ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ

ಜಿಲ್ಲಾಧಿಕಾರಿ ಆದೇಶ: ನಕಲಿ ವೈದ್ಯರ ವಿರುದ್ಧ ಭಾರತೀಯ ವೈದ್ಯಕೀಯ ನೋಂದಣಿ ಕಾಯ್ದೆ ಅಡಿ ಪ್ರಕರಣ
Last Updated 10 ಮೇ 2021, 5:49 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಅನಧಿಕೃತ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಕಲಿ ವೈದ್ಯರು ಎನ್ನಲಾಗಿರುವ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ನಕಲಿ ವೈದ್ಯರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ ನೀಡಿದ ಬೆನ್ನಲ್ಲೆ ತಹಶೀಲ್ದಾರ್ ಎಂ.ಸಿದ್ದೇಶ್‌, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ವಿ.ವೆಂಕಟೇಶ್ ಇತರೆ ಸಿಬ್ಬಂದಿಯನ್ನು ಒಳಗೊಂಡ ತಂಡ ತಾಲ್ಲೂಕಿನ ದೋಟಿಹಾಳ, ತಾವರಗೇರಾ ಸೇರಿದಂತೆ ಅನೇಕ ಕಡೆಗಳಲ್ಲಿ ದಾಳಿ ನಡೆಸಿದೆ.

ದೋಟಿಹಾಳದ ಕಲ್ಯಾಣಮಠ ಕ್ಲಿನಿಕ್‌ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಲಾಗಿದ್ದು ಚಿಕಿತ್ಸೆ ನೀಡುತ್ತಿದ್ದುದನ್ನು ಪತ್ತೆಹಚ್ಚಿದ ಅಧಿಕಾರಿಗಳು ಸಂತೋಷ್ ಭಾಪರಿ ಎಂಬುವವರ ವಿರುದ್ಧ ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸದರಿ ವ್ಯಕ್ತಿಗಳು ಕ್ಲಿನಿಕ್‌ಗೆ ಬರುವ ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇದ್ದರೂ ಅವರನ್ನು ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಕಳಿಸದೆ ತಮ್ಮಲ್ಲಿಯೇ ಇರಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು.

ಕೋವಿಡ್‌ ತಪಾಸಣೆಗೆ ಹೆದರಿ ಬಹುತೇಕ ಜನರು ಇಂಥ ನಕಲಿ ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದಾರೆ. ಇದರಿಂದ ಸೋಂಕು ತೀವ್ರಗೊಂಡು ಸಾವು ಸಂಭವಿಸಿರುವುದು, ಇತರರಿಗೂ ಹರಡುತ್ತಿರುವುದು ಕಂಡುಬಂದಿದೆ. ದೋಟಿಹಾಳ ನಕಲಿ ವೈದ್ಯರ ಬಳಿ ಮೊದಲು ಚಿಕಿತ್ಸೆ ಪಡೆದು ಗುಣಮುಖವಾಗದೆ ನಂತರ ಸರ್ಕಾರಿ ಆಸ್ಪತ್ರೆಗೆ ಸೇರಿದ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಆಸ್ಪತ್ರೆಗಳಿಗೆ ಬೀಗ

ತಾವರಗೇರಾ: ಪಟ್ಟಣದ ಖಾಸಗಿ ಆಸ್ಪತ್ರೆಗಳ ಮೇಲೆ ಕುಷ್ಟಗಿ ತಹಶೀಲ್ದಾರ್‌ ಎಂ.ಸಿದ್ದೇಶ್‌ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ರಾತ್ರಿ ದಾಳಿ ನಡೆಸಿದೆ. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಮೂರು ಆಸ್ಪತ್ರೆಗಳಿಗೆ ಬೀಗ ಹಾಕಲಾಗಿದೆ.

ತಹಶೀಲ್ದಾರ್‌ ಮಾಹಿತಿ ನೀಡಿ,‘ದಾಖಲಾತಿ ಪರಿಶೀಲಿಸಿಕೋವಿಡ್ ನಿಯಮ ಉಲ್ಲಂಘಿಸಿದ ಮೂರು ಖಾಸಗಿ ಆಸ್ಪತ್ರೆಗಳಿಗೆ ಬೀಗ ಹಾಕಲಾಗಿದೆ. ಭಾರತೀಯ ವೈದ್ಯಕೀಯ ನೋಂದಣಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು, ಎಎಸ್‌ಐ ಮಲ್ಲಪ್ಪ ವಜ್ರದ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲಿ, ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ ಹಾಗೂ ಪ.ಪಂ. ಸಿಬ್ಬಂದಿ ಶ್ಯಾಮೂರ್ತಿ ಇದ್ದರು.

ನೋಂದಣಿಯಿಲ್ಲದೆ ಚಿಕಿತ್ಸೆ

ಕುಕನೂರು: ಪಟ್ಟಣದ ಮೂವರು ನಕಲಿ ವೈದ್ಯರ ಕ್ಲಿನಿಕ್‍ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಕ್ಲಿನಿಕ್‍ಗಳನ್ನು ಬಂದ್ ಮಾಡಿಸಲಾಯಿತು.

ಪರಿಶೀಲನೆ ವೇಳೆ ಕೆ.ಪಿ.ಎಂ.ಇ ನೋಂದಣಿ ದಾಖಲೆಗಳು ಇಲ್ಲದೇ ನಿಯಮ ಬಾಹಿರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡುಬಂತು.

ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ಮಾತನಾಡಿ,‘ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಪಟ್ಟಣದಲ್ಲಿ ಮೂರು ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ. ಅದರಂತೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT