ಗುರುವಾರ , ಮೇ 19, 2022
22 °C
ಹಬ್ಬದ ಖರೀದಿ ಜೋರು: ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ

ಕೊಪ್ಪಳ: ಮನೆ, ಮನಗಳಲ್ಲಿ ಈದ್‌ ಸಂಭ್ರಮ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಕಾರಣಕ್ಕೆ ಕಳೆಗುಂದಿದ್ದ ಈದ್‌ ಈ ಬಾರಿ ಕಳೆಗಟ್ಟಿದೆ.

ಸಹರಿಗಾಗಿ ನಾನಾ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ. ಸಂಜೆಯೂ ಅಡುಗೆ ಕೋಣೆಗಳು ಘಮ ಘಮಿಸುತ್ತಿದ್ದು, ಇಫ್ತಾರ್‌ ಕೂಟದಲ್ಲಿ ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ಬಗೆ, ಬಗೆಯ ಖಾದ್ಯಗಳನ್ನು ಸವಿಯುತ್ತಿದ್ದಾರೆ.

ಈ ಬಾರಿ ಎಲ್ಲ ಮಸೀದಿಗಳಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಿದ್ದು ಗಮನ ಸೆಳೆಯಿತು. ಹಿಂದೂ-ಮುಸ್ಲಿಂ ಮುಖಂಡರು ಹನುಮ ಜಯಂತಿ ಸೇರಿದಂತೆ ವಿವಿಧ ಹಬ್ಬಗಳಲ್ಲಿ ತಂಪು ಪಾನೀಯ ನೀಡಿದರೆ ಹಿಂದೂಗಳು ಮುಸ್ಲಿಂ ಸ್ನೇಹಿತರಿಗೆ ಇಫ್ತಾರ್ ಕೂಟ ಆಯೋಜಿಸಿ ಗಮನ ಸೆಳೆದರು.

ಮನೆಗಳಲ್ಲಿ ಸಂಭ್ರಮ: ಮುಸ್ಲಿಂ ಕುಟುಂಬಗಳು ರಂಜಾನ್‌ ವೇಳೆ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದು, ಉಪವಾಸ ವ್ರ ತ(ರೋಜಾ) ಕೈಗೊಳ್ಳುವುದರ ಜತೆಗೆ ಪ್ರಾರ್ಥನೆ (ನಮಾಜ್‌) ಮತ್ತು ದಾನಕ್ಕೂ (ಜಕಾತ್‌) ಒತ್ತು ನೀಡುತ್ತಿದ್ದಾರೆ.

ಸಸ್ಯಾಹಾರ ಸೇವನೆಗೆ ಆದ್ಯತೆ: ‘ರಂಜಾನ್‌ ಬಂತೆಂದರೆ ನಮ್ಮ ಮನೆಯಲ್ಲಿ ಎಲ್ಲಿಲ್ಲದ ಸಡಗರ. ಶ್ರದ್ಧೆಯಿಂದ ರೋಜಾ ಕೈಗೊಳ್ಳುವ ನಾವು, ಎಷ್ಟೇ ಕೆಲಸದ ಒತ್ತಡವಿದ್ದರೂ ನಿತ್ಯ ಸಹರಿ ಮತ್ತು ಇಫ್ತಾರ್‌ಗೆ ಸೇರುತ್ತೇವೆ. ಈ ಮಾಸದಲ್ಲಿ ರೋಜಾಕಕ್ಎ ಪೂರಕವಾಗಿ ಆರೋಗ್ಯ ಕಾಯ್ದುಕೊಳ್ಳ ಬೇಕಿರುವುದರಿಂದ ಮಾಂಸಾಹಾರ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ಹೆಚ್ಚಾಗಿ ಸೇವಿಸುವುದಿಲ್ಲ. ಸಸ್ಯಾಹಾರ ಸೇವನೆಗೆ ಒತ್ತು ನೀಡುತ್ತೇವೆ. ಹಸಿ ತರಕಾರಿ ಮತ್ತು ಹಣ್ಣು–ಹಂಪಲುಗಳನ್ನು ಆದ್ಯತೆ ಮೇರೆಗೆ ತಿನ್ನುತ್ತೇವೆ’ ಎನ್ನುತ್ತಾರೆ ರಶೀದ್ ಅವರು.

‘ಮಹಿಳೆಯರು ಮನೆಯಲ್ಲೇ ನಮಾಜ್‌ ಮಾಡುತ್ತಾರೆ. ಪುರುಷರು ಮಸೀದಿಗೆ ತೆರಳುತ್ತೇವೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಎಲ್ಲರೂ ‘ಕುರಾನ್‌’ ಓದುತ್ತಾ, ದೇವರನ್ನು ಸ್ಮರಿಸುತ್ತೇವೆ. ಹಬ್ಬದ ದಿನ ಸ್ನೇಹಿತರು, ಹಿತೈಷಿಗಳನ್ನು ಮನೆಗೆ ಊಟಕ್ಕೆ ಆಹ್ವಾನಿಸಿ, ಸಡಗರದಿಂದ ಈದ್‌–ಉಲ್‌–ಫಿತ್ರ್‌ ಆಚರಿಸುತ್ತೇವೆ’ ಎನ್ನುತ್ತಾರೆ ಮುನೀರ್ ಅಹಮ್ಮದ್ ಸಿದ್ದಿಕಿ.

ಸಮಯ ಹೊಂದಾಣಿಕೆ

‘ವರ್ಷದ 11 ತಿಂಗಳುಗಳಿಗೆ ಹೋಲಿಸಿದರೆ, ರಂಜಾನ್‌ನಲ್ಲಿ ಒಂದಿಷ್ಟು ದಿನಚರಿ ಬದಲಾಗುತ್ತದೆ. ಹಾಗಾಗಿ ದೂರದ ಊರುಗಳಿಗೆ ಪ್ರವಾಸ ತೆರಳುವುದಿಲ್ಲ. ಧಾರ್ಮಿಕ ಹೊರತುಪಡಿಸಿ ಇತರ ಸಮಾರಂಭಗಳಿಂದಲೂ ದೂರ ಉಳಿಯುತ್ತೇವೆ. ಸಮಯ ಹೊಂದಾಣಿಕೆ ಮಾಡಿಕೊಂಡು ಧಾರ್ಮಿಕ ಚಟುವಟಿಕೆ ಕೈಗೊಳ್ಳುತ್ತೇವೆ. ಸಂತಸದಿಂದ ಇರಿಸಿದ ಅಲ್ಲಾಹುನನ್ನು ನೆನೆಯುತ್ತೇವೆ’ ಎಂದು ಮಾನ್ವಿ ಪಾಶಾ ಹೇಳುತ್ತಾರೆ.

ಬಹುತೇಕ ಮುಸ್ಲಿಮರ ಮನೆಗಳಲ್ಲೂ ಈ ಸಲ ರಂಜಾನ್ ಸಂಭ್ರಮ ಇಮ್ಮಡಿಯಾಗಿದೆ. ಕಿರಿಯರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರು ರೋಜಾ ಕೈಗೊಳ್ಳುತ್ತಿದ್ದಾರೆ. ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು