೆಗಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಪ್ರಮಾಣಪತ್ರ ಹೊಂದಿರುವುದು ಅವಶ್ಯ ಎಂದು ಹೇಳಿದರು.

ಪ್ರಭಾರ ವ್ಯವಸ್ಥಾಪಕ ಸಣ್ಣಕುಂಟೆಪ್ಪ, ಬಸ್ ನಿಲ್ದಾಣ ಅಧಿಕಾರಿ ಎಂ.ಸಿ.ಕಾಸೀಂಸಾಬ್ ಕಾಯಿಕಡ್ಡಿ, ಇನ್‌ಸ್ಪೆಕ್ಟರ್ ಪರಶುರಾಮ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT