ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭೆ | ಗ್ಯಾರಂಟಿ ಯೋಜನೆಗಳೇ ಗೆಲುವಿಗೆ ಶ್ರೀರಕ್ಷೆ: ರಾಜಶೇಖರ ಹಿಟ್ನಾಳ

Published 2 ಮೇ 2024, 4:39 IST
Last Updated 2 ಮೇ 2024, 4:39 IST
ಅಕ್ಷರ ಗಾತ್ರ
ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಸತತ ಎರಡನೇ ಬಾರಿಗೆ ಸ್ಪರ್ಧಿಸಿರುವ ಕೆ. ರಾಜಶೇಖರ ಹಿಟ್ನಾಳ ಗೆಲುವಿನ ವಿಶ್ವಾಸದಲ್ಲಿದ್ದಾರೆ. ‘ಲೋಕ’ದ ಸವಾಲಿನ ಕುರಿತು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ

ಸತತ ಎರಡನೇ ಬಾರಿಗೆ ಅಭ್ಯರ್ಥಿಯಾಗಿದ್ದೀರಿ. ಹೇಗಿದೆ ಚುನಾವಣಾ ಕಾವು?

ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ತಿಳಿಸಿರುವ ಯೋಜನೆಗಳು, ಹತ್ತು ವರ್ಷ ಆಡಳಿತ ಮಾಡಿರುವ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಆ ಪಕ್ಷದ ವಿರೋಧಿ ಅಲೆ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಗಲಿದೆ. ಈ ಬಾರಿ ಗೆಲುವು ನಮ್ಮದೇ. ಜನರ ಒಲವೂ ನಮ್ಮ ಕಡೆಯಿದೆ.

ಪ್ರ

ಗ್ಯಾರಂಟಿ ಕೆಲ ಯೋಜನೆಗಳು ಒಂದು ವರ್ಗದ ಜನರಿಗೆ ಮಾತ್ರ ಸಿಗುತ್ತಿವೆ. ಅವರಷ್ಟೇ ನಿಮಗೆ ಮತ ಹಾಕಿದರೆ ಸಾಕೇ?

ಆರ್ಥಿಕವಾಗಿ ಬಡವರು ಬೆಳೆದರೆ ಮಾತ್ರ ದೇಶದಲ್ಲಿ ವಹಿವಾಟು ಜಾಸ್ತಿಯಾಗುತ್ತದೆ. ಮಾರುಕಟ್ಟೆಯೂ ಹೆಚ್ಚಾಗುತ್ತದೆ. ಇದರಿಂದ ಎಲ್ಲ ವರ್ಗದವರ ವ್ಯಾಪಾರ, ವಹಿವಾಟು ಹೆಚ್ಚಳವಾಗಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇವೆಲ್ಲವೂ ಒಂದಕ್ಕೊಂದು ಕೊಂಡಿ ಹೊಂದಿವೆ.

ಪ್ರ

ದೇಶದಾದ್ಯಂತ ನರೇಂದ್ರ ಮೋದಿ ಅಲೆಯಿದೆ ಎನ್ನುವ ಮಾತು ಇದೆಯಲ್ಲ?

ಹಿಂದಿನ ಎರಡು ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮೋದಿ ಅಲೆ ಅಷ್ಟೊಂದು ಕಾಣಿಸುತ್ತಿಲ್ಲ. ಜನ ವಾಸ್ತವ ಏನು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಯೋಜನೆಗಳು ಜನರ ಮನೆಗೆ ತಲುಪಿವೆ. ಹತ್ತು ವರ್ಷಗಳಲ್ಲಿ ಬಿಜೆಪಿ ಜನರಿಗೆ ಮೆಚ್ಚುಗೆಯಾಗುವ ಯಾವ ಯೋಜನೆಗಳನ್ನೂ ರೂಪಿಸಿಲ್ಲ. ಯುವಜನರಿಗೆ ನೌಕರಿ ಕೊಟ್ಟಿಲ್ಲ. 

ಪ್ರ

ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ನಿಮಗೆ ಅನುಕೂಲವಾಗಲಿದೆಯೇ?

ಸಂಗಣ್ಣ ಕರಡಿ ಅವರಿಗೆ ವೈಯಕ್ತಿಕ ಶಕ್ತಿ ಹಾಗೂ ವರ್ಚಸ್ಸು ಇದೆ. ನಾಲ್ಕು ದಶಕಗಳಿಂದ ರಾಜಕಾರಣದಲ್ಲಿಕೊಂಡು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಸದಾ ಜನರ ನಡುವೆ ಇರುವ ವ್ಯಕ್ತಿಯಾಗಿದ್ದಾರೆ. ಅವರಿಂದ ನಮ್ಮ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ. ಬಿಜೆಪಿಗೆ ನಷ್ಟವಾಗಲಿದೆ ಎನ್ನುವುದು ಆ ಪಕ್ಷದವರಿಗೂ ತಿಳಿದಿದೆ.

ಪ್ರ

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಬಾಕಿ ಉಳಿದ ನೀರಾವರಿ ಯೋಜನೆಗಳ ಬಗ್ಗೆ ನಿಮ್ಮ ನಿಲುವು ಏನು?

ನೀರಾವರಿ ಯೋಜನೆಗಳ ಬಗ್ಗೆ ನಮ್ಮ ಪಕ್ಷದವರು ಕೇವಲ ಮಾತನಾಡುವುದಷ್ಟೇ ಅಲ್ಲ, ಈಗಾಗಲೇ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಾವರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಕೆರೆ ತುಂಬಿಸುವ ಯೋಜನೆಗಳನ್ನು ಮಾಡಿದ್ದೇ ನಮ್ಮ ಪಕ್ಷ.

ಪ್ರ

ಕೊಪ್ಪಳ ಲೋಕಸಭೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಇದು ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆಯೇ?

ನಮ್ಮ ಪಕ್ಷದ ಆಯಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲರೂ ನನ್ನ ಗೆಲುವಿಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳು ಕಾಂಗ್ರೆಸ್‌ ಪಕ್ಷದ ಪ್ರತಿ ಕಾರ್ಯಕರ್ತರಿಗೆ ಶಕ್ತಿ ಕೊಟ್ಟಂತಾಗಿವೆ.

ಪ್ರ

ಮೇಲಿಂದ ಮೇಲೆ ಹಿಟ್ನಾಳ ಕುಟುಂಬಕ್ಕೆ ಮಾತ್ರ ಟಿಕೆಟ್‌ ನೀಡಲಾಗುತ್ತಿದೆ ಎನ್ನುವ ದೂರು ಇದೆಯಲ್ಲ?

2014ರಲ್ಲಿ ನನ್ನ ತಂದೆ ಬಸವರಾಜ ಹಿಟ್ನಾಳ, ಹಿಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೆ. ನಾವು ಯಾರೂ ನೇರವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದವರಲ್ಲ. ನಿರಂತರವಾಗಿ ಜನರ ಜೊತೆಯಲ್ಲಿದ್ದುಕೊಂಡ ಅವರ ನೋವುನಲಿವುಗಳಿಗೆ ಸ್ಪಂದಿಸಿದ ಬಳಿಕವಷ್ಟೇ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. 

ಪ್ರ

ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದೀರಿ. ಆ ಅನುಕಂಪ ಮತದಾರರಲ್ಲಿ ಈಗಲೂ ಇದೆ ಎನಿಸುತ್ತದೆಯೇ?

ಈ ಬಾರಿ ಕ್ಷೇತ್ರದಾದ್ಯಂತ ಉತ್ತಮ ಅಲೆಯಿದೆ. ಹಿಂದಿನ ಚುನಾವಣೆಯಲ್ಲಿಯೇ ಗೆಲ್ಲಬೇಕಾಗಿತ್ತು. ಅನಿರೀಕ್ಷಿತವಾಗಿ ಸೋಲು ಎದುರಿಸಬೇಕಾಯಿತು. ಈ ಬಾರಿ ಜನರಿಗೆ ನನ್ನನ್ನೇ ಗೆಲ್ಲಿಸಬೇಕು ಎನ್ನುವ ಭಾವನೆ ಬಂದಿದೆ. ಜನರ ಸ್ಪಂದನೆಯೂ ಉತ್ತಮವಾಗಿದೆ.

ಪ್ರ

ಸಂಸದರಾದರೆ ಮೊದಲು ಯಾವ ಕೆಲಸಕ್ಕೆ ಆದ್ಯತೆ ನೀಡುತ್ತೀರಿ?

ನವಲಿ ಸಮಾನಾಂತರ ಜಲಾಶಯ ನಿರ್ಮಿಸುವೆ. ಇನ್ನಷ್ಟು ರೈಲ್ವೆ ಟ್ರ್ಯಾಕ್‌, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ಕೊಡುವೆ.

ಪ್ರ

ಫಲಿತಾಂಶದ ಬಗ್ಗೆ ಲೆಕ್ಕಾಚಾರವೇನು?

ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವೆ. ನಮ್ಮ ಕ್ಷೇತ್ರದಲ್ಲಿಯೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಿಗೆ ಗ್ಯಾರಂಟಿ ನೀಡಿದ್ದೇವೆ. ಈ ಅಂಶ ನಮಗೆ ವರದಾನವಾಗಲಿದೆ.

ಪ್ರ

ಗಂಗಾವತಿಯಲ್ಲಿ ಬಣ ರಾಜಕಾರಣದ ಬಗ್ಗೆ ಹೇಳಿ?

ಅಲ್ಲಿರುವ ಸಮಸ್ಯೆ ದೊಡ್ಡದೇನಲ್ಲ. ಎಲ್ಲರೂ ಕಾಂಗ್ರೆಸ್‌ ಪಕ್ಷ ಗೆಲ್ಲಬೇಕು ಎನ್ನವು ಸಲುವಾಗಿಯೇ ಕೆಲಸ ಮಾಡುತ್ತಿದ್ದಾರೆ. ಎರಡೂ ಕಡೆಯುವರು ಪ್ರಚಾರ ಮಾಡುತ್ತಿದ್ದು ಪಕ್ಷಕ್ಕೆ ಹಾಗೂ ನನಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT