ಶನಿವಾರ, ಜುಲೈ 2, 2022
22 °C
ಮೆಹಬೂಬ್‌ ನಗರ – -ಮುನಿರಾಬಾದ್, ವಾಡಿ- – ತಳಕಲ್ ರೈಲ್ವೆ ಕಾಮಗಾರಿ ಶೇ 40ರಷ್ಟು ಮಾತ್ರ ಪೂರ್ಣ

ಕೊಪ್ಪಳ: ಆಮೆಗತಿಯಲ್ಲಿ ಸಾಗಿರುವ ರೈಲ್ವೆ ಕಾಮಗಾರಿ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯಾದ ಗಿಣಗೇರಾ-ಮೆಹಬೂಬ್‌ ನಗರ ರೈಲು ಹಾಗೂ ತಳಕಲ್ ವಾಡಿ ರೈಲು ಮಾರ್ಗಗಳ ನಿರ್ಮಾಣ ಕಾಮಗಾರಿಗಳು ದಶಕದಿಂದ ನಡೆಯುತ್ತಲೇ ಇದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂಬುವುದು ಈ ಭಾಗದ ಜನತೆಯ ಹಕ್ಕೊತ್ತಾಯವಾಗಿದೆ.

ಮೆಹಬೂಬ್‌ನಗರ-ಗಿಣಗೇರಾ (ಮುನಿರಾಬಾದ್) ರೈಲು ಮಾರ್ಗ ಒಟ್ಟು 165 ಕಿ.ಮೀ ಇದೆ. ತಳಕಲ್-ವಾಡಿ ರೈಲು ಮಾರ್ಗ 257.26 ಕಿ.ಮೀ ಇದ್ದು, ಒಟ್ಟು 2,841.84 ಕೋಟಿ ವೆಚ್ಚದ ಯೋಜನೆ ಇದಾಗಿದೆ. ತಳಕಲ್‌ನಿಂದ ಕುಷ್ಟಗಿವರೆಗೆ 57 ಕಿ.ಮೀ ಮಾರ್ಗ ನಿರ್ಮಾಣಕ್ಕೆ ಕಳೆದ ವರ್ಷವೇ ಚಾಲನೆ ಸಿಕ್ಕಿದೆ. 

1999ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಮುನಿರಾಬಾದ್‌ನಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅದರ ನಂತರ 40 ಕಿ.ಮೀ ಗಂಗಾವತಿವರೆಗೆ ರೈಲು ಹಳಿ ಹಾಕಲು 20 ವರ್ಷ ತೆಗೆದುಕೊಂಡಿತು. ಮುನಿರಾಬಾದ್-ಗಂಗಾವತಿ ನಡುವೆ ತುಂಗಭದ್ರಾ ನದಿ, ಬೆಟ್ಟಗಳ ಸಾಲು ಬರುವ ಕಾರಣ ಯೋಜನೆಯನ್ನು ಗಿಣಿಗೇರಾದಿಂದ ಗಂಗಾವತಿಗೆ ಬದಲಾವಣೆ ಮಾಡಲಾಯಿತು.

ಹುಬ್ಬಳ್ಳಿಯಿಂದ ಗಂಗಾವತಿಗೆ ಈಗಾಗಲೇ ಎರಡು ಪ್ರಯಾಣಿಕ ರೈಲು ಆರಂಭವಾಗಿದ್ದು, ಸ್ವಾತಂತ್ರ್ಯ ದೊರೆತು 70 ವರ್ಷದ ನಂತರ ಈ ಭಾಗದ ಜನರು ರೈಲ್ವೆ ಮುಖ ನೋಡುವಂತೆ ಆಗಿದೆ. ಗಂಗಾವತಿಯಿಂದ 27 ಕಿ.ಮೀ ದೂರದ ಕಾರಟಗಿವರೆಗೆ ರೈಲ್ವೆ ಮಾರ್ಗ ಸಂಪೂರ್ಣ ಪೂರ್ಣಗೊಂಡು ಪರೀಕ್ಷಾರ್ಥ ಕೂಡಾ ಸಂಚಾರ ನಡೆಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಭಾಗದಲ್ಲಿ 18 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ.

2019ರಲ್ಲಿ ಕೊಪ್ಪಳ-ಗಂಗಾವತಿ ಮಧ್ಯೆ ರೈಲು ಸಂಚಾರ ಆರಂಭವಾಗಿದೆ. ಈ ಮಾರ್ಗ ಕಾರಟಗಿಯಿಂದ ಸಿಂಧನೂರು ತಲುಪಲು ಇನ್ನೂ 62 ಕಿ.ಮೀ. ಮಾರ್ಗದ ನಿರ್ಮಾಣವಾಗಬೇಕಿದೆ. ಭೂಸ್ವಾಧೀನದ ಕಾರಣ ವಿಳಂಬವಾಗುತ್ತಿದೆ. ರೈಲ್ವೆ ಹಳಿ ಕಾಮಗಾರಿ ಮುಗಿದು ರೈಲು ಸಂಚಾರ ಆರಂಭವಾದರೆ ರಾಯಚೂರು ತನಕ ರೈಲು ತಲುಪಲಿದೆ.

ಮಂದಗತಿಗೆ ಕಾರಣ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಕಾರಣಕ್ಕೆ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳು ಮಂದಗತಿಯಲ್ಲಿ ನಡೆದಿವೆ. ಸೋಂಕಿನ ಪ್ರಭಾವ ಹೆಚ್ಚಾಗಿದ್ದ ಸಮಯದಲ್ಲಿ ರೈಲ್ವೆ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ, ‍ಪಶ್ಚಿಮ ಬಂಗಾಳ ಮತ್ತು ಬಿಹಾರದ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದು, ನಿಧಾನವಾಗಿ ಇತ್ತ ಬರುತ್ತಿದ್ದಾರೆ. ಅದಲ್ಲದೆ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ.

ಕೊಪ್ಪಳ ಜಿಲ್ಲೆಯ ಗಿಣಿಗೇರಾ–ರಾಯಚೂರು ನಡುವಣ 120 ಕಿ.ಮೀ. ಅಂತರದ ಹೊಸ ಮಾರ್ಗ, ಗದಗ (ತಳಕಲ್‌) –ವಾಡಿ ನಡುವಣ ಮಾರ್ಗದಲ್ಲಿ ಬರುವ ಯಲಬುರ್ಗಾ, ಕುಷ್ಟಗಿಯಲ್ಲಿ ರೈಲು ಮತ್ತು ಪ್ಲಾಟ್‌ ಫಾರ್ಮ್‌ ನಿರ್ಮಾಣಗಳ ಕೆಲಸಗಳು ಕೂಡ ನಡೆಯುತ್ತಿವೆ. 

ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯ: ತಳಕಲ್ಲ ಮತ್ತು ಕುಷ್ಟಗಿ ಪಟ್ಟಣದ ನಡುವಣ ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭವಾಗಿದೆ. ಭೀಮಾ ಮತ್ತು ಕೃಷ್ಣಾ ನದಿಗಳ ಮೇಲಿನ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

'ಕುಷ್ಟಗಿ ಪಟ್ಟಣದ ಸಂತಶಿಶುನಾಳ ಷರೀಫ್‌ ನಗರ ಮತ್ತು ಮಾರುತಿ ನಗರದ ಮಧ್ಯದ 1.04 ಕಿಮೀ ಉದ್ದ, 35-80 ಮೀಟರ್‌ ಅಗಲದಲ್ಲಿ ರೈಲು ನಿಲ್ದಾಣದ ಜಾಗ. ಮುದೇನೂರು, ಕಿಡದೂರು, ಅಂಕಲಿಮಠ, ಮ್ಯಾಗಳಪೇಟೆ ಲಿಂಗಸಗೂರುವರೆಗಿನ ಮಾರ್ಗಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ' ಎನ್ನುತ್ತಾರೆ ನೈರುತ್ಯ ರೈಲ್ವೆ ತಾಂತ್ರಿಕ ವಿಭಾಗದ ಹಿರಿಯ ಎಂಜಿನಿಯರ್‌ ಮನ್ಸೂರ್ ಅಲಿ ಹೇಳುತ್ತಾರೆ. 

‘ಬಾಗಲಕೋಟೆವರೆಗೆ ರೈಲು ಮಾರ್ಗ ವಿಸ್ತರಿಸಿ’

ಕುಷ್ಟಗಿ: ಬಳ್ಳಾರಿ ಜಿಲ್ಲೆಯ ದರೋಜಿಯಿಂದ ಬಾಗಲಕೋಟೆವರೆಗೆ ರೈಲು ಮಾರ್ಗ ವಿಸ್ತರಿಸುವ ವಿಚಾರಕ್ಕೆ ಜೆಡಿಎಸ್ ಬೆಂಬಲ ಇದ್ದು, ಈ ನಿಟ್ಟಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಪಾಟೀಲ ಹೇಳಿದರು.

ಹಿಂದುಳಿದ ಪ್ರದೇಶದ ವ್ಯಾಪ್ತಿಯಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ರೈಲು ಮಾರ್ಗಗಳನ್ನು ನಿರ್ಮಾಣ ಮಾಡಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಗಂಗಾವತಿ ದರೋಜಿ ಮಧ್ಯೆ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ಸಂಗಣ್ಣ ಕರಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಅಲ್ಲದೆ ರೈಲ್ವೆ ಮಂಡಳಿ ಅಧ್ಯಕ್ಷರಿಗೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಕೊಪ್ಪಳ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೃಷಿ, ಕೈಗಾರಿಕೆ, ಉದ್ಯಮಗಳ ಸ್ಥಾಪನೆಗೂ ಉತ್ತೇಜನ ದೊರೆತು ಭವಿಷ್ಯದಲ್ಲಿ ಇಲ್ಲಿಯ ಜನರಿಗೂ ಹೆಚ್ಚಿನ ಉದ್ಯೋಗ ಅವಕಾಶಗಳು ಲಭ್ಯವಾಗುತ್ತವೆ. ಈ ಭಾಗದ ಸಂಸದರು, ಶಾಸಕರು ಮತ್ತು ಸಚಿವರು ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.

ಮೇಲ್ಸುತುವೆ ನಿರ್ಮಾಣಕ್ಕೆ ಮನವಿ

ಕುಕನೂರ: ಗದಗ-ವಾಡಿಯವರೆಗೆ ನಿರ್ಮಾಣವಾಗು ತ್ತಿರುವ ರೈಲು ಮಾರ್ಗಕ್ಕೆ ತಳಕಲ್ಲದಿಂದ ನಿಂಗಾಪುರ ಮೂಲಕ ಕುಕನೂರಿಗೆ ಹೋಗುವ ರಸ್ತೆಗೆ (ಕೆಸರು ಹಳ್ಳದ ಬಳಿ) ರೈಲು ಮಾರ್ಗಕ್ಕೆ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ.

ಅಲ್ಲದೆ ಈಗಾಗಲೇ ತಳಕಲ್ಲದಿಂದ ಕುಕನೂರ ತನಕ ದ್ವಿಪಥ ರಸ್ತೆ ಮಂಜೂರಾಗಿದೆ. ಈ ಯೋಜನೆಗಳು ಮುಂದಿನ ನೂರು ವರ್ಷಗಳ ದೂರದೃಷ್ಟಿಯಿಟ್ಟುಕೊಂಡು ನಿರ್ಮಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ಸೇತುವೆ ಕೆಳಗೆ ಸಂಚರಿಸುವ ಬಸ್, ಬಂಡಿ,, ಖಾಸಗಿ ವಾಹನಗಳ ದಟ್ಟನೆ ತಪ್ಪಿಸಲು ಯೋಜನೆಯಲ್ಲಿ ದೊಡ್ಡ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ ಅನುಮತಿ ದೊರಕಿಸಿಕೊಡಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು