ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಹಳ್ಳಿ: ಅನುಭವದ ಮೂಟೆ ಹೊತ್ತು ತಂದ ಯೋಧ

ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಗುರುರಾಜ
Last Updated 12 ಜುಲೈ 2021, 3:04 IST
ಅಕ್ಷರ ಗಾತ್ರ

ಹೊಸಹಳ್ಳಿ (ಮುನಿರಾಬಾದ್): ಭಾರತೀಯ ಸೇನೆಯಲ್ಲಿ ಸುಮಾರು 24 ವರ್ಷ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧ ಗುರುರಾಜ ದೇಶಪಾಂಡೆ ಅವರನ್ನು ಸ್ನೇಹಿತರು ಅದ್ಧೂರಿಯಾಗಿ ಸ್ವಾಗತಿಸಿದರು. ಕುಟುಂಬದವರು ಆರತಿ ಬೆಳಗಿ ಬರಮಾಡಿಕೊಂಡರು.

ಸಮೀಪದ (ಹುಲಿಗಿ) ಹೊಸಹಳ್ಳಿ ಗ್ರಾಮದ ಸುಮಿತ್ರಾಬಾಯಿ ಗುಂಡೇರಾವ್ ದೇಶಪಾಂಡೆ ದಂಪತಿಯ 6 ಮಕ್ಕಳಲ್ಲಿ ಗುರುರಾಜ ಕೊನೆಯವರು. ಮೂವರು ಸಹೋದರಿಯರು, ಇಬ್ಬರು ಸಹೋದರರ ವಾತ್ಸಲ್ಯದಲ್ಲಿ ಬೆಳೆದ ಅವರು ಶಾಲಾ ದಿನಗಳಲ್ಲೇ ಸೇನೆ ಸೇರುವ ಕನಸು ಕಂಡಿದ್ದರು. ದೆಹಲಿಯಲ್ಲಿ ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತಾನು ಇರಬೇಕು ಎಂದು ಸಂಕಲ್ಪ ತೊಟ್ಟ ಗುರುರಾಜ ಅದೇ ಹುಮ್ಮಸ್ಸಿನಲ್ಲಿ ತಯಾರಿ ನಡೆಸಿದ್ದರು. ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಸಮೀಪದ ಅಗಳಕೇರಾ ಗ್ರಾಮದಲ್ಲಿ ಪೂರೈಸಿ, ಹಿಟ್ನಾಳ ಗ್ರಾಮದಲ್ಲಿ ಪ್ರೌಢ ಶಿಕ್ಷಣ ಪಡೆದರು. ಅದೇ ಗ್ರಾಮದ ಪ್ರೌಢಶಾಲಾ ಶಿಕ್ಷಕ ಎ.ಎನ್.ಆರ್ಶಿ ಅವರು ನೀಡಿದ ಪ್ರೋತ್ಸಾಹ, ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಬೇಗ ಉದ್ಯೋಗ ಪಡೆಯಬೇಕೆಂಬ ಹಂಬಲದಿಂದ ಐಟಿಐ ಶಿಕ್ಷಣ ಪಡೆದರು. ಮುಂದುವರಿದು ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದರು. ತಮ್ಮ ಜೀವನದ ಗುರಿಯನ್ನು ಮತ್ತೊಮ್ಮೆ ನೆನಪಿಸಿಕೊಂಡ ಗುರುರಾಜ ಸೈನ್ಯ ಸೇರುವ ಕನಸಿನತ್ತ ಮತ್ತೆ ಹೊರಳಿದರು.

‘ಸೈನ್ಯ ಸೇರುವ ಅವಕಾಶ ಬಂದಾಗ ಕುಟುಂಬದ ಎಲ್ಲರೂ ಸಹಕಾರ ನೀಡಿದರು’ ಎನ್ನುತ್ತಾರೆ ಗುರುರಾಜ.

1997 ರ ಜೂನ್ ತಿಂಗಳಿನಲ್ಲಿ ತಮ್ಮ 19 ರ ಹರೆಯದಲ್ಲಿ ‘ಮರಾಠ ಲೈಟ್ ಇನ್ ಫೆಂಟ್ರಿ’ ಘಟಕದಲ್ಲಿ ಸೈನಿಕರಾಗಿ ಸೇವೆಗೆ ಸೇರಿದರು. ಕಠಿಣ ಪರಿಶ್ರಮದಿಂದ ಸೇನೆಯಲ್ಲಿ ನಾಯಕ್ ಮತ್ತು ಹವಾಲ್ದಾರ್ ಹುದ್ದೆಗೆ ಬಡ್ತಿ ಪಡೆದರು.

ಜಮ್ಮು ಮತ್ತು ಕಾಶ್ಮೀರದ ಜಂಗಡ, ನೌಶೇರಾ ಸೆಕ್ಟರ್, ಸಿಯಾಚಿನ್ ಗ್ಲೇಸಿಯರ್, ದ್ರಾಸ್, ಪಂಜಾಬ್‌ನ ಕಪುರ್ತಲಾ, ಗುಜರಾತಿನ ಜಾಮ್ ನಗರ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ತರಬೇತಿ ಮತ್ತು ಗಡಿಗಳಲ್ಲಿ ಕರ್ತವ್ಯ ನಿರ್ವಹಿಸಿದ ಕುರಿತು ಅನುಭವ ಹಂಚಿಕೊಂಡರು.

ನೈವ್ ಸುಬೇದಾರ್ ಹುದ್ದೆ ನಿರ್ವಹಿಸಿ ಕಳೆದ ಜೂನ್ 30 ರಂದು ನಿವೃತ್ತಿ ಪಡೆದರು.

ದೇಶ ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅವರನ್ನು ಸಂಬಂಧಿಕರಾದ ಶ್ರೀನಿವಾಸ ದೇಸಾಯಿ, ವೆಂಕಟೇಶ ಜೋಶಿ ಅಭಿನಂದಿಸಿದ್ದಾರೆ.

ಗುರುರಾಜ ದೇಶಪಾಂಡೆ ಅವರ ಸಂಪರ್ಕ ಸಂಖ್ಯೆ 88841 68123.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT