ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ | ಮುಗಿದ ನಾಮಪತ್ರ ಭರಾಟೆ, ಈಗ ಮತದಾನದ್ದೇ ಚಿಂತೆ

ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ಅಂತಿಮ ಕಣ ಸಜ್ಜು, ನಾಲ್ಕು ಜನ ಉಮೇದುವಾರಿಕೆ ವಾಪಸ್‌
Published 23 ಏಪ್ರಿಲ್ 2024, 5:51 IST
Last Updated 23 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ಟಿಕೆಟ್‌ ಯಾರಿಗೆ ಸಿಗುತ್ತದೆ, ಯಾರು ಯಾವಾಗ ನಾಮಪತ್ರ ಸಲ್ಲಿಸುತ್ತಾರೆ, ಯಾವ ಅಭ್ಯರ್ಥಿ ಉಮೇದುವಾರಿಕೆ ವಾಪಸ್‌ ಪಡೆಯುತ್ತಾರೆ ಎನ್ನುವ ಎಲ್ಲ ಲೆಕ್ಕಾಚಾರಗಳು ಸೋಮವಾರ ಪೂರ್ಣಗೊಂಡಿದ್ದು ಈಗ ಮೇ 7ರಂದು ನಡೆಯುವ ಮತದಾನದತ್ತ ಎಲ್ಲರ ಚಿತ್ತ ನೆಟ್ಟಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ಪ್ರತಿಬಾರಿಗಿಂತಲೂ ಈ ಬಾರಿ ಅನೇಕ ಬೆಳವಣಿಗೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಪಕ್ಷದಿಂದ ಕೆ. ರಾಜಶೇಖರ ಹಿಟ್ನಾಳ ಅಭ್ಯರ್ಥಿಯಾದರೆ, ಬಿಜೆಪಿ ಹೊಸ ಮುಖ ಡಾ. ಬಸವರಾಜ ಕ್ಯಾವಟರ್ ಅವರಿಗೆ ಮಣೆ ಹಾಕಿತು. ಬಳಿಕ ಸಂಗಣ್ಣ ಕರಡಿ ಅಸಮಾಧಾನಗೊಂಡು ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಟಿಕೆಟ್‌ಗಾಗಿ ಎರಡೂ ಪಕ್ಷಗಳಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದ ಕಾರಣ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಕ್ಯಾವಟರ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕವಂತೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಅನೇಕ ಪರ ವಿರೋಧ ಚರ್ಚೆಗಳು ನಡೆದವು.

ಟಿಕೆಟ್‌ ಘೋಷಣೆಯಾದ ಬಳಿಕ ಎರಡೂ ಪಕ್ಷಗಳ ನಾಯಕರು ಮೊದಲು ಸಾಂಕೇತಿಕವಾಗಿ ಬಳಿಕ ತಮ್ಮ ಪಕ್ಷಗಳ ರಾಜ್ಯ ಮಟ್ಟದ ನಾಯಕರನ್ನು ಕರೆಯಿಸಿ ಶಕ್ತಿ ಪ್ರದರ್ಶನ ಮಾಡಿ ಮತ್ತೊಂದು ಸಲ ಉಮೇದುವಾರಿಕೆ ಸಲ್ಲಿಸಿದರು. ಮತದಾನಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು ಈಗ ಚುನಾವಣಾ ಅಖಾಡ ನಿಧಾನವಾಗಿ ರಂಗೇರುತ್ತಿದೆ. ನಾಯಕರ ನಡುವೆ ಮಾತಿನ ಭರಾಟೆ, ಟೀಕೆ ಹಾಗೂ ಪ್ರತಿ ಟೀಕೆಗಳು ಜೋರಾಗಿವೆ.

ಇಷ್ಟು ದಿನಗಳ ಕಾಲ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್‌ ಪಡೆಯುವಿಕೆ ಈ ಪ್ರಮುಖ ಪ್ರಕ್ರಿಯೆಗಳು ಜರುಗಿದವು. ಇನ್ನು ಮುಂದೆ ಉಳಿದ ಇನ್ನಷ್ಟು ದಿನಗಳ ಕಾಲ ಪ್ರಚಾರದ ರಂಗು ಮತ್ತಷ್ಟು ಹೆಚ್ಚಾಗುವಂತೆ ಮಾಡಲು ಕ್ಷೇತ್ರದಲ್ಲಿ ಪ್ರಮುಖವಾಗಿ ಸ್ಪರ್ಧೆಯಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ ನಾಯಕರು ಕಾರ್ಯಕ್ರಮಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನಿಗದಿಯಾಗಿವೆ.

ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮೂಲಕವೇ ಮತದಾರರ ಮನ ಗೆಲ್ಲಲು ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಯಿಸಿ ಕಾರ್ಯಕ್ರಮ ನಡೆಸಬೇಕು ಅಥವಾ ಪಕ್ಷದ ಬೇರೆ ರಾಷ್ಟ್ರೀಯ ನಾಯಕರನ್ನಾದರೂ ಆಹ್ವಾನಿಸಬೇಕು ಎನ್ನುವ ಬಗ್ಗೆ ಯೋಜನೆ ರೂಪಿಸುತ್ತದೆ. ಉಳಿದ ಇನ್ನಷ್ಟು ದಿನ ಬಿಸಿಲಿನ ಕಾವಿನಂತೆ ಚುನಾವಣಾ ಅಖಾಡವೂ ಮತ್ತಷ್ಟು ರಂಗೇರುವುದು ನಿಶ್ಚಿತ.

ನಾಲ್ಕು ಜನ ನಾಮಪತ್ರ ವಾಪಸ್‌

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಜನ ಅಭ್ಯರ್ಥಿಗಳು ಸೋಮವಾರ ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ. ಸಾಂಕೇತಿಕವಾಗಿ ಸಲ್ಲಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ತಂದೆ ಕೆ. ಬಸವರಾಜ ಹಿಟ್ನಾಳ ಕುಷ್ಟಗಿಯ ಮಹಮ್ಮದ್‌ ನಜೀರುದ್ದೀನ್‌ ಮೂಲಿಮನಿ ಕನಕಗಿರಿಯ ಬಸವರಾಜ ಮತ್ತು ಗಂಗಾವತಿಯ ಮಹಮ್ಮದ್‌ ಸಲ್ಮಾನ್‌ ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಲಿನ್‌ ಅತುಲ್ ತಿಳಿಸಿದ್ದಾರೆ. ಮಲ್ಲಪ್ಪ ಗುಡದಪ್ಪ ಶಿವಪ್ಪ ಮತ್ತು ಮೆಹಬೂಬಸಾಬ್‌ ಅವರ ನಾಮಪತ್ರಗಳು ತಿರಸ್ಕೃತವಾಗಿವೆ.

ಸ್ಪರ್ಧಾ ಕಣದಲ್ಲಿ 19 ಜನ

ಕೊಪ್ಪಳ ಕ್ಷೇತ್ರದಲ್ಲಿ ಅಂತಿಮವಾಗಿ 19 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಡಾ. ಬಸವರಾಜ ಕ್ಯಾವಟರ್‌ (ಬಿಜೆಪಿ) ಕೆ. ರಾಜಶೇಖರ ಹಿಟ್ನಾಳ (ಕಾಂಗ್ರೆಸ್‌) ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಶಂಕರ (ಬಹುಜನ ಸಮಾಜ ಪಕ್ಷ) ಕೊಪ್ಪಳದ ಅನೋಜಿರಾವ್ ಜಿ. (ಸರ್ವ ಜನತಾ ಪಾರ್ಟಿ) ಬಳ್ಳಾರಿಯ ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ (ಚಾಲೆಂಜರ್ಸ್‌ ಪಾರ್ಟಿ) ಸಿಂಧನೂರಿನ ನಿರುಪಾದಿ ಕೆ. ಗೋಮರ್ಸಿ (ಕರ್ನಾಟಕ ರಾಷ್ಟ್ರ ಸಮಿತಿ) ಯಾದಗಿರಿ ತಾಲ್ಲೂಕಿನ ಶಹಾಪುರದ ರಮನಾಜಬಿ (ಆಲ್‌ ಇಂಡಿಯಾ ಉಲಾಮಾ ಕಾಂಗ್ರೆಸ್‌) ಶರಣಪ್ಪ ಗಡ್ಡಿ (ಎಸ್‌ಯುಸಿಐ ಸೋಷಲಿಸ್ಟ್‌) ಸಿ. ಶರಣಬಸಪ್ಪ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಕರ್ನಾಟಕ) ಪಕ್ಷಗಳಿಂದ ಸ್ಪರ್ಧೆ ಮಾಡಿದ್ದಾರೆ. ಪಕ್ಷೇತರರಾಗಿ ಕುಷ್ಟಗಿಯ ಇಮಾಮಸಾಬ್‌ ಜಂಗ್ಲಿಸಾಬ್‌ ಮುಲ್ಲಾ ಕೊಪ್ಪಳದ ಕರೀಂಪಾಶ ಗಚ್ಚಿನಮನಿ ಕುಷ್ಟಗಿ ತಾಲ್ಲೂಕಿನ ಪರಸಾಪುರದ ಕಾಳಪ್ಪ ಎಚ್ಚರಪ್ಪ ವಿಶ್ವಕರ್ಮ ಬಡಿಗೇರ ಹೊಸಪೇಟೆಯ ಪ.ಯ. ಗಣೇಶ ಹಗರಿಬೊಮ್ಮನಹಳ್ಳಿಯ ನಾಗರಾಜ್ ಕಲಾಲ್‌ ಗಂಗಾವತಿ ತಾಲ್ಲೂಕು ವಡ್ಡರಹಟ್ಟಿಯ ಕರಡಿ ಬಸವರಾಜ ಕೊಪ್ಪಳದ ಮಲ್ಲಿಕಾರ್ಜುನ ಹಡಪದ ಬಳ್ಳಾರಿಯ ರುಕ್ಮಿಣಿ ರಾಯಚೂರು ಜಿಲ್ಲೆ ಮಾನ್ವಿಯ ಸುರೇಶಗೌಡ ಮುಂದಿನಮನಿ ಮತ್ತು ಕುಷ್ಟಗಿ ತಾಲ್ಲೂಕಿನ ಶಾಖಾಪುರದ ಹನಮೇಶ ಎಸ್‌.ಎಚ್‌. ಕಣದಲ್ಲಿ ಉಳಿದುಕೊಂಡಿದ್ದಾರೆ.

ಮತದಾನಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು ಪ್ರಚಾರ ಇನ್ನಷ್ಟು ಚುರುಕುಗೊಳಿಸಲಾಗುವುದು. ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ ನಾಯಕರು ಪ್ರಚಾರಕ್ಕೆ ಬರುವರು.
-ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಇನ್ನುಳಿದ ದಿನ ಶರವೇಗದಲ್ಲಿ ಪ್ರಚಾರ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ.
-ನವೀನ್‌ ಗುಳಗಣ್ಣನವರ, ಬಿಜೆಪಿ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT