ಶನಿವಾರ, ಜನವರಿ 28, 2023
13 °C
ಕಾರಟಗಿಯಲ್ಲಿ ಸಮುದಾಯ ಭವನದ ನೆನಪು, ಜಿಲ್ಲೆಯೊಂದಿಗೆ ಸಿದ್ದೇಶ್ವರ ಶ್ರೀ ಬಾಂಧವ್ಯ

ದೇವಿಗುಡ್ಡದ ವಾಸಕ್ಕೆ ಮನಸೋತಿದ್ದ ಸಿದ್ದೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಗೆ ಕೆಲ ಬಾರಿ ಭೇಟಿ ನೀಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ನೆನಪು ಜಿಲ್ಲೆಯ ಜನರಲ್ಲಿ ಈಗಲೂ ಅಚ್ಚಳಿಯದೇ ಉಳಿದುಕೊಂಡಿವೆ. ಇಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ 2002ರಲ್ಲಿ ಗಂಗಾವತಿಯ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಹಾಗೂ 2014ರ ಜ. 1ರಿಂದ ಫೆ. 2ರ ತನಕ ಕಾರಟಗಿಯ ಪಬ್ಲಿಕ್‌ ಶಾಲೆಯ ಮೈದಾನದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಪ್ರವಚನ ನೀಡಿದ್ದರು. ಹತ್ತು ವರ್ಷಗಳ ಹಿಂದೆ ಗವಿಮಠದಲ್ಲಿ ಒಂದು ಪ್ರವಚನ ಕೊಟ್ಟಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮತ್ತು ಶಿವಶಾಂತವೀರ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಭಕ್ತ ಕಾರಟಗಿಯ ಬಸವರಾಜ ಪಗಡಿದಿನ್ನಿ ‘ಸಿದ್ದೇಶ್ವರ ಸ್ವಾಮೀಜಿ ಕಾರಟಗಿಯಲ್ಲಿ ಒಂದು ತಿಂಗಳು ಪ‍್ರವಚನ ಮಾಡಿದ್ದರು. ಸರ್ವ ಸಮಾಜದ ಜನ ಭಾಗಿಯಾಗಿದ್ದರು. ಆಗ ದೇವಿಕ್ಯಾಂಪ್‌ನಲ್ಲಿ ದೇವಿಗುಡ್ಡದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಜಾಗ ಅವರಿಗೆ ಬಹಳಷ್ಟು ಮೆಚ್ಚುಗೆಯಾಗಿತ್ತು. ದಿನಕ್ಕೆ ಎರಡು ಬಾರಿ ವಾಕಿಂಗ್‌ ಮಾಡುತ್ತಿದ್ದರು. ದೇವಿಗುಡ್ಡದಲ್ಲಿ ನಿತ್ಯ ಭಕ್ತರಿಗೆ ಊಟ ಬಡಿಸುತ್ತಿದ್ದರು’ ಎಂದು ನೆನಪಿಸಿಕೊಂಡರು. 

‘ಪ್ರವಚನ ನಡೆದ ಜಾಗದಲ್ಲಿ ಒಂದು ತಿಂಗಳ ಅವಧಿಯಲ್ಲಿ ರಂಗಮಂದಿರ ನಿರ್ಮಿಸಿ ಸಿದ್ದೇಶ್ವರ ಸ್ವಾಮೀಜಿ ಹೆಸರು ನಾಮಕರಣ ಮಾಡಲಾಗಿದೆ. ಅವರಿಂದಲೇ ಉದ್ಘಾಟನೆ ಮಾಡಿಸಲಾಗಿತ್ತು ಎನ್ನುವುದು ವಿಶೇಷ’ ಎಂದು ನೆನಪು ಹಂಚಿಕೊಂಡರು.

ಶ್ರದ್ಧಾಂಜಲಿ: ನಗರದ ಬಸವೇಶ್ವರ ಸರ್ಕಲ್‌ನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಂಗಳವಾರ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿ ‘ಸ್ವಾಮೀಜಿ ಅಧ್ಯಾತ್ಮಕ ಪ್ರವಚನಗಳಿಂದ ಹಾಗೂ ಸರಳತೆಯಿಂದ ಜಗತ್ತಿಗೇ ಪ್ರಸಿದ್ಧರಾಗಿದ್ದರು. ಭಕ್ತವೃಂದಕ್ಕೆ ನೋವು ಭರಿಸುವ ಶಕ್ತಿ ಸಿಗಲಿ’ ಎಂದು ಪ್ರಾರ್ಥಿಸಿದರು.

ಪ್ರಸನ್ನ ಗಡಾದ, ಶಿವಕುಮಾರ ಶೆಟ್ಟರ್, ಬಸವರಾಜ ಬಳ್ಳೊಳ್ಳಿ, ಮಹೇಶ ಮಿಟ್ಲಕುಡ್, ರಾಜೇಶ ಶಶಿಮಠ ಪಾಲ್ಗೊಂಡಿದ್ದರು.

ಪ್ರಶಸ್ತಿ ಕೊಡಲಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ‘ನಡೆದಾಡುವ ದೇವರು ಹಲವು ದಶಕಗಳ ಕಾಲ ಸೇವೆ ಮಾಡಿ, ಶಿಕ್ಷಣ ನೀಡಿ ಲಕ್ಷಾಂತರ ಜನರಿಗೆ ಹೊಸ ಬದುಕು ಕೊಟ್ಟ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು. ಅವರು ಜೇಬಿಲ್ಲದ ಸಂತ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ನಡೆದವರು’ ಎಂದು ಸ್ಮರಿಸಿದರು.

ಮುಖಂಡರಾದ ಸೌಭಾಗ್ಯಲಕ್ಷ್ಮೀ ಗೊರವರ್, ಅಂಬಿಕಾ ನಾಗರಾಳ, ಕಾವೇರಿ, ರೂಪಾ ಬಂಗಾರಿ, ಅನಿತಾ ಬಂಗಾರಿ, ರೇಣುಕಾ ಹುಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು