ಶನಿವಾರ, ಮೇ 21, 2022
27 °C
ಆಡಳಿತ-, ಕಾರ್ಖಾನೆ ಮಾಲೀಕರ ಮಧ್ಯೆ ನಲುಗುತ್ತಿರುವ ಜನತೆ

ಕೊಪ್ಪಳ: ಹದಗೆಟ್ಟು ಹೋದ ರಸ್ತೆ ದುರಸ್ತಿಗೆ ಮೀನಮೇಷ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ರಸ್ತೆಯೊಂದು ದಶಕಗಳಿಂದ ಹಾಳಾಗಿದ್ದರೂ ರಸ್ತೆಯ ದುರವಸ್ಥೆಗೆ ಕಾರಣವಾದ ಕಾರ್ಖಾನೆಗಳು ಮತ್ತು ಜಿಲ್ಲಾಡಳಿತವು ದುರಸ್ತಿಗೆ ಮುಂದಾಗದೇ ಜನರ ಬದುಕು ನರಕ ಸದೃಶ್ಯ ಮಾಡಲಾಗಿದೆ.

ತಾಲ್ಲೂಕಿನ ಗಿಣಗೇರಾ, ಹಾಲವರ್ತಿ, ಹಿರೇಬಗನಾಳ, ಕಾಸನಕಂಡಿ, ಹೊಸಳ್ಳಿ ಸೇರಿದಂತೆ 27 ಕಿ.ಮೀ ರಸ್ತೆಯ ಕಣ್ಣೀರಿನ ಕಥೆ ಇದು. ಭಾರವಾದ ಕಲ್ಲು, ಕಡಿ, ಕಬ್ಬಿಣ, ಸ್ಟೀಲ್‌, ಉಕ್ಕು, ಮಣ್ಣು, ಮರಳು ಸೇರಿದಂತೆ ನಾನಾ ರೀತಿಯ ಕಚ್ಚಾ ಪದಾರ್ಥಗಳನ್ನು ಸಾಗಿಸುವ  600ಕ್ಕೂ ಹೆಚ್ಚು ಲಾರಿಗಳು ಇಲ್ಲಿ ದಿನನಿತ್ಯ ಓಡಾಡುತ್ತಿವೆ.

ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ನಿತ್ಯ ದೂಳಿನ ಮಜ್ಜನವಾಗುತ್ತಿದೆ. ಅಲ್ಲದೆ ರೋಗರುಜಿನಗಳ ಆವಾಸ ಸ್ಥಾನವಾಗಿದೆ. ಈ ರಸ್ತೆಯನ್ನು ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಸರ್ವ ಋತು ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ನಿರ್ಮಾಣ ಮಾಡಬೇಕು ಎಂದು ಅನೇಕರು ಒತ್ತಡ ಹಾಕಿದರೂ ಪ್ರಯೋಜನವಾಗಿಲ್ಲ.

ಜಿಲ್ಲಾಡಳಿತ ಈ ಹಿಂದೆ ಅನೇಕ ಬಾರಿ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಇದಕ್ಕೆ ಕಾರ್ಖಾನೆ ಮಾಲೀಕರು ನೀಡುವ ಕಾರಣ, ನಮಗೆ ಎಲ್ಲ ಮೂಲಸೌಕರ್ಯ ಕಲ್ಪಿಸುವುದಾಗಿ ಮತ್ತು ಉದ್ಯಮಸ್ನೇಹಿ ವಾತಾವರಣ ರೂಪಿಸುವುದಾಗಿ ಭರವಸೆ ನೀಡಿದ್ದೀರಿ, ಕೋಟ್ಯಂತರ ವೆಚ್ಚದ ನಿರ್ವಹಣೆ ಇರುವುದರಿಂದ ನಮಗೆ ಆಗುವುದಿಲ್ಲ ಎಂದು ಕೈಚೆಲ್ಲಿದ್ದಾರೆ.

ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸುಮ್ಮನಾಗಿದೆ. ಶಾಸಕ, ಸಂಸದರೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಇದೆಲ್ಲದರ ಪರಿಣಾಮವಾಗಿ ಈ ಭಾಗದ 10ಕ್ಕೂ ಹೆಚ್ಚು ಗ್ರಾಮಗಳ ಜನರ ಪರಿಸ್ಥಿತಿ ಯಾತನಮಯವಾಗಿ ಪರಿಣಮಿಸಿದೆ.

ಅನೇಕ ಬಾರಿ ಹೋರಾಟ, ರಸ್ತೆ ತಡೆ, ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಈ ರಸ್ತೆಯ ಅಧ್ವಾನದ ಬಗ್ಗೆ ಸ್ವತಃ ಸಾರಿಗೆ ಇಲಾಖೆ ಅಧಿಕಾರಿಗಳು ಸುಧೀರ್ಘವಾದ ಪ್ರಸ್ತಾವವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ 6 ಕಿಮೀ ವ್ಯಾಪ್ತಿಯಲ್ಲಿ ನಿತ್ಯ ನೂರಾರು ಲಾರಿ ಸಂಚರಿಸುತ್ತಿವೆ. 50 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು, ಕಾರ್ಮಿಕರು, ಸವಾರರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ ಎಂದು ಹೇಳಿದೆ.

ಅಲ್ಲದೆ ಭಾರವಾದ ಲಾರಿಗಳ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ. ಮುನಿರಾಬಾದ್ ಸಮೀಪದ ಹೊಸಳ್ಳಿಯ ಪೊಲೀಸ್‌ ತರಬೇತಿ ಕೇಂದ್ರದ ಮಗ್ಗಲು ಅವಕಾಶವಿಲ್ಲದಿದ್ದರೂ ಟೋಲ್‌ ತಪ್ಪಿಸಲು ಈ ಮಾರ್ಗದ ಮೂಲಕ ನೂರಾರು ಲಾರಿ ಸಂಚರಿಸಿ ವಾಹನಗಳು ಹೋಗಲಾರದಷ್ಟು ಅವ್ಯವಸ್ಥೆಗೆ ತಂದಿದ್ದಾರೆ. ಇದನ್ನು ನಿಷೇಧ ಮಾಡಬೇಕು ಎಂದು ಪತ್ರ ಬರೆದಿದ್ದಾರೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳ ಮೂಲಕ ಜಾರಿ ಮಾಡಲಾಗಿತ್ತು. ಆದರೆ ಈ ಪತ್ರವನ್ನು ಕಾರ್ಖಾನೆಗಳ ಮಾಲೀಕರು ಒಂದೇ ದಿನದಲ್ಲಿ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು