ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕಾರಟಗಿಯಿಂದ ಬೆಂಗಳೂರಿಗೆ ಶೀಘ್ರ ರೈಲು

Last Updated 14 ಜುಲೈ 2021, 5:29 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯಾದ ಗಿಣಗೇರಾ-ಮೆಹಬೂಬ್‌ ನಗರ ರೈಲು ಮಾರ್ಗ ಕಾರಟಗಿವರೆಗೆ ಪೂರ್ಣಗೊಂಡಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ಭಾಗದಲ್ಲಿ 18 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ.

ಹುಬ್ಬಳ್ಳಿಯಿಂದ ಗಂಗಾವತಿಗೆ ಈಗಾಗಲೇ ಎರಡು ಪ್ರಯಾಣಿಕ ರೈಲು ಆರಂಭವಾಗಿದ್ದು, ಸ್ವಾತಂತ್ರ್ಯ ದೊರೆತು 70 ವರ್ಷದ ನಂತರ ಈ ಭಾಗದ ಜನರು ರೈಲ್ವೆ ಮುಖ ನೋಡುವಂತೆ ಆಗಿದೆ. ಗಂಗಾವತಿಯಿಂದ 27 ಕಿ.ಮೀ ಕಾರಟಗಿವರೆಗೆ ರೈಲ್ವೆ ಮಾರ್ಗ ಸಂಪೂರ್ಣ ಪೂರ್ಣಗೊಂಡು ಪರೀಕ್ಷಾರ್ಥ ಕೂಡಾ ಸಂಚಾರ ನಡೆಸಲಾಗಿದೆ.

ರೈಲು ನಿಲ್ದಾಣ, ಮೂಲಸೌಕರ್ಯ, ಟಿಕೆಟ್‌ ಕೌಂಟರ್‌ ಸೇರಿದಂತೆ ಕೆಲವು ಸೌಲಭ್ಯಗಳನ್ನು ನೀಡಲಾಗಿದೆ. ಈಗ 'ಕಾರಟಗಿ-ಬೆಂಗಳೂರು' ರೈಲು ಓಡಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದ್ದು,ಜು.18ರಂದು ನಡೆಯಲಿರುವ ರೈಲ್ವೆ ಮಂಡಳಿ ಸಲಹಾ ಸಮಿತಿಯಲ್ಲಿ ಅಧಿಕೃತ ಆದೇಶಜಾರಿಗೆ ಬರಲಿದೆ.

ಸಂಚರಿಸುವ ಮಾರ್ಗ: ಕಾರಟಗಿ, ಗಂಗಾವತಿ, ಗಿಣಗೇರಾ, ಹೊಸಪೇಟೆ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮೂಲಕ ಚಿತ್ರದುರ್ಗ, ತುಮಕೂರು ಕಡೆಗೆ ಅಥವಾ ಬಳ್ಳಾರಿ, ಗುಂತಕಲ್, ಹಿಂದೂಪುರ ಮಾರ್ಗದಲ್ಲಿ ಓಡಿಸುವ ಕುರಿತು ನಿರ್ಣಯ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಇದು ರಾಜ್ಯದ ವಿವಿಧ ತಾಲ್ಲೂಕುಗಳನ್ನು ಹಾಯ್ದು ಹೋಗಬೇಕು ಎಂಬುವುದು ಇಲ್ಲಿನ ಬಹುತೇಕರ ಅಭಿಪ್ರಾಯವಾಗಿದೆ. ಇದಕ್ಕೆ ಸಂಸದ ಸಂಗಣ್ಣ ಕರಡಿ ಅವರು ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಕೂಡಾ ಮಾಡಿದ್ದು, ಸೂಕ್ತ ಸ್ಪಂದನೆ ದೊರೆತಿದೆ ಎಂದು ಹೇಳಿದರು.

2019ರಲ್ಲಿ ಕೊಪ್ಪಳ-ಗಂಗಾವತಿ ನಡುವಿನ ರೈಲು ಸಂಚಾರ ಆರಂಭವಾಗಿದೆ. ಈ ಮಾರ್ಗ ಕಾರಟಗಿಯಿಂದ ಸಿಂಧನೂರು ತಲುಪಲು ಇನ್ನೂ 62 ಕಿ.ಮೀ. ಮಾರ್ಗದ ನಿರ್ಮಾಣವಾಗಬೇಕಿದೆ. ಭೂಸ್ವಾಧೀನದ ಕಾರಣ ವಿಳಂಬವಾಗುತ್ತಿದೆ. ರೈಲ್ವೆ ಹಳಿ ಕಾಮಗಾರಿ ಮುಗಿದು ರೈಲು ಸಂಚಾರ ಆರಂಭವಾದರೆ ರಾಯಚೂರು ತನಕ ರೈಲು ತಲುಪಲಿದೆ.

1999ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಮುನಿರಾಬಾ ದ್‌ನಲ್ಲಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಅದರ ನಂತರ 40 ಕಿ.ಮೀ ಗಂಗಾವತಿವರೆಗೆ ರೈಲು ಹಳಿ ಹಾಕಲು 20 ವರ್ಷ ತೆಗೆದುಕೊಂಡಿತು.ಮುನಿರಾಬಾದ್-ಗಂಗಾವತಿ ನಡುವೆ ತುಂಗಭದ್ರಾ ನದಿ, ಬೆಟ್ಟಗಳ ಸಾಲು ಬರುವ ಕಾರಣ ಯೋಜನೆಯನ್ನು ಗಿಣಿಗೇರಾದಿಂದ ಗಂಗಾವತಿಗೆ ಬದಲಾವಣೆ ಮಾಡಲಾಯಿತು.

ಹೆಚ್ಚಿನ ಜನರಿಗೆ ಅನುಕೂಲ: ಬೆಂಗಳೂರಿಗೆ ತೆರಳಲು ಈ ಭಾಗದ ಜನರು ಹೆಚ್ಚಾಗಿ ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಈಗ ಕಾರಟಗಿ ರೈಲು ಬೆಂಗಳೂರಿಗೆ ಆರಂಭವಾದರೆ ಗಂಗಾವತಿ, ಕಾರಟಗಿ, ಕೊಪ್ಪಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಿಂಧನೂರು ಜನತೆ ಕೇವಲ 15ರಿಂದ 20 ಕಿಮೀ ಕಾರಟಗಿಗೆ ಬಂದು ರೈಲು ಸೌಲಭ್ಯ ಪಡೆದುಕೊಳ್ಳಬಹುದು. ಇದರಿಂದ ರಾಯಚೂರಿಗೆ ತೆರಳುವುದು ತಪ್ಪುತ್ತದೆ.

ವಿಸ್ಟ್ರೋಡೋಂ ಕೋಚ್‌ಗೆ ಮನವಿ

ಕೊಪ್ಪಳ ಜಿಲ್ಲೆ ಹಾಯ್ದು ಹೋಗುವ ವಾಸ್ಕೋ, ಚೆನೈ, ಅಮರಾವತಿ ಮುಂತಾದ ರೈಲುಗಳಲ್ಲಿ ಯಾವುದಾದರೂ ಒಂದು ರೈಲಿಗೆವಿಸ್ಟ್ರೋಡೋಂ ಕೋಚ್‌ಗೆಅಳವಡಿಸಿ ಹೊಸಪೇಟೆಯಿಂದ ಹುಲಗಿ, ಮುನಿರಾಬಾದ್, ಕೊಪ್ಪಳ ಮೂಲಕ ಗದಗ, ಹುಬ್ಭಳ್ಳಿ, ಧಾರವಾಡ, ಅಳ್ನಾವರ ಮೂಲಕ ಸಂಚರಿಸುವಂತೆ ಮನವಿ ಮಾಡಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಮನವಿ
ಮಾಡುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಬೆಂಗಳೂರು-ಮಂಗಳೂರು ರೈಲಿಗೆ ಈ ಪಾರದರ್ಶಕ ಕೋಚ್‌ ಅಳವಡಿಸಿದ್ದು, ಹೆಚ್ಚಿನ ಜನಮನ್ನಣೆಗೆ ಪಾತ್ರವಾಗಿವೆ. ಅದರಂತೆ ಹೊಸಪೇಟೆ, ಕೊಪ್ಪಳದ ಗುಡ್ಡಗಳು, ತುಂಗಭದ್ರಾ ಪರಿಸರದ ನದಿ ಪಾತ್ರ, ಐತಿಹಾಸಿಕ ಸ್ಮಾರಕಗಳು, ತಳಕಲ್‌ ಭಾಗದಲ್ಲಿ ಕೃಷ್ಣಮೃಗ, ಜಿಂಕೆಗಳನ್ನು ಕಣ್ತುಂಬಿಗೊಳ್ಳಬಹುದಲ್ಲದೆ, ಸಹ್ಯಾದ್ರಿ ಪರ್ವತ ಸಾಲನ್ನು ಹಾಯ್ದು ಗೋವಾ ತಲುಪಬಹುದು, ಈ ಹಿನ್ನೆಲೆಯಲ್ಲಿ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT