ಶುಕ್ರವಾರ, ಮೇ 27, 2022
21 °C

ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪ್ರವಾದಿ ಮುಹಮ್ಮದ್‌ ಪೈಗಂಬರರ ಜನ್ಮದಿನ ಪ್ರಯುಕ್ತ ಈದ್‌–ಮಿಲಾದ್‌ ಹಬ್ಬವನ್ನು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸ ಲಾಯಿತು. ವಿವಿಧ ಮಸೀದಿ ಮತ್ತು ಸಂಘಟನೆಗಳಿಂದ ಬೃಹತ್‌ ಮೆರವಣಿಗೆ ನಡೆಸಿ ಪ್ರವಾದಿಗಳ ಸ್ಮರಣೆ ನಡೆಯಿತು.

ಕೋವಿಡ್‌ನಿಂದಾಗಿ ಹೋದ ವರ್ಷ ಮಸೀದಿಗಳಲ್ಲಿ ನಮಾಜ್‌ ಸಲ್ಲಿಸಲು ಅವಕಾಶ ನಿರಾಕರಿಸಲಾಗಿತ್ತು. ಮೆರವಣಿಗೆಯೂ ನಡೆದಿರಲಿಲ್ಲ. ಆದರೆ, ಈ ವರ್ಷ ಸೀಮಿತ ಸಂಖ್ಯೆಯ ಜನರೊಂದಿಗೆ ಪ್ರಾರ್ಥನೆ, ಮೆರವಣಿಗೆಗೆ ಅವಕಾಶ ಕೊಡಲಾಗಿತ್ತು. 2 ವರ್ಷದ ನಂತರ ಈದ್‌ ಸಂಭ್ರಮ ತಂದಿತ್ತು.

ನಗರದ ವಿವಿಧ ಮಸೀದಿಗಳಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನೆರವೇರಿಸಿದ ಮುಸ್ಲಿಮರು, ಬಳಿಕ ಹೊರಬಂದು ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಕೋರಿದರು. ಬಾವುಟ ಪ್ರದರ್ಶಿಸುತ್ತ, ಕುರಾನ್‌ನ ವಾಣಿ ಪಠಿಸುತ್ತ ನಗರದ ಪ್ರಮುಖ ಮಾರ್ಗಗಳಲ್ಲಿ ಹೆಜ್ಜೆ ಹಾಕಿದರು.

ಮೆರವಣಿಗೆ ಹಾದು ಹೋದ ಮಾರ್ಗಗಳಲ್ಲಿ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಗೊಂಡಿತು. ಮುನ್ನೆಚ್ಚರಿಕೆ ಕ್ರಮ ವಾಗಿ ಮಾರುಕಟ್ಟೆಯಲ್ಲಿರುವ ಬಡೇ ಮಸೀದಿ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ನಗರದ ಎಲ್ಲಾ ದರ್ಗಾ, ಮಸೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಬಂಟಿಂಗ್ಸ್ ಹಾಕಲಾಗಿತ್ತು.

ಮೆಕ್ಕಾ, ಮದೀನ ಪ್ರತಿಕೃತಿ, ಹಸಿರು ಧ್ವಜ, ಟೊಪ್ಪಿಗೆ ಗಮನ ಸೆಳೆದವು. ಕಳೆದ ಎರಡು ವರ್ಷಗಳಿಂದ ಯಾವುದೇ ಉತ್ಸವ, ಮೆರವಣಿಗೆ ಇಲ್ಲದೆ ಸರಳವಾಗಿ ಆಚರಣೆ ಮಾಡಲಾಗಿತ್ತು. ಈದ್ ಹಬ್ಬ ಮುಸ್ಲಿಂರು ಸಂಭ್ರಮಕ್ಕೆ ಕಾರಣವಾಯಿತು. ನೂರಾರು ಸಂಖ್ಯೆಯಲ್ಲಿ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೃತ್ಯ ಮಾಡಿ ಗಮನ ಸೆಳೆದರು.

ಹಬ್ಬದ ನಿಮಿತ್ತ ಫತೇಶಾವಲಿ ದರ್ಗಾ ಸೇರಿದಂತೆ ವಿವಿಧ ಆರಾಧನಾ ಸ್ಥಳಗಳಲ್ಲಿ ನೂರಾರು ಜನರ ಸೇರಿ ಹಬ್ಬ ಆಚರಿಸಿದರು. ಅಟೊ, ಬೈಕ್‌ಗಳಲ್ಲಿ ಧ್ವಜ ಹಿಡಿದು ಯುವಕರು ನಗರದೆಲ್ಲೆಡೆ ಸಂಚರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಯೂಸೂಫೀಯಾ ಮಸೀದಿಯಲ್ಲಿ ವಿಶೇಷ ಧಾರ್ಮಿಕ ಪ್ರವಚನ ನಡೆಯಿತು. ಮುಸ್ಲಿಂರು ಹೆಚ್ಚಿರುವ ಬಡಾವಣೆಗಳನ್ನು ಬಣ್ಣ, ಬಣ್ಣದ ಪರಪರಿಗಳಿಂದ ಅಲಂಕರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಕೆಲವು ಬಡಾವಣೆ ಮಸೀದಿಗಳ ಪ್ರಮುಖರು ಕೋವಿಡ್‌ ಲಸಿಕೆ ಹಾಕಿಸುವುದು, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ವಿವಿಧ ಕಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಮನ ಸೆಳೆದರು. ಸಂಸದ ಸಂಗಣ್ಣ ಕರಡಿ ಹೊಸಳ್ಳಿಯಲ್ಲಿ ಈದ್‌ ಮಿಲಾದ್ ಸಂಭ್ರಮದಲ್ಲಿ ಭಾಗಿಯಾಗಿ ಶುಭಸಂದೇಶ ಕೋರಿದರು.

240 ಜನರಿಗೆ ಕೋವಿಡ್ ಲಸಿಕೆ

ಕೊಪ್ಪಳ: ಸಮೀಪದ ಭಾಗ್ಯನಗರದ ಮುಸ್ಲಿಂ ಜಾಮಿಯಾ ಮಸೀದ್ ಪಂಚ ಕಮಿಟಿಯ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಜಾಮೀಯಾ ಮಸ್ಜಿದ್ ಆವರಣದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗ್ಯನಗರದ ಸಾರ್ವಜನಿಕರು ಭಾಗವಹಿಸಿ 240 ಜನರು ಲಸಿಕೆ ಪಡೆದುಕೊಂಡರು. ಕಾರ್ಯಕ್ರಮದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಪಂಚ ಕಮಿಟಿಯಿಂದ ಗೌರವಿಸಲಾಯಿತು.

ಪಂಚಕಮಿಟಿ ಅಧ್ಯಕ್ಷ ಇಬ್ರಾಹಿಂಸಾಬ್ ಬಿಸರಳ್ಳಿ ಮಾತನಾಡಿ, ಪವಿತ್ರ ಹಬ್ಬದ ದಿನದಂದು ಎಲ್ಲರೂ ಲಸಿಕೆ ಹಾಕಿಸಿಕೊಂಡು ಆರೋಗ್ಯವಂತರಾಗಿ ಬದುಕಬೇಕು. ಧರ್ಮದ ತತ್ವಗಳ ಆಚರಣೆ ಜೊತೆಗೆ ಸಮಾಜದಲ್ಲಿ ಸಹೋದರತೆ, ಭಾತೃತ್ವವನ್ನು ಹೊಂದಬೇಕು ಎಂದು ಮನವಿ ಮಾಡಿದರು.

ಡಾ.ಪ್ರಶಾಂತ ತಟ್ಟಿ ಹಾಗೂ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಕಾರ್ಯಕ್ರಮ ನಡೆಸಿಕೊಟ್ಟರು.

ಪಟ್ಟಣ ಪಂಚಾಯಿತಿ ಸದಸ್ಯ ಹೊನ್ನೂರಸಾಬ್ ಬೈರಾಪುರ, ಉಪಾಧ್ಯಕ್ಷ ಮೌಲಾಹುಸೇನ ಹಣಗಿ, ಮೆಹಬೂಬಸಾಬ ಬಳಿಗಾರ, ರಶೀದ್‌ಸಾಬ್‌, ಹಾಜಿ ಕುತ್ಬುದ್ದೀನಸಾಬ್, ಬಾಬಾ ಪಟೇಲ್, ಶರೀಫಸಾಬ ಪಿಂಜಾರ, ಮೆಹಬೂಬ ಹಣಗಿ, ಮರ್ದಾನಸಾಬ ಹಿರೆಮಸೂತಿ, ನೂರಬಾಷಾ , ಕಬೀರಸಾಬ ಬೈರಾಪೂರ, ಹಾಗೂ ನೌಜವಾನ್ ಕಮಿಟಿಯ ಅಧ್ಯಕ್ಷ ಆಸೀಫ ಬಳಿಗಾರ, ಉಪಾಧ್ಯಕ್ಷ ಮೆಹಬೂಬಸಾಬ ಕೊತ್ವಾಲ, ಕಾರ್ಯದರ್ಶಿ ಶಾಕೀರ್ ನದಾಪ, ಮಹ್ಮದ್ ರಫಿ ಬೈರಾಪೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.