ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಕಾಮನೂರಿನಲ್ಲಿ ಗಾಂಧಿ ಕಲರವ

ಪಾದಯಾತ್ರೆ ಮೂಲಕ ಬಂದ ಗಾಂಧಿ ಬಳಗಕ್ಕೆ ಹೂಮಳೆಗೆರೆದು ಸ್ವಾಗತಿಸಿದ ಗ್ರಾಮಸ್ಥರು
Published : 2 ಅಕ್ಟೋಬರ್ 2024, 16:05 IST
Last Updated : 2 ಅಕ್ಟೋಬರ್ 2024, 16:05 IST
ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲಾಕೇಂದ್ರದಿಂದ ಪಾದಯಾತ್ರೆ ಮೂಲಕ ತಮ್ಮೂರಿಗೆ ಬಂದಿದ್ದ ಗಾಂಧಿ ಬಳಗದ ಸದಸ್ಯರಿಗೆ ಹೂಮಳೆಯ ಸ್ವಾಗತ, ಮೆರವಣಿಗೆಯಿಂದ ಗ್ರಾಮದ ಓಣಿಓಣಿಗಳಲ್ಲಿ ಸುತ್ತಾಡಿ ಬಾಪೂಜಿ ಕುರಿತು ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳಿಗೆ ಮೆಚ್ಚುಗೆ, ಗಾಂಧೀಜಿ ವಿಚಾರಧಾರೆಗಳ ಮೆಲುಕು.      

ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಇಲ್ಲಿನ ಶಿಕ್ಷಕರ ಕಲಾ ಸಂಘ ಹಾಗೂ ಗಾಂಧಿ ಬಳಗ ಬುಧವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ತಾಲ್ಲೂಕಿನ ಕಾಮನೂರು ಗ್ರಾಮದಲ್ಲಿ ಕಂಡುಬಂದ ಚಿತ್ರಣವಿದು. ಇಲ್ಲಿನ ಅಶೋಕ ವೃತ್ತದಿಂದ ಶ್ವೇತವಸ್ತ್ರಧಾರಿಗಳಾಗಿ ಸಾಗಿದ ನೂರಾರು ಜನ 16 ಕಿ.ಮೀ. ಪಾದಯಾತ್ರೆಯ ಬಳಿಕ ಕಾಮನೂರು ತಲುಪಿದರು. ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಪಾದಯಾತ್ರಿಗಳಿಗೆ ನೂಲಿನ ಹಾರ ಹಾಕಿ ಹೂಮಳೆಗೆರೆದರು.

ಕಾಮನೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗ್ರಾಮದಲ್ಲಿ ನಡೆದ ಮೆರವಣಿಗೆಯುದ್ದಕ್ಕೂ ಜೊತೆಗೆ ಸಾಗಿದರು. ಬಳಿಕ ಗ್ರಾಮದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ಗಾಂಧಿ ಬಳಗದ ಮುಖ್ಯಸ್ಥ ಬಸವರಾಜ ಸವಡಿ ಮಾತನಾಡಿ ‘ಗಾಂಧೀಜಿ ಅವರದ್ದು ಸರಳತೆಯ ಬದುಕು. ನಿಮ್ಮ ಮನಸ್ಸು ಗಟ್ಟಿ ಮಾಡಿಕೊಳ್ಳದಿದ್ದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅವರು ಜನರ ಸಬಲೀಕರಣಕ್ಕೆ ಮುಂದಾದರು. ಚಟಗಳು ಕೌಟುಂಬಿಕ ನೆಮ್ಮದಿ ಹಾಳು ಮಾಡುತ್ತವೆ. ಗಾಂಧೀಜಿ ಬದುಕಿನಲ್ಲಿ ರೂಢಿಸಿಕೊಂಡಿದ್ದ ಒಳ್ಳೆಯ ವಿಚಾರಗಳನ್ನು ಕಾಮನೂರಿನ ಜನ ಜೀವಂತವಾಗಿ ಇಟ್ಟಿದ್ದಾರೆ‘ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಭುರಾಜ ನಾಯಕ ‘ಗಾಂಧಿ ಮತ್ತು ಸುಸ್ಥಿರ ಬದುಕು’ ಕುರಿತ ಚಿಂತನ ಸಭೆಯಲ್ಲಿ ಮಾತನಾಡಿ ‘ಗಾಂಧೀಜಿ ಪ್ರಕಾರ ಎಲ್ಲ ಆಯಾಮಗಳಲ್ಲಿ ಬದುಕು ಕಟ್ಟಿಕೊಳ್ಳಬೇಕು. ನಿಸರ್ಗ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ದುರಾಸೆ ಹಿಂದೆ ಹೋಗಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಕಡೆಯೂ ಗಾಳಿ, ನೀರು ಅಶುದ್ಧವಾಗಿದೆ. ಆದರೆ ಕಾಮನೂರಿನಲ್ಲಿ ಗಾಂಧಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಾಗಿದೆ. ಸುಸ್ಥಿರ ಹಾಗೂ ಸಹಜ ಬದುಕು ರೂಢಿಗತದಲ್ಲಿದೆ’ ಎಂದು ಹೇಳಿದರು.

ಫಕೀರಪ್ಪ ಜಂತ್ಲಿ, ಹನುಮಪ್ಪ ಐರಾಣಿ, ಮೈಲಾರಪ್ಪ ಐರಾಣಿ, ಗುಡದಪ್ಪ ಯಮನಪ್ಪ, ಸಣ್ಣನಿಂಗಪ್ಪ ಐರಾಣಿ, ದೇವಪ್ಪ ಮರಿಯಪ್ಪ, ಬಸಪ್ಪ ವಕ್ಕಲಕುಂಟಿ, ಮಲ್ಲಪ್ಪ ಯಲ್ಲಪ್ಪ, ಹನುಮೇಶ ಕುಂಭಾರ, ದ್ಯಾಮಣ್ಣ, ಕುಬೇರಪ್ಪ ತುಬಾಕಿ, ಮಾರುತಿ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಉಪಾಧ್ಯಕ್ಷೆ ಪಾರಮ್ಮ ಭೋವಿ, ಸಿದ್ದಮ್ಮ ಬಂಗಾರಿ, ಭೀಮವ್ವ ತಾವರಗೇರಾ, ಬಾಳಪ್ಪ ಬೂದಗುಂಪಿ, ಕೊಪ್ಪಳ ಬಿಇಒ ಶಂಕರಪ್ಪ ಟಿ.ಎಸ್‌., ಗಾಂಧಿ ಬಳಗದ ರಾಮಣ್ಣ ಶ್ಯಾವಿ, ಆನಂದತೀರ್ಥ ಪ್ಯಾಟಿ, ಪ್ರಾಣೇಶ ಪೂಜಾರ, ಸಿದ್ಧಲಿಂಗಪ್ಪ ಕೊಟ್ನೇಕಲ್‌, ಶಿವಪ್ಪ ಜೋಗಿನ, ನಾಗರಾಜ ಡೊಳ್ಳಿನ ಇದ್ದರು.

ಕಾಮನೂರಿನಲ್ಲಿ ನಡೆದ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ಗಾಂಧಿ ಬಳಗದ ಸದಸ್ಯರು
ಕಾಮನೂರಿನಲ್ಲಿ ನಡೆದ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ಗಾಂಧಿ ಬಳಗದ ಸದಸ್ಯರು
ಮಹಾತ್ಮ ಗಾಂಧೀಜಿ ಅವರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಂಡಿರುವ ಕಾಮನೂರು ಗ್ರಾಮಸ್ಥರು ಅದೇ ಹಾದಿಯಲ್ಲಿ ಮುನ್ನಡೆಯಬೇಕು. ಅವರಿಗೆ ನಮ್ಮಿಂದ ಎಲ್ಲ ಸಹಕಾರ ನೀಡಲಾಗುವುದು.
–ನಾಗರಾಜ ಆರ್‌. ಜುಮ್ಮಣ್ಣನವರ್‌ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ
ಗಾಂಧಿ ಬಳಗ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಮಹಾತ್ಮ ಗಾಂಧಿ ಜಯಂತಿಯನ್ನು ಪಾದಯಾತ್ರೆಯ ಮೂಲಕ ವಿಭಿನ್ನವಾಗಿ ಆಚರಣೆ ಮಾಡುತ್ತಿದೆ.
–ಸಂಗಣ್ಣ ಕರಡಿ ಮಾಜಿ ಸಂಸದ

ಸಂಸದರ ಆದರ್ಶ ಗ್ರಾಮವಾಗಿ ಕಾಮನೂರು ಆಯ್ಕೆ

ಕಾಮನೂರಿನಲ್ಲಿ ನಡೆದ ಚಿಂತನೆ ಸಭೆ ವೇಳೆ ದೂರವಾಣಿ ಮೂಲಕ ಮಾತನಾಡಿದ ಸಂಸದ ರಾಜಶೇಖರ ಹಿಟ್ನಾಳ ’ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಳವಡಿಕೊಂಡ ಕಾಮನೂರು ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಘೋಷಿಸಿದರು.

‘ಇಂಥ ಮಾದರಿಯ ಊರು ಪ್ರಸ್ತುತ ದಿನಮಾನಕ್ಕೆ ಅಗತ್ಯವಾಗಿದ್ದು ಈ ಗ್ರಾಮವನ್ನು ದತ್ತು ಸ್ವೀಕರಿಸಲಾಗಿದೆ. ಸರ್ಕಾರದ ವತಿಯಿಂದಲೇ ಸಮಗ್ರ ಅಭಿವೃದ್ಧಿ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT