ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಗವಿಮಠದ ಸನ್ನಿಧಿಗೆ ಲಕ್ಷಾಂತರ ಭಕ್ತರು

ಅವರಾತ್ರಿ ಅಮಾವಾಸ್ಯೆ ಅಂಗವಾಗಿ ಮಠಕ್ಕೆ ಭೇಟಿ, ಮಹಾದಾಸೋಹ ಸಂಪನ್ನ, ಗೋಧಿ ಹುಗ್ಗಿಯ ಸವಿ
Published 9 ಫೆಬ್ರುವರಿ 2024, 16:23 IST
Last Updated 9 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಕೊಪ್ಪಳ: ಪ್ರತಿವರ್ಷದ ಸಂಪ್ರದಾಯದಂತೆ ಅವರಾತ್ರಿ ಅಮಾವಾಸ್ಯೆಯಂದು ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಕರ್ತೃ ಗದ್ದುಗೆಯ ದರ್ಶನ ಪಡೆದರು. ಮಹಾದಾಸೋಹದ ಕೊನೆಯ ದಿನದ ಪ್ರಸಾದವವನ್ನೂ ಸವಿದರು.

ಗವಿಮಠದ ಆರು ಎಕರೆ ಪ್ರದೇಶದ ಆವರಣದಲ್ಲಿ ಜ. 21ರಂದು ಮಹಾದಾಸೋಹ ಆರಂಭವಾಗಿತ್ತು. ಸಾವಿರಾರು ಜನ ಏಕಕಾಲಕ್ಕೆ ಸರಾಗವಾಗಿ ಊಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶುಕ್ರವಾರ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದರು. ಜ. 27ರಂದು ನಡೆದಿದ್ದ ಮಹಾರಥೋತ್ಸವದ ತೇರು ಮಠದ ಮೈದಾನದಲ್ಲಿ ಇರಿಸಲಾಗಿದ್ದು, ಭಕ್ತರು ಅದರ ಮುಂಭಾಗದಲ್ಲಿ ಟೆಂಗಿನಕಾಯಿ ಒಡೆಯಿಸಿ, ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.

ಗವಿಮಠದ ದಾಸೋಹದಲ್ಲಿ ಗೋಧಿ ಹುಗ್ಗಿ
ಗವಿಮಠದ ದಾಸೋಹದಲ್ಲಿ ಗೋಧಿ ಹುಗ್ಗಿ

ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಭಕ್ತರು ವಾಹನಗಳಲ್ಲಿ, ಇನ್ನೂ ಕೆಲವರು ಪಾದಯಾತ್ರೆಯ ಮೂಲಕ ಮಠಕ್ಕೆ ತಲುಪಿದರು. ತಮ್ಮೂರಿನಿಂದ ಮಠದ ತನಕ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಗಿಬಂದರು. ಜಾತ್ರಾ ಮಹೋತ್ಸವ ಆರಂಭಕ್ಕೂ ಸಾಕಷ್ಟು ದಿನಗಳ ಮೊದಲೇ ಅನೇಕರು ಜೋಳದ ರೊಟ್ಟಿ, ತರಕಾರಿ, ದವಸ ಧಾನ್ಯ, ಸಿಹಿ ಮಾದಲಿ, ಶೇಂಗಾ ಹೋಳಿಗೆ, ಉಪ್ಪಿನಕಾಯಿ, ಕಡ್ಲೇಪುಡಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿ, ಸಿಹಿ ಬೂಂದಿ, ಕರ್ಚಿಕಾಯಿ, ಮೈಸೂರು ಪಾಕ, ರವೆ ಉಂಡಿ ಹೀಗೆ ಅನೇಕ ತಿನಿಸುಗಳನ್ನು ಮಠಕ್ಕೆ ಅರ್ಪಿಸಿದ್ದರು. ಅದನ್ನು ಭಕ್ತರಿಗೆ ಉಣಬಡಿಸಲಾಯಿತು. ಮಹಾದಾಸೋಹ ಮುಗಿದರೂ ಭಕ್ತರಿಂದ ಮಠಕ್ಕೆ ದವಸ ಧಾನ್ಯ ಸಮರ್ಪಣೆಯಾಗುತ್ತಲೇ ಇತ್ತು.

ಗವಿಮಠದ ಮಹಾರಥೋತ್ಸವದ ಬಳಿಕ ಮೊದಲ ಅಮಾವಾಸ್ಯೆ ಇದಾದ ಕಾರಣ ಭಕ್ತರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿತ್ತು. ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌ನಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿಯ ಭಜನೆ ಮಾಡುತ್ತ ಗ್ರಾಮೀಣ ಭಾಗದ ಸಂಸ್ಕೃತಿಯನ್ನು ಬಿಂಬಿಸುತ್ತ ಮಠಕ್ಕೆ ಬರುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಸುರಕ್ಷತೆಯ ಪೊಲೀಸರ ಸಂಖ್ಯೆಯನ್ನೂ ಹೆಚ್ಚಿಸಲಾಗಿತ್ತು. 

ಮಹಾರಥೋತ್ಸವ ಮುನ್ನಾದಿನ ಮತ್ತು ಅಂದು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎನ್ನುವ ಕಾರಣಕ್ಕೆ ಅನೇಕರು ಮನೆಯಲ್ಲಿದ್ದುಕೊಂಡೇ ಜಾತ್ರೆಯ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡಿರುತ್ತಾರೆ. ಹೀಗಾಗಿ ರಥೋತ್ಸವ ಮುಗಿದ ಬಳಿಕ ಈಗಿನ ಅಮಾವಾಸ್ಯೆ ತನಕ ಭಕ್ತರು ನಿರಂತರವಾಗಿ ಮಠಕ್ಕೆ ಬರುತ್ತಲೇ ಇರುತ್ತದೆ. ಶುಕ್ರವಾರ ರಾತ್ರಿ ಹೊತ್ತೇರುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು.

ಜ. 21ರಂದು ಆರಂಭವಾಗಿದ್ದ ಮಹಾದಾಸೋಹದ ಒಲೆಗಳು ಶುಕ್ರವಾರ ಮಧ್ಯರಾತ್ರಿಯ ತನಕ ಉರಿಯುತ್ತಲೇ ಇದ್ದವು. ಕೊನೆಯ ಭಕ್ತನ ಊಟವಾಗುವ ತನಕ ಯಾರಿಗೂ ಕಿಂಚಿತ್ತೂ ಕಡಿಮೆಯಾಗದಂತೆ ಮಠದ ಸಿಬ್ಬಂದಿ ನಿಗಾ ವಹಿಸಿದ್ದರು. ಹೀಗಾಗಿ ಅಮಾವಾಸ್ಯೆ ದಿನದ ವಾತಾವರಣವೂ ಮಹಾರಥೋತ್ಸವದ ದಿನದ ಸಂಭ್ರಮವನ್ನು ನೆನಪಿಸುವಂತೆ ಇತ್ತು. ಭಕ್ತರು ಗವಿಮಠದ ಆವರಣ, ಕೈಲಾಸ ಮಂಟಪ, ಗದ್ದುಗೆ, ಕೆರೆ ಆವರಣ, ಮಹಾದಾಸೋಹ ಮಂಟಪ ಹೀಗೆ ಅನೇಕ ಕಡೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ಲಕ್ಷಾಂತರ ಭಕ್ತರಿಗೆ ಸಿದ್ಧವಾದ ಬದನೇಕಾಯಿ ಪಲ್ಲೆ
ಲಕ್ಷಾಂತರ ಭಕ್ತರಿಗೆ ಸಿದ್ಧವಾದ ಬದನೇಕಾಯಿ ಪಲ್ಲೆ
ಭಕ್ತರಿಗೆ ಸಿದ್ಧಪಡಿಸಲಾಗಿದ್ದ ಹಪ್ಪಳ
ಭಕ್ತರಿಗೆ ಸಿದ್ಧಪಡಿಸಲಾಗಿದ್ದ ಹಪ್ಪಳ

19 ಲಕ್ಷ ಭಕ್ತರಿಂದ ಮಹಾದಾಸೋಹ

ಗವಿಸಿದ್ಧೇಶ್ವರ ಮಠದ ಜಾತ್ರೆಯಲ್ಲಿ ಜ. 21ರಿಂದ ಫೆ. 9ರ ತನಕದ ಅವಧಿಯಲ್ಲಿ ಅಂದಾಜು 18ರಿಂದ 19 ಲಕ್ಷ ಜನ ಭಕ್ತರು ಪ್ರಸಾದ ಸೇವಿಸಿದ್ದಾರೆ. ಶುಕ್ರವಾರ ಒಂದೇ ದಿನ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ ಎಂದು ಜಾತ್ರೆಯ ದಾಸೋಹ ವಿಭಾಗದ ಉಸ್ತುವಾರಿ ರಾಮನಗೌಡರ ತಿಳಿಸಿದರು. ‘ಅವರಾತ್ರಿ ಅಮಾವಾಸ್ಯೆ ಅಂಗವಾಗಿ 85 ಕ್ವಿಂಟಲ್‌ ಗೋಧಿ ಹುಗ್ಗಿ ಹಪ್ಪಳ ತುಪ್ಪ ಹಾಲು ಅನ್ನ ಸಾಂಬಾರ್‌ ಉಪ್ಪಿನಕಾಯಿ ಬದನೇಕಾಯಿ ಪಲ್ಲೆ ಮಾಡಲಾಗಿತ್ತು. ಮಹಾದಾಸೋಹ ಸಮಯದಲ್ಲಿ ಒಟ್ಟು 18ರಿಂದ 20 ಲಕ್ಷ ಜೋಳದ ರೊಟ್ಟಿಗಳು 10 ಲಕ್ಷ ಶೇಂಗಾ ಹೋಳಿಗೆ ಭಕ್ತರಿಗೆ ನೀಡಲಾಗಿದೆ’ ಎಂದರು.

ಸೇವಾ ಮನೋಭಾವನೆ; ಕೆಲಸ ಸರಾಗ

ಜಾತ್ರೆ ಆರಂಭವಾದ ದಿನದಿಂದಲೂ ಮಹಾದಾಸೋಹದ ಕೊನೆಯ ದಿನದ ತನಕವೂ ಭಕ್ತರಿಗೆ ಊಟದ ಸೇವೆಯಲ್ಲಿ ತೊಂದರೆಯಾಗದಂತೆ ಗವಿಮಠ ಎಚ್ಚರಿಕೆ ವಹಿಸಿತ್ತು. ಇದಕ್ಕೆ ಕಾರಣವಾಗಿದ್ದು ಸ್ವಯಂ ಸೇವಕರ ಸೇವಾ ಮನೋಭಾವನೆ. ಮಠದ ಸಾವಿರಾರು ವಿದ್ಯಾರ್ಥಿಗಳು ಎನ್‌ಸಿಸಿ ಭಾರತ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಸಿಬ್ಬಂದಿ ಸಕ್ರಿಯವಾಗಿರುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಸ್ನೇಹಿತರ ಬಳಗದವರು ಹೀಗೆ ಅನೇಕರು ಸ್ವಯಂಪ್ರೇರಣೆಯಿಂದ ದಾಸೋಹ ಬಡಿಸುವ ಸೇವೆಯಲ್ಲಿ ಭಾಗಿಯಾದರು. ಊಟಕ್ಕೆ ಬಂದು ಹೋಗುವವರನ್ನು ಪೊಲೀಸರು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT