ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆಯ ಮತ ಎಣಿಕೆ: ಸುಗಮ ಮತಎಣಿಕೆಗೆ ಕೊಪ್ಪಳ ಜಿಲ್ಲಾಡಳಿತ ಸಜ್ಜು

Published 2 ಜೂನ್ 2024, 14:27 IST
Last Updated 2 ಜೂನ್ 2024, 14:27 IST
ಅಕ್ಷರ ಗಾತ್ರ

ಕೊಪ್ಪಳ: ಕಳೆದ ತಿಂಗಳು 7ರಂದು ನಡೆದಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ 450 ಸಿಬ್ಬಂದಿಯನ್ನು ಜಿಲ್ಲಾಡಳಿತ ನೇಮಿಸಿದೆ. ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಣಿಕೆ ಆರಂಭವಾಗಲಿದ್ದು ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಬರಲಿದೆ. ಎಣಿಕೆ ಕೇಂದ್ರದಲ್ಲಿ ಒಂಬತ್ತು ಭದ್ರತಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೊಠಡಿ ಸ್ಥಾಪಿಸಲಾಗಿದೆ.

ಈ ಕುರಿತು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಮಾಹಿತಿ ನೀಡಿದರು.

ಅಂಚೆ ಮತಪತ್ರ ಮತ್ತು ಇ.ಟಿ.ಪಿ.ಬಿ.ಎಂ.ಎಸ್ ಮೂಲಕ ಸ್ವೀಕೃತವಾದ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಒಂದು ಕೊಠಡಿ ಇರಲಿದ್ದು, ಒಟ್ಟು ಒಂಬತ್ತು ಕೊಠಡಿಗಳನ್ನು ಸ್ಥಾಪಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಮತಎಣಿಕೆ ಕಾರ್ಯಕ್ಕಾಗಿ ನಿಗದಿಪಡಿಸಲಾದ ಕೊಠಡಿಗಳಲ್ಲಿ 14 ಎಣಿಕೆ ಟೇಬಲ್‌ಗಳು ಮತ್ತು ಒಬ್ಬರು ಸಹಾಯಕ  ಚುನಾವಣಾಧಿಕಾರಿ ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಕೊಠಡಿಯಲ್ಲಿ ಎಂಟು ಟೇಬಲ್‌ ಮತ್ತು ಇ.ಟಿ.ಪಿ.ಬಿ.ಎಂ.ಎಸ್ ಮೂಲಕ ಸ್ವೀಕೃತವಾದ ಮತಪತ್ರಗಳ ಎಣಿಕೆಗಾಗಿ ಒಂದು ಟೇಬಲ್‌ ಇರಲಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಪ್ರತಿ ಸುತ್ತಿನಲ್ಲಿ 14 ಮತಗಟ್ಟೆಯ ಮತಯಂತ್ರಗಳ ಎಣಿಕೆ ನಡೆಯಲಿದೆ.

450 ಸಿಬ್ಬಂದಿ: ವಿಧಾನಸಭಾ ಕ್ಷೇತ್ರವಾರು ಸಿಬ್ಬಂದಿ ನೇಮಕ ಮಾಡಲಾಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು ಹಾಗೂ 17 ಮೈಕೋ ಆಬ್ಸರ್ಸ್‌ ಜೊತೆಗೆ ಅಂಚೆ ಮತಪತ್ರ ಎಣಿಕೆ ಕೊಠಡಿಗೆ 11 ಎಣಿಕೆ ಮೇಲ್ವಿಚಾರಕರು, 21 ಎಣಿಕೆ ಸಹಾಯಕರು ಹಾಗೂ 10 ಮೈಕೋ ಆಬ್ಸರ್ಸ್‌ ಸೇರಿ ಒಟ್ಟು 147 ಎಣಿಕೆ ಮೇಲ್ವಿಚಾರಕರು, 157 ಎಣಿಕೆ ಸಹಾಯಕರು ಮತ್ತು 146 ಮೈಕೋಆಬ್ಸವರ್‌ಗಳನ್ನು ನೇಮಿಸಲಾಗಿದೆ.

ಎಣಿಕೆ ಕಾರ್ಯಕ್ಕಾಗಿ ಅಭ್ಯರ್ಥಿಗಳು ಪ್ರತಿ ಟೇಬಲ್ಲಿಗೆ ಒಬ್ಬರಂತೆ ಒಟ್ಟು 129 ಎಣಿಕೆ ಏಜೆಂಟರು ಇರುತ್ತಾರೆ. ಬರೆದುಕೊಳ್ಳಲು ಹಾಳೆ ಮತ್ತು ಪೆನ್ನು ಹೊರತಪಡಿಸಿ ಬೇರೆ ಯಾವುದೇ ಸಾಮಗ್ರಿ ತರಲು ಅವರಿಗೆ ಅವಕಾಶವಿರುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶವಿಲ್ಲ. ಕೇಂದ್ರದಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿ, ಎಣಿಕೆ ಏಜೆಂಟರುಗಳು, ಅಭ್ಯರ್ಥಿಗಳು ಮತ್ತು ಯಾವುದೇ ವ್ಯಕ್ತಿಯು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಯಶೋಧಾ ವಂಟಗೋಡಿ
ಯಶೋಧಾ ವಂಟಗೋಡಿ
ಲೋಕಸಭಾ ಚುನಾವಣೆಯ ಮತದಾನ ಎಣಿಕೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್‌ ರೂಂ ತೆರೆಯಲಾಗುವುದು
ನಲಿನ್‌ ಅತುಲ್‌ ಜಿಲ್ಲಾಧಿಕಾರಿ
ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರ ಮತ್ತು ಜಿಲ್ಲೆಯಾದ್ಯಂತ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು
-ಯಶೋಧಾ ವಂಟಗೋಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಜಿಲ್ಲೆಯಾದ್ಯಂತ ಪೊಲೀಸ್ ಕಣ್ಗಾವಲು

4ರಂದು ಬೆಳಿಗ್ಗೆ 8 ಗಂಟೆಯಿಂದ ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಲಿದ್ದು ಎಣಿಕೆ ಕೇಂದ್ರ ಹಾಗೂ ಜಿಲ್ಲೆಯಾದ್ಯಂತ ಕಣ್ಗಾವಲು ಇರಿಸಲಾಗಿದ್ದು ಅಗತ್ಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.

ಮತ ಎಣಿಕೆ ಕೇಂದ್ರದ ಸುತ್ತಲಿನ ಜಾಗ ನಿರ್ಬಂಧಿತ ಪ್ರದೇಶವಾಗಿರುವುದರಿಂದ ಬಸವೇಶ್ವರ ವೃತ್ತದಿಂದ ಗವಿಮಠ ಕಡೆಗೆ ಗಡಿಯಾರ ಕಂಬದಿಂದ ಹಾಗೂ ಡಾಲರ್ಸ್ ಕಾಲೋನಿಯಿಂದ ಗವಿಮಠದ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದ್ದು ಅವುಗಳನ್ನು ಬಳಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ.

ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಏಜೆಂಟರು ಮತ ಎಣಿಕೆ ಏಜೆಂಟರ್‌ಗಳು ಹಾಗೂ ಮತ ಎಣಿಕೆ ಪ್ರಕ್ರಿಯೆಗೆ ನಿಯುಕ್ತಿಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಬಸವೇಶ್ವರ ವೃತ್ತದ ಮೂಲಕ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದ್ದು ಮುಂಚಿತವಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು ಎಂದು ಹೇಳಲಿದ್ದಾರೆ. ಮತ ಎಣಿಕೆಗಾಗಿ ಒಬ್ಬರು ಎಎಸ್‌ಪಿ ಇಬ್ಬರು ಡಿವೈಎಸ್‌ಸಿಪಿ 7 ಜನ ಸಿಪಿಐ ಹಾಗೂ ಪೊಲೀಸ್‌ ಇನ್‌ಸ್ಟೆಕ್ಟರ್‌ 21 ಜನ ಪಿಎಸ್‌ಐ 33 ಎಎಸ್‌ಐ 100 ಜನ ಹೆಡ್‌ ಕಾನ್‌ಸ್ಟೆಬಲ್‌ 125 ಜನ ಕಾನ್‌ಸ್ಟೆಬಲ್‌ 24 ಜನ ಮಹಿಳಾ ಪೇದೆ ತಲಾ ಎರಡು ಡಿಎಆರ್‌ ಹಾಗೂ ಎರಡು ಕೆಎಸ್‌ಆರ್‌ಪಿ ಮತ್ತು 50 ಮಂದಿ ಗೃಹರಕ್ಷಕ ದಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. 

ವಿಧಾನಸಭಾ ಕ್ಷೇತ್ರವಾರು ಸುತ್ತುಗಳ ವಿವರ

ವಿಧಾನಸಭಾ ಕ್ಷೇತ್ರ;ಒಟ್ಟು ಮತಗಟ್ಟೆ;ಒಟ್ಟು ಸುತ್ತುಗಳು

ಸಿಂಧನೂರು;269;20

ಮಸ್ಕಿ; 231;17

ಕುಷ್ಟಗಿ;268; 20

ಕನಕಗಿರಿ;266;19

ಗಂಗಾವತಿ;235;17

ಯಲಬುರ್ಗಾ;256;19

ಕೊಪ್ಪಳ;292; 21

ಸಿರಗುಪ್ಪ;228;17

ಭಾರಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ

ಮತ ಎಣಿಕೆ ದಿನದಂದು ಕೊಪ್ಪಳದ ಗವಿಮಠ ಮೂಲಕ ಸಂಚರಿಸುವ ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.    

ಗವಿಮರ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಸಂಚರಿಸುವ ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ಬಾರಿ ವಾಹನಗಳು ಬೈಪಾಸ್ ರಸ್ತೆ ಮೂಲಕ ತೆರಳಬೇಕು. ಗವಿಮಠ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಹಾಗೂ ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ತೆರಳುವ ಸಂಚರಿಸುವ ಲಘು ಹಾಗೂ ದ್ವಿಚಕ್ರ ವಾಹನಗಳು ಗಡಿಯಾರ ಕಂಬ ಅಶೋಕ ವೃತ್ತ ಹಳೇ ಡಿಸಿ ವೃತ್ತದ ಮೂಲಕ ಸಂಚರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT