ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೈರು ಹಾಜರಾದ ಮಕ್ಕಳ ಹೆಸರಲ್ಲಿ ಬಿಸಿಯೂಟದ ಖರ್ಚು: ಅಕ್ರಮಕ್ಕೆ ಶಿಕ್ಷಕರ ಕುಮ್ಮಕ್ಕು

Published 1 ಜುಲೈ 2024, 5:20 IST
Last Updated 1 ಜುಲೈ 2024, 5:20 IST
ಅಕ್ಷರ ಗಾತ್ರ

ಕುಷ್ಟಗಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಮಕ್ಕಳು ವಸತಿ ಸಹಿತ ಅನಧಿಕೃತ ಕೋಚಿಂಗ್‌ ಕೇಂದ್ರಗಳಲ್ಲಿ ಕಂಡುಬರುತ್ತಿರುವುದು ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಮಕ್ಕಳು ಸರ್ಕಾರಿ ಶಾಲೆಗೆ ನಿರಂತರವಾಗಿ ಗೈರು ಹಾಜರಾದರೂ ಶಿಕ್ಷಕರು ನಿತ್ಯ ಹಾಜರಿ ಹಾಕುತ್ತಾರೆ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಕೋಚಿಂಗ್ ಕೇಂದ್ರಗಳು ಒಂದೆಡೆಯಾದರೆ ಅಕ್ರಮಕ್ಕೆ ಶಿಕ್ಷಣ ಇಲಾಖೆಯಿಂದಲೇ ಕುಮ್ಮಕ್ಕು ದೊರೆತಿರುವುದು ಇನ್ನೊಂದೆಡೆ.

ಪಟ್ಟಣದ 12 ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ವಸತಿ ಸಹಿತ ಕೋಚಿಂಗ್ ಕೇಂದ್ರಗಳಲ್ಲಿ 5ನೇ ತರಗತಿ ಮಕ್ಕಳು ಪ್ರವೇಶ ಪಡೆದಿರುವುದು ಗೊತ್ತಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದಿಲ್ಲ ಎಂಬ ನೆಪದಲ್ಲಿ ಪಾಲಕರು ನಿಯಮಬಾಹಿರವಾದರೂ ಇಂಥ ಖಾಸಗಿ ಕೋಚಿಂಗ್ ಕೇಂದ್ರಗಳ ಮೊರೆ ಹೋಗಿದ್ದು ₹40-50 ಸಾವಿರ ಶುಲ್ಕ ನೀಡಿ ಸೇರಿಸುತ್ತಿರುವುದು ಸಾಮಾನ್ಯವಾಗಿದೆ.

ಮಕ್ಕಳು ದೈಹಿಕವಾಗಿ ಕೋಚಿಂಗ್ ಕೇಂದ್ರಗಳಲ್ಲಿದ್ದರೂ ಸರ್ಕಾರಿ ಶಾಲೆಗಳ ಶಿಕ್ಷಕರು ಈ ಮಕ್ಕಳ ಹೆಸರಿನಲ್ಲಿಯೂ ಬಿಸಿಯೂಟ ಇತರೆ ಖರ್ಚು ತೋರಿಸುವ ಮೂಲಕ ಇಲಾಖೆಯ ಕಣ್ಣಿಗೆ ಮಣ್ಣೆರಚುತ್ತಿರುವುದು ಶಿಕ್ಷಣಾಧಿಕಾರಿಗಳಿಗೆ ತಿಳಿಯದ ವಿಷಯವೇನಲ್ಲ. ಆದರೆ ಎಲ್ಲವೂ ಒಳ ಒಪ್ಪಂದದಿಂದಲೇ ನಡೆಯುತ್ತಿದೆ ಎಂಬುದು ಹೆಸರು ಹೇಳಲು ಇಚ್ಛಿಸದ ಸಾರ್ವಜನಿಕರ ಆರೋಪ.

ಈಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿದ್ದು ಶಿಕ್ಷಣಾಧಿಕಾರಿ ವಿರುದ್ಧವೇ ಸದಸ್ಯರು ಭ್ರಷ್ಟಾಚಾರದ ಬಗ್ಗೆ ನೇರವಾಗಿಯೇ ಆರೋಪಿಸಿದ್ದರು.

ಶೆಡ್‌ಗಳಲ್ಲಿ ವಸತಿ: ಕೋಚಿಂಗ್‌ ಕೇಂದ್ರಗಳು ಬಾಡಿಗೆ ಮನೆ, ತಗಡಿನ ಶೆಡ್‌ಗಳಲ್ಲಿ ನಡೆಯುತ್ತಿದ್ದು ಕೆಲವು ಕಡೆ ಇಕ್ಕಟ್ಟಿನ ಜಾಗದಲ್ಲಿ ಮಕ್ಕಳನ್ನು ಕುರಿಗಳಂತೆ ಕೂಡಿ ಹಾಕಿದ್ದು ಸುದ್ದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಮೂಲಸೌಲಭ್ಯಗಳೇ ಇಲ್ಲದ ಕೆಲವೆಡೆ ಮಕ್ಕಳಿಗೆ ಬಹಿರ್ದೆಸಗೆ ಬಯಲೇ ಆಸರೆ. ಕೇಂದ್ರವೊಂದರಲ್ಲಿ ಬಾಲಕಿಯರನ್ನು ಅಡುಗೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದುದು ಕಂಡುಬಂತು. ಕೊಪ್ಪಳ ರಸ್ತೆ ಪಕ್ಕದ ಕೇಂದ್ರದಲ್ಲಿ 5ನೇ ತರಗತಿ ಬಾಲಕಿಯರನ್ನು ಅಡುಗೆ ಕೆಲಸಕ್ಕೆ ಬಳಸಿಕೊಂಡಿದ್ದು ಕಂಡುಬಂದಿತು.

ಕೋಚಿಂಗ್ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳು ಕುಷ್ಟಗಿ, ಯಲಬುರ್ಗಾ ಅಷ್ಟೇ ಅಲ್ಲ ಸುತ್ತಲಿನ ಅನೇಕ ಜಿಲ್ಲೆಗಳಿಗೆ ಸೇರಿದವರೂ ಇರುವುದು ತಿಳಿದಿದೆ. ಹಾಸ್ಟೆಲ್‌ಗೆ ಅನುಮತಿ ಇಲ್ಲದಿದ್ದರೂ ಎಲ್ಲ ಕಡೆ ರಾಜಾರೋಷವಾಗಿ ಅನಧಿಕೃತವಾಗಿ ಹಾಸ್ಟೆಲ್‌ ನಡೆಸಲಾಗುತ್ತಿದೆ. ಅಲ್ಲದೆ ಸುದ್ದಿಗಾರರು ಭೇಟಿ ನೀಡುವುದು ಗೊತ್ತಾಗುತ್ತಿದ್ದಂತೆ ಗಜೇಂದ್ರಗಡ ರಸ್ತೆಯಲ್ಲಿರುವ ಕೋಚಿಂಗ್ ಕೇಂದ್ರವೊಂದರ ಕೊಠಡಿಗಳಲ್ಲಿ ಮಕ್ಕಳನ್ನು ಒಳಗೆ ಕೂಡಿಹಾಕಿ ಹೊರ ಬಾಗಿಲಿಗೆ ಕೀಲಿ ಹಾಕಲಾಗಿತ್ತು ಎಂಬುದು ನಂತರ ತಿಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT