ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಕೊಪ್ಪಳ, ಭಾಗ್ಯನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಸಹಯೋಗ

ಗವಿಮಠದಿಂದ ಸಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪರಿಸರದ ಬಗ್ಗೆ ಅನನ್ಯ ಕಾಳಜಿ ಹೊಂದಿರುವ ಇಲ್ಲಿನ ಗವಿಮಠದ ಅನ್ನ, ಅಕ್ಷರ, ಅರಿವು ಎಂಬ ತ್ರಿವಿಧ ದಾಸೋಹದ ಜೊತೆಗೆ ಪರಿಸರ ದಾಸೋಹದ ಹೆಸರಿನಲ್ಲಿ ನಿತ್ಯ ಸಸಿ ವಿತರಣೆ ಕಾರ್ಯ ಮಾಡುವ ಮೂಲಕ ರಾಜ್ಯದ ಎಲ್ಲ ಮಠಗಳ ಸಾಲಿನಲ್ಲಿ ಮಂಚೂಣಿ ಮತ್ತು ಭಿನ್ನವಾಗಿ ನಿಂತು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಂದು ಪರಿಸರ ಸಂಬಂಧಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬರಗಾಲದ ಮತ್ತು ಹಿಂದುಳಿದ ಜಿಲ್ಲೆಯನ್ನು ಹಸರೀಕರಣ ಮಾಡುವ ಶ್ರೀಮಠದ ಸಂಕಲ್ಪವನ್ನು ಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರೇರಣಾದಾಯಕ ಆಸಕ್ತಿ ಮತ್ತು ಶ್ರದ್ಧೆಯಿಂದ ಮಠದ ಆವರಣದಲ್ಲಿ ಸಸ್ಯಕಾಶಿಯನ್ನೇ ನಿರ್ಮಾಣ ಮಾಡಿದ್ದಾರೆ.

ಅರಣ್ಯ ಇಲಾಖೆ ಮಾಡುವ ಕೆಲಸವನ್ನು ಮಠದ ವತಿಯಿಂದಲೇ ಮಾಡುತ್ತಾ ಬಂದಿದ್ದು, ಎಲ್ಲರಿಗೂ ಪ್ರೇರಣೆಯಾಗಿದೆ. ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ಸಸಿಗಳನ್ನು ಆಶೀರ್ವಾದದ ರೂಪದಲ್ಲಿ ನೀಡಿ ಭಕ್ತರು ಭಯಭಕ್ತಿಯಿಂದ ಸಸಿ ನೆಡುವಂತೆ ಮಾಡುವ ಕಾರ್ಯಕ್ಕೆ ಸ್ಪೂರ್ತಿ ಒದಗಿಸಿದ್ದಾರೆ.

ಶನಿವಾರ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಠದಲ್ಲಿ ಬೆಳೆಸಲಾದ ವಿವಿಧ ಔಷಧೀಯ, ಹಣ್ಣಿನ, ಬಹುಉಪಯೋಗಿ, ಅಲಂಕಾರಿಕ, ನೆರಳು ನೀಡುವ, ಅರಣ್ಯದ ಮರಮುಟ್ಟುಗಳ ಸಸಿಗಳನ್ನು ಜನರಿಗೆ ನೀಡುವ ಮೂಲಕ ಪರಿಸರ ಅಭಿಯಾನಕ್ಕೆ ಚಾಲನೆ
ನೀಡಲಾಯಿತು.

ತುಮಕೂರಿನ ಪಾವಗಡದ ವಿವೇಕಾನಂದ ಆಶ್ರಮದ ಜಪಾನಂದ ಸ್ವಾಮೀಜಿ ತಾಲ್ಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜನರಿಗೆ ಸಸಿ ವಿತರಣೆ ಮಾಡಿದರಲ್ಲದೆ, ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಸ್ವಾಮೀಜಿಗಳ ಪರಿಸರ ಬಗೆಗಿನ ಕಾಳಜಿಯನ್ನು ಶ್ಲಾಘಿಸಿದರು.

ನಂತರ ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ಕಸವಿಲೇವಾರಿ ವಾಹನಗಳಲ್ಲಿ ಸಸಿಗಳನ್ನು ಮನೆ, ಮನೆಗೆ ತೆಗೆದುಕೊಂಡು ಹೋಗಿ ವಿತರಿಸಲಾಯಿತು. ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದ್ದ ಈ ವಾಹನಗಳು ಇಂದು ಸಸಿಗಳನ್ನು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜನರಿಗೆ ನೀಡಿ ಪೌರಕಾರ್ಮಿಕರು ಗಮನ ಸೆಳೆದರು.

ಜನರು ಆಸಕ್ತಿಯಿಂದ ಸಸಿಗಳನ್ನು ಪಡೆದುಕೊಂಡರು. ಒಂದೇ ದಿನ 3 ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ನೀಡಲಾಯಿತು. ಹೆಚ್ಚಿನ ಸಸಿಗಳ ಅವಶ್ಯಕತೆ ಇರುವವರು ಶ್ರೀಮಠವನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಮನವಿ ಮಾಡಲಾಯಿತು.

ಗವಿಮಠದ ಅಭಿನವ  ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಗವಿಸಿದ್ಧಪ್ಪ ಕರಡಿ,  ನಗರಸಸಭೆ ಸದಸ್ಯರು, ಸಿಬ್ಬಂದಿ ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು