ಶನಿವಾರ, ಅಕ್ಟೋಬರ್ 31, 2020
24 °C
ಅಕ್ಕಿ, ಗೋಧಿಗೆ ಬರವಿಲ್ಲ: ತೊಗರಿ ಬೇಳೆ, ಅಡುಗೆ ಎಣ್ಣೆ ಕೊಟ್ಟಿಲ್ಲ

ಕೊಪ್ಪಳ: ಪಡಿತರಕ್ಕೆ ನಿಲ್ಲದ ಪರದಾಟ: ಬಾರದ ಹೊಸ ಚೀಟಿ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ಪಡಿತರಕ್ಕಾಗಿ ಜನರು ಪರದಾಡುವಂತೆ ಆಗಿದೆ. 10 ಸಾವಿರ ಜನ ಅರ್ಹರಿದ್ದರೂ ತಾಂತ್ರಿಕ ತೊಂದರೆಯಿಂದ ಪಡಿತರ ದೊರೆಯದೇ ಸಂಕಷ್ಟವನ್ನು ಅನುಭವಿಸುವಂತೆ ಆಗಿದೆ.

ಪಡಿತರ ದೊರೆಯದೆ ತೊಂದರೆಗೆ ಒಳಗಾದ ಕುಟುಂಬಗಳಿಗೆ ಕೆಲ ದಾನಿಗಳು ದಿನಸಿ ಸಾಮಗ್ರಿ ವಿತರಿಸಿರೆ, ಯಾರಿಗೆ ಕಿಟ್‌ ನೀಡಬೇಕು ಎಂಬ ಗೊಂದಲದಲ್ಲಿಯೇ ಆಹಾರ ಇಲಾಖೆಯು ಎರಡು, ಮೂರು ತಿಂಗಳನ್ನು ಕಳೆದುಬಿಟ್ಟಿತು. ಪಡಿತರ ಚೀಟಿ ಮಾಡಿಸಿಕೊಳ್ಳುವಲ್ಲಿ ಗೊಂದಲ ಹಾಗೆ ಮುಂದುವರಿದಿದೆ. ಇದರಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದ್ದು, ಸುಳ್ಳಲ್ಲ.

ಜಿಲ್ಲೆಯಲ್ಲಿ ಇರುವ 446 ನ್ಯಾಯಬೆಲೆ ಅಂಗಡಿಗಳ ಮೂಲಕ 3,45,092 ಪೈಕಿ 2,65,586 ಚೀಟಿದಾರರು ಪಡಿತರ ಪಡೆದಿದ್ದಾರೆ. ಶೇ 77.14ರಷ್ಟು ಜನರಿಗೆ ಪಡಿತರ ಸಿಕ್ಕಿದೆ. ಗಂಗಾವತಿಯಲ್ಲಿ ಹೆಚ್ಚು ಪಡಿತರ ಚೀಟಿದಾರರು (1,20,862) ಇದ್ದರೆ, ಯಲಬುರ್ಗಾ ತಾಲ್ಲೂಕಿನಲ್ಲಿ ಕಡಿಮೆ (64,848) ಇದ್ದಾರೆ.

ಸರ್ಕಾರಿ ಉದ್ಯೋಗ ಸೇರಿದಂತೆ ಇತರೆ ಅನರ್ಹರು ಕೂಡಾ ಪಡಿತರ ಚೀಟಿ ಮಾಡಿಸಿಕೊಂಡಿದ್ದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪದೇ ಪದೇ ಪ್ರಕಟಣೆ ಹೊರಡಿಸಿದ ನಂತರ 1113 ಜನರು ಚೀಟಿಯನ್ನು ಮರಳಿ ಇಲಾಖೆಗೆ ಒಪ್ಪಿಸಿದ್ದಾರೆ.

ಅಕ್ಕಿ, ಗೋಧಿಗೆ ಬರವಿಲ್ಲ: ಮಾರ್ಚ್‌ 22ರ ನಂತರ ಲಾಕ್‌ಡೌನ್‌ ಆದ ಅವಧಿಯಲ್ಲಿ ನಂತರ ಎರಡು ತಿಂಗಳು ಬಿಟ್ಟು ಅಕ್ಕಿ, ಗೋಧಿ, ತೊಗರಿ ಬೇಳೆ, ಚಹಾಪುಡಿ, ಸಕ್ಕರೆಯನ್ನು ನೀಡಿದ್ದಾರೆ. ಆದರೆ, ನಂತರದ ಅವಧಿಯಲ್ಲಿ ಅಕ್ಕಿ, ಗೋಧಿ ಮಾತ್ರ ನೀಡಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಕೇಂದ್ರ ಸರ್ಕಾರದ ಸಮರ್ಪಕವಾಗಿ ಪಡಿತರ ವಿತರಿಸುವಂತೆ ಜನರು ಒತ್ತಾಯಿಸಿದ್ದಾರೆ. ಹೋರಾಟಗಳೂ ನಡೆದಿವೆ. ಆದರೆ, ಹೆಚ್ಚಿನ ಪ್ರಯೋಜನಗಳಾಗಿಲ್ಲ.

ಅಲ್ಲದೇ, 250 ಅಲೆಮಾರಿ ಕುಟುಂಬಗಳಿಗೆ ಪಡಿತರ ಚೀಟಿಯೇ ಇದ್ದಿಲ್ಲ. ಪಡಿತರವೂ ಇಲ್ಲದೆ, ಅಂಗಡಿಗಳು ಇಲ್ಲದೆ ತೀವ್ರ ಪರದಾಡಿದ್ದರು. ಇವರಿಗೆ ಕೆಲ ಸಾಮಾಜಿಕ ಹೋರಾಟಗಾರರು ಪ್ರತಿದಿನ ಊಟ, ದಿನಸಿ ನೀಡಿದ್ದಾರೆ. ಇದನ್ನು ಕಂಡು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿ ವ್ಯಕ್ತಿಗೆ 25 ಕೆ.ಜಿಯಂತೆ ಅಕ್ಕಿಯನ್ನು ನೀಡಿತ್ತು. 

ಆದರೆ ಪಡಿತರದಾರರ ಬೇಡಿಕೆಯಂತೆ ಅಕ್ಕಿ, ಗೋಧಿ ಜೊತೆಗೆ ಸಕ್ಕರೆ, ಬೆಲ್ಲ, ಚಹಾಪುಡಿ, ತೊಗರಿ ಬೇಳೆಯನ್ನು ಕಡಿಮೆ ದರಕ್ಕೆ ನೀಡಬೇಕು ಎಂಬ ಬೇಡಿಕೆಗೆ ಇಲಾಖೆ ಸ್ಪಂದಿಸಿಲ್ಲ. ಕೆಲವು ಕಡೆ ಸಂಗ್ರಹ ಇದ್ದರೂ ಹೆಚ್ಚಿನ ಹಣ ನೀಡಿ ಪಡಿತದಾರರು ಖರೀದಿಸಿದ್ದಾರೆ.

ಕಾಳಸಂತೆಯೇ ಕಂಟಕ: ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿದ ದೊಡ್ಡ ಜಾಲವನ್ನೇ ಬೇಧಿಸಲಾಗಿದೆ. ₹30 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಬಡವರಿಗೆ ನೀಡುವ ಅಕ್ಕಿಯನ್ನು ಅವರಿಗೆ ನೀಡದೇ 'ಸ್ಟಾಕ್‌ ಇಲ್ಲ ಮುಂದಿನ ತಿಂಗಳು ನೀಡುತ್ತೇವೆ' ಎಂಬ ಸಬೂಬು ಹೇಳಿ ಖಾಸಗಿಯವರಿಗೆ ಮಾರಾಟ ಮಾಡಿಕೊಂಡ ಪ್ರಕರಣ ಕೂಡಾ ಇದೆ.

ಅಲ್ಲದೆ ಪಡಿತರ ಅಕ್ಕಿಯನ್ನು ಫಾಲಿಶ್‌ ಮಾಡಿ ಬ್ರ್ಯಾಂಡ್‌ ಹೆಸರಿನಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುವ ದಂಧೆಯೂ ಗಂಗಾವತಿಯಲ್ಲಿ ಇದೆ. ಈ ಕುರಿತು ಕೂಡಾ ಆಹಾರ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಬಡವರ ಅಕ್ಕಿಯ ಮೇಲೆ ಕಣ್ಣಿದ್ದು, ನ್ಯಾಯಬೆಲೆ ಅಂಗಡಿ ತೆರೆಯಲು ಪರವಾನಗಿಗೆ ಭಾರಿ ಬೆಲೆ ಇದೆ.

ಪಡಿತರಕ್ಕೂ ತಾಂತ್ರಿಕ ಸಮಸ್ಯೆ: ಬಡವರು ಪಡಿತರ ಮತ್ತು ಪಡಿತರ ಚೀಟಿ ಪಡೆಯಲು ನೂರೆಂಟು ವಿಘ್ನ ಎದುರಾಗಿದೆ. ಲಾಕ್‌ಡೌನ್‌ ನಂತರ ಹೊಸ ಪಡಿತರ ಚೀಟಿಯನ್ನು ಇಲ್ಲಿಯವರೆಗೆ ನೀಡಿಲ್ಲ. ಲಾಕ್‌ಡೌನ್‌ ಬಂದ್‌, ತಾಂತ್ರಿಕ ಸಮಸ್ಯೆ ಮುಂತಾದ ಕಾರಣಗಳಿಂದ ಹೊಸ ಪಡಿತರ ಚೀಟಿ ಇನ್ನೂ ಬಂದಿಲ್ಲ.

ಪಡಿತರ ಪಡೆಯಲು ಕೆಲವು ಗ್ರಾಮಗಳಲ್ಲಿ ನಿತ್ಯ ಅಲೆಯಬೇಕಾಗಿದೆ. ವಿದ್ಯುತ್, ಇಂಟರ್‌ನೆಟ್ ಸಮಸ್ಯೆಯಿಂದ ಬೆರಳು ಗುರುತು ನೀಡಲು ಆಗುತ್ತಿಲ್ಲ. ಅಲ್ಲದೆ ಕೆಲವು ಕಡೆ ಸಾಫ್ಟ್‌ವೇರ್‌ ಹಾಳಾಗಿದ್ದು, ಬೆರಳು ಗುರುತು ನೀಡಿದರೂ ಚೀಟಿದಾರರನ್ನು ಖಚಿತಪಡಿಸದ ಪರಿಣಾಮ ಪಡಿತರ ದೊರೆಯುತ್ತಿಲ್ಲ. ಇದರಿಂದ ಬಡವರು, ಕೂಲಿಕಾರರಿಗೆ ಮತ್ತಷ್ಟು ಸಮಸ್ಯೆಯಾಗಿದೆ.

‘ಪಡಿತರ ಆಹಾರಧಾನ್ಯವನ್ನು ಪಡಿತರ ಚೀಟಿದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ರಮ ಮಾರಾಟ ಮಾಡುವವರ ಮತ್ತು ಅದನ್ನು ಖರೀದಿಸುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿಗೆ ಅರ್ಜಿ ಹಾಕಿದ ಬಡವರಿಗೆ ಮೊದಲ ಆದ್ಯತೆ ನೀಡುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಲಾಗಿದೆ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತನಗೌಡ ಗುಣಕಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು