ಗುರುವಾರ , ಜುಲೈ 29, 2021
28 °C
ಕೈಗಾರಿಕಾ ವಸಾಹತು ಉದ್ಘಾಟನೆ ವೇಳೆ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿಕೆ

ಕೈಗಾರಿಕೆಗಳ ವಿಕೇಂದ್ರೀಕರಣಕ್ಕೆ ಆದ್ಯತೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೈಗಾರಿಕೆಗಳಿಗೆ ಸಂಬಂಧಿಸಿದ ಹೆಚ್ಚು ಉದ್ದಿಮೆಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ. ಇದರಿಂದಾಗಿ ಹೆಚ್ಚಿನ ಸಮಾವೇಶಗಳು ಅಲ್ಲಿಯೇ ನಡೆಯುತ್ತವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕೈಗಾರಿಕೆಗಳ ವಿಕೇಂದ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕೊಪ್ಪಳ ತಾಲ್ಲೂಕಿನ ಬಸಾಪೂರದ ಬಳಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಲಾಗಿರುವ ಕೊಪ್ಪಳ ಕೈಗಾರಿಕಾ ವಸಾಹತನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಉತ್ತರ ಕರ್ನಾಟಕ ಭಾಗಗಳಲ್ಲಿ ಉದ್ದಿಮೆಗಳು ಕಡಿಮೆ ಸಂಖ್ಯೆಯಲ್ಲಿದ್ದು, ಈ ಭಾಗದಲ್ಲಿ ಹೆಚ್ಚು-ಹೆಚ್ಚು ಉದ್ದಿಮೆಗಳನ್ನು ಸ್ಥಾಪಿಸಲು ಹೊಸ ಕೈಗಾರಿಕಾ ನೀತಿಯಿಂದ ಅನುಕೂಲವಾಗಲಿದೆ. ಈ ಭಾಗದಲ್ಲಿಯ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಫೆ.14 ರಂದು ‘ಇನ್ವೆಸ್ಟ್ ಕರ್ನಾಟಕ‘ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ದಿಮೆಗಳ ಅಭಿವೃದ್ಧಿಗಾಗಿ ಹೊಸ ಕೈಗಾರಿಕಾ ನೀತಿಯನ್ನು ಹಾಗೂ ಟೈರ್-2 ಮತ್ತು ಟೈರ್-3 ನಿಯಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳು ಇಲ್ಲದ ಜಿಲ್ಲೆಗಳು ಮತ್ತು ಹಿಂದುಳಿದ ತಾಲ್ಲೂಕುಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಬಹುದಾಗಿದೆ. 

ಕೊಪ್ಪಳದಲ್ಲಿ ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣವಿದ್ದು, ಬೆಳಗಾವಿಯ ಎಸ್‌ಇಝಡ್ ವಲಯದಲ್ಲಿ ಸಾವಿರಾರು ಜನರು ಉದ್ಯೋಗ ಮಾಡುತ್ತಿದ್ದಾರೆ. ಅವರು ಕೊಪ್ಪಳದಲ್ಲಿ ಟ್ವೈಸ್ ಕ್ಲಸ್ಟರ್ ಮಾಡಲು ಉತ್ಸಾಹ ತೋರಿದ್ದು, ಇದರಿಂದ ಈ ಭಾಗದ ಹಲವು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.

ಬಸಾಪುರದಲ್ಲಿ ಒಟ್ಟು 104.10 ಎಕರೆ ಭೂಮಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲಾಗಿದೆ. ಇಲ್ಲಿ 74 ಜನರಿಂದ ಅರ್ಜಿಗಳು ಬಂದಿದ್ದು, ಹೆಚ್ಚಿನ ಅರ್ಜಿಗಳು ಬರಬೇಕಿದೆ. ಕೊರೊನಾ ಭೀತಿಯಿಂದಾಗಿ ಕಡಿಮೆ ಅರ್ಜಿಗಳು ಬಂದ ಕಾರಣ ಇನ್ನೂ ಎರಡು ತಿಂಗಳ ಕಾಲ ಅರ್ಜಿಯ ದಿನಾಂಕವನ್ನು ವಿಸ್ತರಿಸಲು ಸೂಚಿಸಲಾಗಿದೆ. ಇದೇ ಜಾಗದಲ್ಲಿ 25 ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು ಪಡೆಯಬಹುದಾಗಿದ್ದು, ಕೈಗಾರಿಕೆ ಸ್ಥಾಪನೆ ಮಾಡಲು ಅವರಿಗೆ ಶೇ 90 ರಷ್ಟು ಮೀಸಲಾತಿ ಸೌಲಭ್ಯವಿದೆ. ಅವರು ಕೇವಲ ಶೇ 10 ರಷ್ಟು ಮಾತ್ರ ಪಾವತಿಸಿ ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು.

‘ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2,000 ಎಕರೆ ಜಮೀನು ಇದ್ದು, ಇಲ್ಲಿ ಹೈದರಾಬಾದ್‌ನ ಫಾರ್ಮಾಸ್ಯುಟಿಕಲ್‌ನ 14 ಕಂಪನಿಗಳು ಒಂದು ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಯಾವುದೇ ಉದ್ದಿಮೆದಾರರು ಸಂಪರ್ಕಿಸಿದ್ದಲ್ಲಿ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಲಹೆ ನೀಡುತ್ತಿರುತ್ತೇನೆ‘ ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಕೃಷಿ ಚಟುವಟಿಕೆಗಳ ಜೊತೆಗೆ ಉದ್ದಿಮೆಗಳನ್ನೂ ಸಹ ಬೆಳೆಸುವುದರಿಂದ ದೇಶಿಯ ಉತ್ಪನ್ನಗಳನ್ನು ರಫ್ತು ಮಾಡಲು ಸಹಕಾರಿಯಾಗುತ್ತದೆ. ಹಾಗಾಗಿಯೇ ನಮ್ಮ ಪ್ರಧಾನ ಮಂತ್ರಿಗಳು ₹ 20 ಲಕ್ಷ ಕೋಟಿ ಮೊತ್ತದ  'ಆತ್ಮನಿರ್ಭರ ಯೋಜನೆ' ಜಾರಿಗೆ ತಂದಿದ್ದಾರೆ. ಬಸಾಪುರ ಕೈಗಾರಿಕಾ ಪ್ರದೇಶದಲ್ಲಿ 104 ಎಕರೆ ಜಾಗವಿದ್ದು, ಇದು ಈ ಭಾಗದ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲಿ ಯಾವುದೇ ಕಚೇರಿ ಇಲ್ಲದ ಕಾರಣ ಈ ಭಾಗದ ಉದ್ದಿಮೆದಾರರು ಬಳ್ಳಾರಿ ಕಡೆಗೆ ಹೋಗುವಂತಾಗಿದೆ. ಆದ್ದರಿಂದ ಸ್ಥಳೀಯವಾಗಿ ಒಂದು ಕಚೇರಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

 ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ಭಾಗದಲ್ಲಿ ಕಬ್ಬಿಣ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವುದರಿಂದ ಇದಕ್ಕೆ 'ಸ್ಟೀಲ್ ಪಾರ್ಕ್' ಎಂದು ಘೋಷಣೆ ಮಾಡಬೇಕು. ಹಲವಾರು ಕೈಗಾರಿಕೆಗಳಿಗಾಗಿ ರೈತರು ತಮ್ಮ ಭೂಯಿಯನ್ನು ನೀಡಿದ್ದಾರೆ. ಆದರೆ ಅವರಿಗೆ ಸರಿಯಾದ ಕೆಲಸಗಳನ್ನು ಈವರೆಗೆ ನೀಡಲಾಗಿಲ್ಲ. ಉದ್ಯೋಗ ಹಂಚಿಕೆಯಲ್ಲಿ ನಮ್ಮ ಭಾಗದ ಯುವಕರಿಗೆ ಹೆಚ್ಚು ಒತ್ತು ನೀಡಬೇಕು ಎಂದರು. 

 ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆ.ಎಸ್.ಎಸ್.ಐ.ಡಿ.ಸಿ. ಮುಖ್ಯ ಇಂಜಿನಿಯರ್ ಜಗದೀಶ ಸೇರಿದಂತೆ ಜಿಲ್ಲೆಯ ಉದ್ದಿಮೆದಾರರು ಮತ್ತು ಇತರ ಅಧಿಕಾರಿಗಳು ಇದ್ದರು.

ಪ್ಯಾಂಟು, ಶರ್ಟಿಗೆ ಮ್ಯಾಚಿಂಗ್‌ ಮಾಸ್ಕ್‌!

ಮೂಂದೊಂದು ದಿನ ಟೇಲರ್‌ (ದರ್ಜಿ) ಬಳಿ ಪ್ಯಾಂಟು, ಶರ್ಟು ಹೊಲಿಯಲು ಕೊಟ್ಟರೆ, ಅದಕ್ಕೆ ಮ್ಯಾಚಿಂಗ್‌ ಆಗುವ ಮಾಸ್ಕ್‌ನ್ನು ಸಹ ಆತ ಹೊಲಿದು ಕೊಡಬಹುದು. ಆ ಕಾಲ ಬಹಳ ದೂರವೇನಿಲ್ಲ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಕೊರೊನಾ ವೈರಸ್‌ ಕುರಿತು ನಗೆ ಚಟಾಕಿ ಹಾರಿಸಿದರು.

ಇದು ಅಧಿಕಾರಿಗಳು, ಜನಪ್ರತಿನಿಧಿಗಳ ಮುಖದಲ್ಲಿ ನಗುವಿನ ಅಲೆ ಮೂಡಿಸಿತು. ಮುಂದುವರೆದು ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಎಲ್ಲರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಮತ್ತು ಸಾಬೂನಿನಿಂದ ಆಗಾಗ ಕೈಗಳನ್ನು ತೊಳೆಯುವುದು ಮತ್ತು ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು