ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ

Last Updated 2 ಏಪ್ರಿಲ್ 2020, 15:51 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಶಂಕೆಯಲ್ಲಿ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೆಹಲಿ ಮೂಲದ 8 ಮಂದಿಯನ್ನು ಗುರುವಾರ ರಾತ್ರಿ ನಗರದ ಇಟಿಸಿಎಂ ಆಸ್ಪತ್ರೆ ಬಳಿಯ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸಲು ಮುಂದಾದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್‌ ಕೇಂದ್ರದಲ್ಲಿನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಧರ್ಮ ಪ್ರಚಾರಕ್ಕಾಗಿ ಬಂಗಾರಪೇಟೆ ತಾಲ್ಲೂಕಿನ ಗೊಲ್ಲಹಳ್ಳಿಯ ಮಸೀದಿಗೆ ಬಂದು ತಂಗಿದ್ದರು. ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ (ಮಾರ್ಚ್‌ 31) ಇವರನ್ನು ಪತ್ತೆ ಮಾಡಿ ಜಿಲ್ಲಾ ಕೇಂದ್ರಕ್ಕೆ ಕರೆತಂದು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿ (ಕ್ವಾರಂಟೈನ್) ಇರಿಸಿದ್ದರು.

ಈ 8 ಮಂದಿಯನ್ನೂ ಇಟಿಸಿಎಂ ಆಸ್ಪತ್ರೆ ಮುಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ನಗರಸಭೆ ಸಿಬ್ಬಂದಿಯಿಂದ ರಾತ್ರಿ ಹಾಸ್ಟೆಲ್‌ ಸ್ವಚ್ಛ ಮಾಡಿಸಿದರು.

ಈ ಸುದ್ದಿ ತಿಳಿದ ಕುರುಬರಪೇಟೆ, ಗೌರಿಪೇಟೆ, ಕನಕನಪಾಳ್ಯ, ಕೋಟೆ, ಅಂಬೇಡ್ಕರ್‌ ನಗರ ಹಾಗೂ ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಹಾಸ್ಟೆಲ್‌ ಎದುರು ಜಮಾಯಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಿವಾಸಿಗಳನ್ನು ಹಾಸ್ಟೆಲ್‌ನಿಂದ ದೂರ ಕಳುಹಿಸಲು ಮುಂದಾದಾಗ ಪರಸ್ಪರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು.

‘ಕೊರೊನಾ ಸೋಂಕು ಶಂಕೆಯಿಂದ ಚಿಕಿತ್ಸೆ ಪಡೆಯುತ್ತಿರುವ 8 ಮಂದಿಯನ್ನು ಯಾವುದೇ ಕಾರಣಕ್ಕೂ ನಗರದೊಳಗೆ ಕ್ವಾರಂಟೈನ್‌ ಮಾಡಬಾರದು. ನಗರದ ಹೊರವಲಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಕಟ್ಟಡ ಸಾಕಷ್ಟು ವಿಶಾಲವಾಗಿದೆ. ಆ ಕಟ್ಟಡದಲ್ಲಿ ಹೆಚ್ಚಿನ ಕೊಠಡಿಗಳು ಖಾಲಿಯಿದ್ದು, 8 ಮಂದಿಯನ್ನು ಅಲ್ಲಿಗೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

ಅಧಿಕಾರಿಗಳು ರಾತ್ರೋರಾತ್ರಿ ಆ 8 ಮಂದಿಯನ್ನು ಹಾಸ್ಟೆಲ್‌ಗೆ ಕರೆತರಬಹುದೆಂದು ಆತಂಕಗೊಂಡಿರುವ ಸ್ಥಳೀಯರು ಪೊಲೀಸರ ಮನವೊಲಿಕೆ ಪ್ರಯತ್ನಕ್ಕೂ ಜಗ್ಗದೆ ಹಾಸ್ಟೆಲ್‌ ಬಳಿಯೇ ಕಾವಲು ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT