ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

89ನೇ ವಯಸ್ಸಿನಲ್ಲಿ ಪಿ.ಎಚ್‌ಡಿಗೆ ತಯಾರಿ...!

ಇಳಿ ವಯಸ್ಸಿನಲ್ಲೂ ಬತ್ತದ ಸ್ವಾತಂತ್ರ್ಯ ಯೋಧನ ಉತ್ಸಾವ
Last Updated 6 ಸೆಪ್ಟೆಂಬರ್ 2018, 3:57 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಸ್ವಾತಂತ್ರ್ಯ ಯೋಧ ಶರಣಬಸವರಾಜ ವೀರಬಸಪ್ಪ ಬಿಸರಳ್ಳಿ ಅವರು ತಮ್ಮ 89ನೇ ವಯಸ್ಸಿನಲ್ಲಿ ಪಿ.ಎಚ್‌ಡಿ ಪಡೆಯಲು ಪ್ರವೇಶ ಪರೀಕ್ಷೆ ಬರೆದಿದ್ದು ಯುವಕರನ್ನು ನಾಚಿಸುವಂತೆ ಮಾಡಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದವಚನ, ದಾಸ ಸಾಹಿತ್ಯ ದೃಷ್ಟಿಯಲ್ಲಿ ಇಟ್ಟುಕೊಂಡು ಸಂಶೋಧನಾ ಪ್ರಬಂಧ ಮಂಡನೆಗೆ ಪ್ರವೇಶ ಪರೀಕ್ಷೆ ಬರೆದಿದ್ದು, ಅವರಲ್ಲಿನ ಕಲಿಯುವ ಉತ್ಸಾಹಕ್ಕೆ ಸಾಟಿಯೇ ಇಲ್ಲದಂತಾಗಿದೆ.

ನಿವೃತ್ತರಾದ ನಂತರ ಸಂತೃಪ್ತ ಜೀವನಕ್ಕೆ ಪರದಾಡುವ ಹಿರಿಯ ಜೀವಗಳ ಮಧ್ಯೆ ಬಿಸರಳ್ಳಿ ಅವರ ಜೀವನೋತ್ಸಾಹ ಎಂತವರಲ್ಲಿ ಅದಮ್ಯ ಚೇತನ ಮೂಡಿಸಿದೆ. 1929ರಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹೋರಾಟ ಮಾಡಿದ ಹಿರಿಯರು.

1951ರಲ್ಲಿ ತಾಲ್ಲೂಕಿನ ಕವಲೂರ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಬಿಸರಳ್ಳಿ ಅವರು 1992ರಲ್ಲಿ ನಿವೃತ್ತಿಯಾದರು. ವೃತ್ತಿ ಜೀವನವನ್ನು ಪಾಠ-ಪ್ರವಚನದಲ್ಲಿ ಕಳೆದು ಅಪಾರ ವಿದ್ಯಾರ್ಥಿ ಸಮೂಹವನ್ನೇ ಗಳಿಸಿಕೊಂಡು ಸಂತೃಪ್ತ ಜೀವನ ನಡೆಸಿದ್ದರು. ಆದರೆ ಅವರಲ್ಲಿ ಕಲಿಯುವ ತುಡಿತ ಮಾತ್ರ ನಿಲ್ಲಲಿಲ್ಲ.

ಧಾರವಾಡ ವಿವಿಯಿಂದ ಕಾನೂನು ಪದವಿ, ಕನ್ನಡದಲ್ಲಿ ಎಂ.ಎ ಮತ್ತು ಹಂಪಿ ವಿವಿಯಿಂದ ಮತ್ತೊಂದು ಎಂ.ಎ.ಪದವಿಯನ್ನು ಪಡೆದಿದ್ದಾರೆ. ಪಿ.ಎಚ್‌ಡಿ ಮಾಡಬೇಕು ಎಂಬ ಅವರ ಆಶೆ ಇನ್ನೂ ಕೈಗೂಡದೇ ಇರುವುದರಿಂದ ಈಗ ಸಿಇಟಿ ಬರೆದಿದ್ದಾರೆ.

ಈ ಕುರಿತು ಪತ್ರಿಕೆ ಪ್ರತಿನಿಧಿ ಅವರನ್ನು ಭೇಟಿ ಮಾಡಿದಾಗ 'ಓದುವುದು ಒಂದು ಹವ್ಯಾಸವಾಗಿದೆ.ಅನೇಕ ಲೇಖನ, ಕವನ ರಚಿಸಿದ್ದು, ಅವುಗಳ ಮೌಲ್ಯ ಹೆಚ್ಚಳಕ್ಕೆ ಈಗ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆಯಬೇಕು ಎಂಬ ಆಶೆ ಇದೆ' ಎಂದು ಹೇಳಿದರು.

ಬಿಎ, ಬಿಇಡಿ, ಎಂ.ಎ (ಕನ್ನಡ-ಸಂಸ್ಕೃತ-ಹಿಂದಿ), ಇಂಗ್ಲಿಷ್ ಎಂ.ಎ ಅಪೂರ್ಣಗೊಂಡಿದೆ. ಪಿಎಚ್‌ಡಿಗಾಗಿ ಶೇ 55ರಷ್ಟು ಅಂಕ ಪಡೆದು ಸಿಇಟಿ ಬರೆಯುವುದು ಕಡ್ಡಾಯ. ಆದರೆ ಎಲ್ಲ ಎಂ.ಎಗಳಲ್ಲಿ ಶೇ 50ಕ್ಕಿಂತ ಕಡಿಮೆ ಬಂದಿದ್ದರಿಂದ ಹಂಪಿ ವಿವಿಯಲ್ಲಿ ಭಾಷಾ ವಿಜ್ಞಾನ ಸನ್ಮಾತಕೋತ್ತರ ಪದವಿ ಪಡೆದು ಶೇ 60ರಷ್ಟು ಅಂಕ ಗಳಿಸಿ ಈಗ ಪಿಎಚ್‌ಡಿಗೆ ಸಿದ್ಧನಾಗಿದ್ದೇನೆ' ಎಂದು ನಗುತ್ತಲೇ ಹೇಳಿದರು.

'ಈಗ ಪರೀಕ್ಷೆ ಬರೆದಿದ್ದು, ಉತ್ತಮ ಅಂಕ ಬರುವ ನಿರೀಕ್ಷೆ ಇದೆ. ಒಳ್ಳೆಯ ಮಾರ್ಗದರ್ಶಕರು ಸಿಕ್ಕರೆ ಎಲ್ಲರಿಗೂ ಅಭ್ಯಾಸಪೂರ್ಣವಾದ ಸಂಶೋಧನಾ ಕೃತಿ ರಚಿಸುವ ಹಂಬಲ ಇದೆ' ಎಂದು ಹೇಳಿದರು.

ಆರೋಗ್ಯದ ಗುಟ್ಟು: ಮಿತ ಆಹಾರ, ದುಶ್ಚಟವಿಲ್ಲದ ಬದುಕು, ಸರಳ ಜೀವನ ಸಾಗಿಸುತ್ತಿರುವ ಈ ಹಿರಿಯರು ಈಗಲೂ ಕನ್ನಡಕದ ಸಹಾಯವಿಲ್ಲದೆ ಓದು, ಬರಹ ಅಚ್ಚರಿ ಮೂಡಿಸುತ್ತಿದೆ. ಇವರ ಸಾಹಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಚ್ಚು, ಹೆಚ್ಚು ಜನ ನೋಡಿ ಸ್ಫೂರ್ತಿಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT