ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ: ಕೊಪ್ಪಳ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಸೂಚನೆ

Published 27 ಆಗಸ್ಟ್ 2024, 14:43 IST
Last Updated 27 ಆಗಸ್ಟ್ 2024, 14:43 IST
ಅಕ್ಷರ ಗಾತ್ರ

ಅಳವಂಡಿ: ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರ ಜನಸ್ಪಂದನ ಕಾರ್ಯಕ್ರಮ ಜಾರಿಗೊಳಿಸಿದೆ. ಹಾಗಾಗಿ ಜಿಲ್ಲಾಡಳಿತವು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು.‌ 2023ರ ಸೆಪ್ಟೆಂಬರ್‌ನಿಂದ ನಡೆದ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸ್ವೀಕೃತಿಯಾದ ಒಟ್ಟು 1,770 ಅರ್ಜಿಗಳ ಪೈಕಿ 1,582 ಅರ್ಜಿಗಳನ್ನು ವಿಲೇಗೊಳಿಸಿ ಜಿಲ್ಲಾಡಳಿತವು ಉತ್ತಮ ಕಾರ್ಯ ಮಾಡಿದೆ. ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ’ ಎಂದು ತಿಳಿಸಿದರು.

ಮನವಿಗಳು: ಅಳವಂಡಿಯ ಡಾ.ಬಿ.ಆರ್ ಅಂಬೇಡ್ಕರ್ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಡಿ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿ, ಹೋಬಳಿ ವ್ಯಾಪ್ತಿಯಲ್ಲಿ ಅನೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ ಇವುಗಳನ್ನು ಸರಿಪಡಿಸಿ, ಹಕ್ಕು ಪತ್ರ ವಿತರಣೆಯಾಗಿಲ್ಲ. ಆಯುಷ್ ಚಿಕಿತ್ಸಾಲಯ ಪ್ರಾರಂಭಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ, ಪಿಎಚ್‌ಸಿಗೆ ವೈದ್ಯಾಧಿಕಾರಿ ಕೊರತೆ ನೀಗಿಸಿ, ಸಿದ್ದೇಶ್ವರ ನಗರದಲ್ಲಿ ಸೂಕ್ತ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ, ಬಾಲಕಿಯರ ಶಾಲೆಯ ಶೌಚಾಲಯ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರಾದ ಸಿದ್ದಲಿಂಗಸ್ವಾಮಿ ಇನಾಮದಾರ, ಗುರು ಬಸವರಾಜ ಹಳ್ಳಿಕೇರಿ, ಅನ್ವರ್ ಗಡಾದ, ಸತೀಶ, ಶರಣಪ್ಪ, ಸಾಗರ, ರಾಮಕೃಷ್ಣ, ಚಂದ್ರಪ್ಪ, ಅಶೋಕ, ಮೈಲಾರಪ್ಪ, ಶಂಕ್ರಪ್ಪ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

ಬಸ್ ನಿಲ್ದಾಣ ನಿರ್ಮಾಣ, ರಸ್ತೆ ಅಭಿವೃದ್ಧಿ, ಶಾಲಾ ಕೊಠಡಿ ನಿರ್ಮಾಣ ಮಾಡುವುದರ ಬಗ್ಗೆ, ಆಶ್ರಯ ಯೋಜನೆಯ ಮನೆಯ ಬಿಲ್ ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ವಿವಿಧ ಗ್ರಾಮಸ್ಥರು ಸಲ್ಲಿಸಿದರು.

ಕೊಪ್ಪಳ-ಮುಂಡರಗಿ ಮಧ್ಯದ ರಸ್ತೆ ಸೇರಿದಂತೆ ಬೇರೆ ಬೇರೆ ರಸ್ತೆಗಳನ್ನು ಮೊದಲಾದ್ಯತೆಯ ಮೇರೆಗೆ ದುರಸ್ತಿ ಮಾಡಬೇಕು. ವಿವಿಧೆಡೆಯ ಶಾಲೆಗಳಲ್ಲಿನ ಬಿಸಿ ಊಟದ ಕೋಣೆ ಸರಿಪಡಿಸಬೇಕು ಎನ್ನುವುದು ಸೇರಿದಂತೆ ಬೇರೆ ಬೇರೆ ಬೇಡಿಕೆಯ ಒಟ್ಟು 192 ಅರ್ಜಿಗಳು ಇದೆ ಸಂದರ್ಭದಲ್ಲಿ ಸ್ವೀಕೃತವಾದವು.

ವಸತಿ ನಿಲಯಕ್ಕೆ ಭೇಟಿ: ಅಳವಂಡಿ ಗ್ರಾಮದಲ್ಲಿನ ಬಿಸಿಎಂ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಮಹಿಳೆಯರ ವಸತಿ ನಿಲಯಕ್ಕೆ ಸಹ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಿಇಓ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ , ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ , ಗ್ರಾ.ಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ್ , ಉಪಾಧ್ಯಕ್ಷೆ ಶಾರಮ್ಮ ಇಳಗೇರಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಶೀಲ್ದಾರ್ ವಿಠ್ಠಲ್ ಚೌಗಲಾ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ತಾ.ಪಂ ಇಒ ದುಂಡಪ್ಪ ತುರಾದಿ, ಸಿಪಿಐ ಸುರೇಶ ಹಾಗೂ ಇತರರು ಇದ್ದರು.

ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದ ಸಾವಯುವ ಕೃಷಿಕ ಮಲ್ಲಪ್ಪ ಡಂಬಳ ಅವರು ಜಮೀನಿಗೆ ಡಿಸಿ ನಲಿನ್ ಅತುಲ್ ಹಾಗೂ ಸಿಇಒ ರಾಹುಲ್ ರತ್ನಂ ಪಾಂಡೆಯ ಭೇಟಿ ನೀಡಿದರು
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದ ಸಾವಯುವ ಕೃಷಿಕ ಮಲ್ಲಪ್ಪ ಡಂಬಳ ಅವರು ಜಮೀನಿಗೆ ಡಿಸಿ ನಲಿನ್ ಅತುಲ್ ಹಾಗೂ ಸಿಇಒ ರಾಹುಲ್ ರತ್ನಂ ಪಾಂಡೆಯ ಭೇಟಿ ನೀಡಿದರು

ಸಾವಯವ ತೋಟಕ್ಕೆ ಭೇಟಿ

ಬೆಳಗಟ್ಟಿ ಗ್ರಾಮದ ಸಾವಯವ ಕೃಷಿಕ ಮಲ್ಲಪ್ಪ ಡಂಬಳ ಹಾಗೂ ನಿಂಗಪ್ಪ ಚಿಲವಾಡಗಿ ಅವರ ತೋಟಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಕೃಷಿ ತೋಟಗಾರಿಕಾ ಇಲಾಖೆಯ ಅನುದಾನದ ಸಹಾಯದಿಂದ ವಿವಿಧ ಕೃಷಿ ಪದ್ಧತಿ ನಡೆಸುತ್ತಿರುವುದನ್ನು ತೋರಿಸಿದರು. ಕೃಷಿ ಜೊತೆಗೆ ಪಶುಪಾಲನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ವಿವರಿಸಿದರು. ರೈತನ ತೋಟದಲ್ಲಿ ಭೋಜನ: ಮಧ್ಯಾಹ್ನ ವೇಳೆಗೆ ಡಿಸಿ ಜಿಪಂ ಸಿಇಒ ಅವರೊಂದಿಗೆ ಬೆಳಗಟ್ಟಿ ಗ್ರಾಮದ ಸಾವಯವ ಕೃಷಿಕ ಮಲ್ಲಪ್ಪ ಡಂಬಳ ಅವರ ತೋಟಕ್ಕೆ ತೆರಳಿ ರೈತರೊಂದಿಗೆ ಊಟ ಮಾಡಿದರು. ಸಜ್ಜಿರೊಟ್ಟಿ ತರಿಕಾರಿ ಪಲ್ಯ ಪಾಯಸ ಸೇರಿದಂತೆ ಸಿರಿ ಧಾನ್ಯಗಳಿಂದ ಅಡುಗೆ ಸಿದ್ಧಪಡಿಸಿ ಬಡಿಸಿದ್ದು ವಿಶೇಷವಾಗಿತ್ತು. ಇಫ್ಕೊ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋಣ್‌ ಪ್ರಾತ್ಯಕ್ಷಿಕೆಯ ವೀಕ್ಷಣೆ ನಡೆಸಿದರು. ವೀಣಾ ಮೌನೇಶ ಕಮ್ಮಾರ ಅವರು ಡ್ರೋಣ್‌ ಪೈಲಟ್ ಚಲಾಯಿಸಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT