ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಹನುಮನ ನಾಡಿನೊಂದಿಗೆ ರಾಮನ ನಂಟು...

ರಾಮನ ಭೇಟಿಗೆ ಸಾಕ್ಷಿಯಂತಿವೆ ಕಿಷ್ಕಿಂಧೆ ಪ್ರದೇಶ, ಪಂಪಾ ಸರೋವರ, ಋಷಿಮುಖ ಪರ್ವತ
Published 22 ಜನವರಿ 2024, 7:32 IST
Last Updated 22 ಜನವರಿ 2024, 7:32 IST
ಅಕ್ಷರ ಗಾತ್ರ

ಕೊಪ್ಪಳ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿರುವ ಕಿಷ್ಕಿಂಧೆ ಪ್ರದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಹನುಮ ಜನಿಸಿದ ನಾಡು ಎಂದು ಖ್ಯಾತಿ ಪಡೆದ ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ‘ರಾಮ ನಾಮ’ ಜಪ ನಡೆಯುತ್ತಿದೆ.

ವಾಲ್ಮೀಕಿ ಮೂಲ ರಾಮಾಯಣದಲ್ಲಿ ಉಲ್ಲೇಖವಿರುವಂತೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದಾಗ ಸೀತೆ ಹುಡುಕಾಟಕ್ಕಾಗಿ ರಾಮ–ಲಕ್ಷ್ಮಣ ಕಿಷ್ಕಿಂಧೆ ಪ್ರದೇಶಕ್ಕೆ ಬಂದಿದ್ದರು ಎನ್ನುವುದು ಕಿಷ್ಕೆಂಧಾ ಖಾಂಡದಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ ವರ್ಣಿಸಿರುವ ಕಿಷ್ಕಿಂಧೆ ಪ್ರದೇಶದ ಸುತ್ತ ಬೆಟ್ಟಗುಡ್ಡಗಳ ಸಾಲು, ನದಿಯ ವೈಭವ, ಹಸಿರು ತೋರಣದ ಸುಂದರ ದೃಶ್ಯ ಕಾವ್ಯ ಹಾಗೂ ಪ್ರಕೃತಿ ಸೌಂದರ್ಯ ಈಗಲೂ ಕಂಡುಬರುತ್ತದೆ. ಹೀಗಾಗಿ ಈ ಸ್ಥಳ ದೇಶ ಹಾಗೂ ವಿದೇಶಿ ಪ್ರವಾಸಿಗರು ಪ್ರಮುಖ ಪ್ರವಾಸಿ ತಾಣವಾಗಿದೆ.

ಪತ್ನಿ ಸೀತೆಯ ಹುಡುಕಾಟದ ಸಂಕಟದಲ್ಲಿದ್ದ ಶ್ರೀರಾಮ ಅಂಜನಾದ್ರಿ ಸಮೀಪವಿರುವ ಪಂಪಾಸರೋವರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲುತ್ತಾನೆ. ಕಿಷ್ಕಿಂಧೆ ಪ್ರದೇಶದಲ್ಲಿಯೇ ಇರುವ ಈ ತಾಣಕ್ಕೆ ಶ್ರೀರಾಮ ಭೇಟಿ ನೀಡಿದ್ದ ಎನ್ನುವ ಕಾರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ರಾಮನ ಭಕ್ತರು ಪಂಪಾಸರೋವರ ಹಾಗೂ ಅಂಜನಾದ್ರಿಗೆ ಬರುತ್ತಾರೆ.

ಆಗ ದಟ್ಟ ಕಾಡು ಇದ್ದ ಕಿಷ್ಕಿಂಧೆ ಪ್ರದೇಶದಲ್ಲಿ ಸೀತೆಯನ್ನು ಹುಡುಕುತ್ತ ಹೊರಟಾಗ ಶ್ರೀರಾಮ ಮತ್ತು ಲಕ್ಷ್ಮಣರಿಗೆ ಪಂಪಾಸರೋವರದ ಸಮೀಪದಲ್ಲಿರುವ ಋಷಿಮುಖ ಪರ್ವತದಲ್ಲಿ ಶ್ರೀರಾಮ ಹನುಮಂತ ಹಾಗೂ ಸುಗ್ರೀವನನ್ನು ಭೇಟಿಯಾಗುತ್ತಾನೆ. ಈ ಭೇಟಿ ಸೀತೆಯನ್ನು ಹುಡುಕುವ ರಾಮನ ಪ್ರಯತ್ನಕ್ಕೆ ದೊಡ್ಡ ಮೈಲುಗಲ್ಲಾಗುತ್ತದೆ ಎನ್ನುವುದು ಇತಿಹಾಸ ತಜ್ಞರು ಹಾಗೂ ಸಂಶೋಧಕರ ಅಭಿಮತ.

ಪ್ರಾಕೃತಿಕವಾಗಿ ಸೊಬಗು ಹೊಂದಿರುವ ಅಂಜನಾದ್ರಿ ಭಾಗದ ಸುತ್ತಮುತ್ತಲಿನ ನೋಟ
ಪ್ರಾಕೃತಿಕವಾಗಿ ಸೊಬಗು ಹೊಂದಿರುವ ಅಂಜನಾದ್ರಿ ಭಾಗದ ಸುತ್ತಮುತ್ತಲಿನ ನೋಟ

ರಾಮ ಹಾಗೂ ಹನುಮಂತನ ಮೊದಲ ಭೇಟಿಯಾಗುವುದು ಕೂಡ ಇದೇ ಪರ್ವತದಲ್ಲಿ ಎನ್ನುವುದು ಪುಸ್ತಕದಲ್ಲಿ ದಾಖಲಾಗಿದೆ. ಇದಕ್ಕಾಗಿ ಋಷಿಮುಖದಲ್ಲಿ ಈಗಲೂ ರಾಮ, ಲಕ್ಷ್ಮಣ, ಹನುಮಂತ ಮತ್ತು ಸೀತೆಗೆ ಪೂಜೆ ಸಲ್ಲಿಸಲಾಗುತ್ತದೆ. ರಾಮನ ಪಾದಗಳ ಅಚ್ಚು ಇದೆ ಎನ್ನುವ ನಂಬಿಕೆ ಭಕ್ತರದ್ದು. ಪರ್ವತದ ಸಮೀಪವೇ ಈ ಕುರಿತು ಮಾಹಿತಿ ಫಲಕವನ್ನೂ ಅಳವಡಿಸಲಾಗಿದೆ.

ಕೊಪ್ಪಳ ತಾಲ್ಲೂಕಿನ ಬೈರಾಪುರದಲ್ಲಿರುವ ರಾಮದೇವರ ದೇವಸ್ಥಾನ
ಕೊಪ್ಪಳ ತಾಲ್ಲೂಕಿನ ಬೈರಾಪುರದಲ್ಲಿರುವ ರಾಮದೇವರ ದೇವಸ್ಥಾನ

ಋಷಿಮುಖ ಪರ್ವತದ ಹಿಂಭಾಗದಲ್ಲಿರುವ ಈಗಿನ ಹಂಪಿಯಲ್ಲಿ ಸುಗ್ರೀವ ಗುಹೆ ಹಾಗೂ ಮಾತಂಗ ಪರ್ವತವಿದೆ. ಸುಗ್ರೀವನ ಅಣ್ಣ ವಾಲಿ ಮಹಾನ್​ ಬಲಶಾಲಿ. ಆತ ಮಾತಂಗ ಮುನಿಗಳಿಂದ ಶಾಪಗ್ರಸ್ಥನಾದ ಕಾರಣ ಮಾತಂಗ ಪರ್ವತ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಅಣ್ಣನಿಂದ ಪೆಟ್ಟು ತಿಂದು ರಾಜ್ಯ ಕಳೆದುಕೊಂಡ ಸುಗ್ರೀವ ಮಾತಂಗ ಪರ್ವತದಲ್ಲಿ ಆಶ್ರಯ ಪಡೆದಿರುತ್ತಾನೆ. ಮಾತಂಗ ಮುನಿಗಳು ತಪಸ್ಸು ಮಾಡಿದ ಋಷಿಮುಖ ಪರ್ವತ ಇಲ್ಲಿರುವುದು ಮತ್ತೊಂದು ಐತಿಹಾಸಿಕ ಉಲ್ಲೇಖವಾಗಿದೆ.

ರಾಮನ ಮೂರ್ತಿ
ರಾಮನ ಮೂರ್ತಿ

ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿರುವ ಎಲ್ಲ  ಅಂಶಗಳು ಈ ಭಾಗದಲ್ಲಿರುವ ಕಾರಣ ಕಿಷ್ಕಿಂಧೆ ಪ್ರದೇಶಕ್ಕೆ ಇನ್ನಿಲ್ಲದ ಮಹತ್ವ. ಆದ್ದರಿಂದ ಉತ್ತರ ಭಾರತದಿಂದ ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ಅಂಜನಾದ್ರಿ, ಋಷಿಮುಖ ಪರ್ವತ, ಪಂಪಾಸರೋವರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇಂದು (ಸೋಮವಾರ) ರಾಮನ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಹಿನ್ನೆಲೆಯಲ್ಲಿ ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿಯಲ್ಲಿಯೂ ವಿವಿಧ ಸಂಘಟನೆಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ರಾಮ ಹನುಮಂತ ಹಾಗೂ ಸುಗ್ರೀವ ಅವರ ಮಿಲನವಾಗಿದ್ದು ಕಿಷ್ಕಿಂಧೆ ಕ್ಷೇತ್ರದಲ್ಲಿ ಎನ್ನುವ ಕಾರಣಕ್ಕೆ ಈ ಕ್ಷೇತ್ರಕ್ಕೆ ಬಂದಿದ್ದೇವೆ. ಈ ಎಲ್ಲ ಕ್ಷೇತ್ರಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಾಗಿದೆ.
ವಿಷ್ಣುವ್ಯಾಸ್‌ ಭಕ್ತ
ವಾಲ್ಮೀಕಿ ರಾಮಾಯಣದ ಕಿಷ್ಕಿಂಧೆ ಕಾಂಡ ಅಧ್ಯಾಯದಲ್ಲಿ ರಾಮ ಕಿಷ್ಕಿಂಧೆ ಪ್ರದೇಶಕ್ಕೆ ಭೇಟಿ ನೀಡಿದ್ದ ಎನ್ನುವುದಕ್ಕೆ ಪೂರಕ ಹೋಲಿಕೆಗಳು ಇವೆ. ರಾಮಾಯಣದಲ್ಲಿ ಬರುವ ಕಿಷ್ಕಿಂಧೆ ಪ್ರದೇಶ ಗಂಗಾವತಿ ತಾಲ್ಲೂಕಿನದ್ದೇ ಎನ್ನಲು ಹುಲಿಗಿ ಬೆಳಗಾವಿ ಜಿಲ್ಲೆಯ ಶಿರಸಂಗಿಯಲ್ಲಿ ದೊರೆತ ಶಾಸನಗಳು ಸಾಕ್ಷಿಯಂತಿವೆ
ಸಿದ್ದಲಿಂಗಪ್ಪ ಕೊಟ್ನೆಕಲ್‌ ಕನ್ನಡ ಉಪನ್ಯಾಸಕ
ರಾಮನ ಹೆಜ್ಜೆಗಳನ್ನು ಗಂಗಾವತಿ ತಾಲ್ಲೂಕಿನ ಕಿಷ್ಕಿಂಧೆ ಪ್ರದೇಶದಲ್ಲಿ ನೋಡಲು ಸಾಕಷ್ಟು ಆಧಾರ ಗ್ರಂಥಗಳು ಸಿಗುತ್ತವೆ. ವಾಲ್ಮೀಕಿ ರಾಮಾಯಣ ಹನುಮಂತ ರಾಮ ಹಾಗೂ ಸೀತೆ ಕುರಿತ ಅಧಿಕೃತ ಗ್ರಂಥ. ರಾಮ ಪಂಪಾಸರೋವರಕ್ಕೆ ಬಂದಾಗ ವರ್ಣಿಸುವ ಸುಂದರ ಪರಿಸರ ಈಗಲೂ ಇದೆ. ರಾಮನ ಬಳಿ ಹನುಮಂತನ ಮಾತನಾಡುವ ಚಾಕಚಕ್ಯತೆ ವರ್ಣನೆ ಮಲಯ ಪರ್ವತದ ಭೌಗೋಳಿಕ ದಾಖಲೆಗಳು ಈಗಲೂ ಇವೆ
ಗುಂಡೂರು ಪವನಕುಮಾರ್‌ ಉಪನ್ಯಾಸಕ

ರಾಮಾಯಣ ಇತಿಹಾಸದ ಬೈರಾಪುರವ ನೆನೆಯುತ್ತ ಜುನಸಾಬ ವಡ್ಡಟ್ಟಿ ಅಳವಂಡಿ:

ಅಳವಂಡಿ ಸಮೀಪದ ಬೈರಾಪುರ ಗ್ರಾಮ ಶ್ರೀರಾಮ ಲಕ್ಷ್ಮಣ ನಡೆದಾಡಿದ ಪುಣ್ಯ ಕ್ಷೇತ್ರವಾಗಿದೆ. ಅವರು ಇಲ್ಲಿಗೆ ಬಂದಿದ್ದರು ಎನ್ನುವುದಕ್ಕೆ ಹಲವಾರು ಕುರುಹುಗಳು ಇಲ್ಲಿವೆ. ಈ ಸ್ಥಳದಲ್ಲಿ ಭವ್ಯವಾದ ರಾಮಮಂದಿರವಿದೆ. ತೇತ್ರಾಯುಗದಲ್ಲಿ ಬೈರಾಪುರ ಕಾಡಿನಿಂದ ಕೂಡಿತ್ತು. ಮೊದಲು ಈ ಪ್ರದೇಶದಲ್ಲಿ ಬೈರವ ಎಂಬ ಮುನಿ ವಾಸವಾಗಿದ್ದರು. ಈ ಗ್ರಾಮಕ್ಕೆ ಮೊದಲು ಬೈರವಪುರ ನಂತರ ಬೈರಾಪುರ ಎಂಬ ಬಂದಿತು ಎಂದು ಹೇಳಲಾಗುತ್ತದೆ.

ವನವಾಸ ಸಂದರ್ಭದಲ್ಲಿ ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ದಕ್ಷಿಣ ದಿಕ್ಕಿನತ್ತ ಪ್ರಯಾಣ ಬಂದಾಗ ಈ ಪ್ರದೇಶಕ್ಕೆ ಬರುತ್ತಾರೆ ಎನ್ನುವ ಐತಿಹ್ಯವಿದೆ. ಇಲ್ಲಿಗೆ ಬಂದ ಸಂದರ್ಭದಲ್ಲಿ ಅಮಾವಾಸ್ಯೆ ಇರುತ್ತದೆ. ಅಮಾವಾಸ್ಯೆ ನಿಮಿತ್ತ ಶ್ರೀರಾಮ ತಂದೆಗೆ ಪಿತೃತರ್ಪಣ ಮಾಡಬೇಕಾಗಿರುತ್ತದೆ. ತರ್ಪಣ ಮಾಡಲು ಒಬ್ಬ ಋಷಿಮುನಿ ಬೇಕಾಗಿರುತ್ತದೆ. ಇಲ್ಲಿ ಭೈರವ ಋಷಿ ಇರುವುದು ತಿಳಿದು ಇಲ್ಲಿಗೆ ಆಗಮಿಸುತ್ತಾರೆ. ಮುನಿಗಳನ್ನು ಕಂಡು ತನ್ನ ತಂದೆಗೆ ಪಿತೃತರ್ಪಣ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ. ಮುನಿಗಳು ಒಪ್ಪುತ್ತಾರೆ. ಪಿತೃತರ್ಪಣಕ್ಕೆ ವ್ಯವಸ್ಥೆ ಮಾಡುತ್ತಾರೆ. ಅಂದು ರಾಮ ಹಾಗೂ ಲಕ್ಷ್ಮಣ ವಾಸ್ತವ್ಯ ಮಾಡುತ್ತಾರೆ ಎನ್ನುವುದನ್ನು ಇಲ್ಲಿನ ಹಿರಿಯರು ಹೇಳುತ್ತಾರೆ.

ಪಿತೃಗಳಿಗೆ ತರ್ಪಣ ಅರ್ಪಿಸಲು ಭೈರವ ಮುನಿಯ ಆಶ್ರಮ ಪ್ರವೇಶಿಸಿದ ರಾಮ ಲಕ್ಷ್ಮಣರು ನೀರು ಕೇಳುತ್ತಾರೆ. ಆ ಸಂದರ್ಭದಲ್ಲಿ ಬರಗಾಲ ಇದ್ದಿದ್ದರಿಂದ ಮುನಿಗಳು ಜಲ ಸಮಸ್ಯೆಯ ಬಗ್ಗೆ ತಿಳಿಸುತ್ತಾರೆ. ಕೂಡಲೇ ರಾಮ ಬಿಲ್ಲಿಗೆ ಬಾಣ ಹೂಡಿ ಭೂಮಿಗೆ ಬಿಟ್ಟು ಜೀವಸೆಲೆ ಸೃಷ್ಟಿಸುತ್ತಾರೆ. ಅದು ದೊಡ್ಡ ಹೊಂಡವಾಗಿ ನಿರ್ಮಾಣವಾಯಿತು ಎನ್ನುವುದು ಇಲ್ಲಿನ ಜನರ ನಂಬಿಕೆ. ಪಿತೃತರ್ಪಣ ಮುಗಿಸಿಕೊಂಡು ರಾಮ ಹಾಗೂ ಲಕ್ಷ್ಮಣ  ಮುಂದೆ ತೆರಳುತ್ತಾರೆ. ಭೈರವ ಮುನಿಗಳ ಆಶ್ರಯದಿಂದಾಗಿ ಈ ಸ್ಥಳಕ್ಕೆ ಭೈರವಪುರ ಎಂದು ಕರೆಯುತ್ತಿದ್ದರು. ಕ್ರಮೇಣ ಬೈರಾಪುರ ಎಂದು ಕರೆಯಲ್ಪಟ್ಟಿತು.

ಗ್ರಾಮದ ಕಲ್ಲಿನಲ್ಲಿ ಒಡಮೂಡಿದ ರಾಮನ ಪಾದುಕೆಗಳಿವೆ‌. ರಾಮ ಡೋಣಿ (ಹೊಂಡ) ಬೇಸಿಗೆಯಲ್ಲಿಯೂ  ತುಂಬಿರುತ್ತದೆ. ರಾಮಮಂದಿರವು ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ. ವಸತಿ ಗೃಹ ಸೇರಿ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಮರ್ಪಕವಾಗಿ ಬಸ್ ವ್ಯವಸ್ಥೆ ಆಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT